Wednesday, Jun 3 2020 | Time 09:00 Hrs(IST)
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
Karnataka Share

ಗುರುವಾರದಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕ ರಣತಂತ್ರ

ಗುರುವಾರದಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕ ರಣತಂತ್ರ
ಗುರುವಾರದಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕ ರಣತಂತ್ರ

ಬೆಂಗಳೂರು, ಅ 9 [ಯುಎನ್ಐ] ರಾಜ್ಯ ರಾಜಕಾರಣದಲ್ಲಿ ತೀವ್ರ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಗುರುವಾರದಿಂದ ಮೂರುದಿನಗಳ ಕಿರು ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಮುಂಬೈ, ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸದನದಲ್ಲಿ ಕೋಲಾಹಲ ಎಬ್ಬಿಸಲಿದೆ.

ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ ಪಕ್ಷಗಳಲ್ಲಿ ಆಂತರಿಕ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಅಧಿವೇಶನ ನಡೆಯುತ್ತಿದ್ದು, ಸದನ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗುವ ಸಾಧ್ಯತೆಯಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಕೇವಲ 1200 ಕೋಟಿ ರೂ ಪರಿಹಾರ ನೀಡಿದ್ದು, ಈ ಬಗ್ಗೆಯೂ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮೂರು ದಿನಗಳ ಅಧಿವೇಶನದಲ್ಲಿ ಅದರಲ್ಲೂ ಪ್ರಮುಖವಾಗಿ ವಿಧಾನಸಭೆ ಕಲಾಪಕ್ಕೆ ಖಾಸಗಿ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾಗಳಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ವಿಧಿಸಿದ್ದು, ದೂರದರ್ಶನ ಚಂದನವಾಹಿನಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಈ ಬೆಳವಣಿಗೆ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವೆಂದೇ ವ್ಯಾಖ್ಯಾನಿಸಲಾಗಿದ್ದು, ಇದು ಸಹ ವ್ಯಾಪಕ ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ.ಇನ್ನು ರಾಜ್ಯದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಭಾರೀ ಅನಾಹುತವಾಗಿದ್ದು ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬ ಕೂಗು ವಿರೋಧ ಪಕ್ಷಗಳಿಂದ ಮಾತ್ರವಲ್ಲ, ಆಡಳಿತ ಪಕ್ಷದ ಸಾಲಿನಿಂದಲೇ ಕೇಳಿ ಬರುವ ಲಕ್ಷಣಗಳು ಕಾಣಿಸುತ್ತಿವೆ.

ಪ್ರವಾಹದಿಂದಾಗಿ ಮೂವತ್ತೆಂಟು ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ ಎಂದು ಈ ಮುನ್ನ ರಾಜ್ಯ ಸರ್ಕಾರ ಕಳಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ತಿರಸ್ಕರಿಸಿದ ಕೇಂದ್ರ ಸರ್ಕಾರ ಪರಿಹಾರ ಕಾರ್ಯಕ್ಕಾಗಿ ಕೇವಲ ೧೨೦೦ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣ ಆಗಿದೆ.

ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರಕ್ಕೆ ನಂಬಿಕೆ ಇಲ್ಲ.ಹೀಗಾಗಿ ಅದು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದಲ್ಲೂ ಆ ವಿಷಯ ಕೋಲಾಹಲಕ್ಕೆ ಕಾರಣವಾಗಲಿದ್ದು ಪ್ರತಿಪಕ್ಷಗಳ ಧಾಳಿಗೆ ಆಡಳಿತ ಪಕ್ಷ ನಲುಗುವ ಸಾಧ್ಯತೆ ಇದೆ.

ಇಷ್ಟಾದರೂ ಸಮ್ಮಿಶ್ರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಬೊಕ್ಕಸ ಖಾಲಿ ಮಾಡಿ ಹೋಗಿತ್ತು ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಈ ವಿಷಯದಲ್ಲೂ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರ ರಾಜ್ಯದ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲಿಲ್ಲ ಎಂಬ ಕುರಿತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು ಇದು ಪ್ರತಿಪಕ್ಷಗಳ ಪಾಲಿಗೆ ಹರಿತ ಅಸ್ತ್ರವಾಗಲಿದೆ.

ಈ ಮಧ್ಯೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿಪಕ್ಷಗಳ ನಾಯಕರನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕ ಹೆದರಿಸುತ್ತಿದೆ.ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಈ ಹಿನ್ನೆಲೆಯಲ್ಲಿ ಬಗ್ಗು ಬಡಿಯುವ ಯತ್ನ ಮಾಡಿದೆ ಎಂಬ ವಿಷಯ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಮಂಡಲನೆಯಾಗುವ ಸಾಧ್ಯತೆ ಹೆಚ್ಚು.

ಸಮ್ಮಿಶ್ರ ಸರ್ಕಾರ ಪತನದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ದಾರಿಗಳು ಬೇರೆಯಾಗಿದ್ದು ಈ ಅಂಶ ಆಡಳಿತ ಪಕ್ಷದ ಪಾಲಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಬಹುದಾದರೂ ಒಟ್ಟಾರೆಯಾಗಿ ಉಭಯ ಪಕ್ಷಗಳು ಪ್ರತಿಪಕ್ಷವಾಗಿ ಸರ್ಕಾರದ ವಿರುದ್ಧ ಮುಗಿಬೀಳುವುದಂತೂ ನಿಶ್ಚಿತ.

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೪೦೦೦ ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿದ್ದು ಇದರ ಪರಿಣಾಮವಾಗಿ ಇದು ಅಭಿವೃದ್ಧಿ ಪರ ಸರ್ಕಾರವಲ್ಲ,ವರ್ಗಾವಣೆ ಧಂದೆಯ ಸರ್ಕಾರ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುವುದು ಖಚಿತವಾಗಿದೆ.

ಅದೇ ರೀತಿ ನೆರೆ ಪರಿಹಾರ ಕಾರ್ಯಕ್ಕೆ ಅನುಕೂಲವಾಗುವಂತೆ ಸಧ್ಯದ ಬಜೆಟ್ ಜತೆಗೆ ಪೂರಕ ಅಂದಾಜುಗಳ ಬಜೆಟ್ ಮಂಡಿಸುವುದು ಮತ್ತು ವಿಧಾನಮಂಡಲದ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ. ಹಣಕಾಸು ಮಸೂದೆಗಳಿಗೆ ಪ್ರತಿಪಕ್ಷಗಳು ಯಾವ ರೀತಿಯಲ್ಲಿ ಸಹಕಾರ ನೀಡಲಿವೆ ಎಂಬುದು ಸಹ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಯುಎನ್ಐ ಎಂಎಸ್ಆರ್ ವಿಎನ್ 1834