Wednesday, Jul 15 2020 | Time 04:54 Hrs(IST)
Sports Share

ಐಎಸ್ ಎಲ್: ಅಂಕ ಪಟ್ಟಿಯಲ್ಲಿ ಬಡ್ತಿಯ ಮೇಲೆ ಬಿಎಫ್ ಸಿ ಕಣ್ಣು

ಬೆಂಗಳೂರು, ನ.22 (ಯುಎನ್ಐ)-ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಬೆಂಗಳೂರು ಎಫ್.ಸಿ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವದರ ಮೇಲೆ ಸುನಿಲ್ ಛೆಟ್ರಿ ತಂಡ ಚಿತ್ತ ನೆಟ್ಟಿದೆ.
ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಒಂದು ಜಯ ಹಾಗೂ ಮೂರು ಡ್ರಾ ಸಾಧಿಸಿರುವ ಬೆಂಗಳೂರು ತಂಡ ಆರು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪೂರ್ಣ ಅಂಕ ಕಲೆ ಹಾಕುವ ಕನಸು ಬ್ಲ್ಯೂ ಬಾಯ್ಸ್ ತಂಡದ್ದಾಗಿದೆ. ಕೇರಳಾ ಬ್ಲಾಸ್ಟರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕ ಕಲೆ ಹಾಕಿದ್ದು, ಏಳನೇ ಸ್ಥಾನದಲ್ಲಿದೆ.
ಚೆನ್ನೈ ಎಫ್.ಸಿ ವಿರುದ್ಧ ತವರಿನಲ್ಲಿ ಭರ್ಜರಿ ಜಯ ದಾಖಲಿಸಿರುವ ಬೆಂಗಳೂರು ತಂಡ ಮತ್ತೊಂದು ಗೆಲುವಿನ ತೋರಣ ಕಟ್ಟಲು ಸಿದ್ಧತೆ ನಡೆಸಿದೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಬಿಎಫ್ ಸಿ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆರಂಭದಲ್ಲಿ ಗೋಲು ದಾಖಲಿಸಿ ಎದುರಾಳಿ ತಂಡಕ್ಕೆ ಪೆಟ್ಟು ನೀಡುವ ಆಸೆ ಸುನಿಲ್ ಪಡೆಯದ್ದಾಗಿದೆ.
ಬೆಂಗಳೂರು ಪರ ಎರಿಕ್ ಪಾರ್ತಲು, ಸೆಂಬೊಯ್ ಹಾಕಿಪ್ ತಲಾ ಒಂದು ಗೋಲು ಸಿಡಿಸಿದ್ದಾರೆ. ಆತಿಥೇಯ ತಂಡದ ಗೋಲ್ ಕೀಪರ್ ಗುರ್ ಪ್ರಿತ್ ಸಿಂಗ್ ಸಂಧು ನಾಲ್ಕು ಪಂದ್ಯಗಳಲ್ಲಿ ಏಳು ಗೋಲುಗಳನ್ನು ಉಳಿಸಿದ್ದಾರೆ.
ಕೇರಳ ತಂಡದ ಪರ ಬಾರ್ತಲೋಮೆವ್ ಒಗ್ಬೆಚೆ ಗೋಲು ಗಳಿಕೆಯಲ್ಲಿ ಮುನ್ನಡೆ ಹೊಂದಿದ್ದಾರೆ. ಗೋಲ್ ಗಳನ್ನು ತೆಡಯುವ ವಿಚಾರದಲ್ಲಿ ದೇವರ ನಾಡಿನ ಟಿ.ಪಿ.ರೆಹನೇಶ್, ಬಿಲಾಲ್ ಹುಸೈನ್ ಖಾನ್ ಸಹ ಮುಂಚೂಣಿಯಲ್ಲಿದ್ದಾರೆ.
ಯುಎನ್ಐ ವಿಎನ್ಎಲ್ ಆರ್ ಕೆ 1920