Sunday, Dec 6 2020 | Time 00:25 Hrs(IST)
Karnataka Share

ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಅ.22(ಯುಎನ್ಐ) ಕುಂದಗೋಳದ ಜೆಡಿಎಸ್ ನ ಮಾಜಿ ಶಾಸಕ ಎಂ.ಎಸ್.ಅಕ್ಕಿ(ಮಲ್ಲಿಕಾರ್ಜುನ ಅಕ್ಕಿ) ಸೇರಿದಂತೆ ಕೆಲವು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಅಕ್ಕಿಯವರನ್ನು ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂಭಾವಿತ ವ್ಯಕ್ತಿ ಅಕ್ಕಿ ಶಾಸಕರಾಗಿ ನಮ್ಮಜೊತೆ ಕೆಲಸ ಮಾಡಿದ್ದರು. ನಮಗೆ ಸಾಕಷ್ಟು ಸಹಕಾರ ಮಾಡಿದ್ದರು. ಈಗ ಬೇಷರತ್ತಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ದಿವಂಗತ ಶಿವಳ್ಳಿ, ಅಕ್ಕಿ ಇಬ್ಬರೂ ಒಂದೇ ಊರಿನವರು. ಅಕ್ಕಿ ಜೊತೆ ತಾಲೂಕು ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಸಹ ಪಕ್ಷ ಸೇರಿದ್ದಾರೆ. ಇವರ ಸೇರ್ಪಡೆಯಿಂದ ಆ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು‌ ಬಲ ತರಲಿದೆ ಎಂದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿ, ತಾವು 1987 ರಲ್ಲಿ ರಾಜಕೀಯಕ್ಕೆ ಬಂದಿದ್ದು, ಜೆಡಿಎಸ್ ಪಕ್ಷದಿಂದ ಶಾಸಕನಾಗಿದ್ದೆ. ಪ್ರಸಕ್ತ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಿದ್ದೇನೆ ಎಂದರು.
ಬಿಜೆಪಿಯನ್ನು ಎದುರಿಸುವ ಶಕ್ತಿ ಡಿಕೆಶಿಯವರಿಗಿದೆ. ಹಾಗಾಗಿಯೇ ಇಂದು ಕಾಂಗ್ರೆಸ್ ಸೇರಿದ್ದೇನೆ. ಸಿದ್ದರಾಮಯ್ಯನವರ ಜೊತೆಯೂ ಈ ಸಂಬಂಧ ಮಾತನಾಡಿದಾಗ ಖುಷಿಯಿಂದ ತಮ್ಮನ್ನು ಹುರಿದುಂಬಿಸಿದ್ದಾರೆ ಎಂದರು.
ಯುಎನ್ಐ ಯುಎಲ್ ಎಸ್ ಎಂಆರ್ 1310