ಚೆನ್ನೈ, ನ 29 (ಯುಎನ್ಐ) ಸೂಪರ್ಸ್ಟಾರ್ ರಜನಿಕಾಂತ್ ಅವರು ನಾಳೆ ರಜಿನಿ ಮಕ್ಕಳ್ ಮಂದಿರಂ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಾಲ್ಕೈದು ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲಿದ್ದಾರೆ.
ಸಭೆಯು ಅವರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಆರ್ ಎಂಎಂ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ರಜಿನಿಕಾಂತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ರಜನೀಕಾಂತ್ ಅವರಿಂದ ಸ್ಪಷ್ಟ ನಿಲುವನ್ನು ರಜಿನಿ ಮಕ್ಕಳ್ ಮಂದಿರಂ ಪದಾಧಿಕಾರಿಗಳು ನಿರೀಕ್ಷಿಸಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸಿ, ಹೊಸ ಪಕ್ಷವನ್ನು ಸ್ಥಾಪಿಸುವ ಕುರಿತು ಮತ್ತು 2021 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 234 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ 2018 ರ ಹೊಸ ವರ್ಷದ ಮುನ್ನಾದಿನದಂದು ರಜಿನಿಕಾಂತ್ ಘೋಷಿಸಿದ್ದರು. ಅಲ್ಲದೆ, 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಂದಿನಿಂದ ಅವರ ಅಭಿಮಾನಿಗಳು ಇದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ರಜಿನಿಕಾಂತ್ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಇನ್ನೂ ಪ್ರಕಟಿಸಿಲ್ಲ.
ಯುಎನ್ಐ ಎಸ್ಎಲ್ಎಸ್ 1639