Wednesday, Jul 15 2020 | Time 05:14 Hrs(IST)
Entertainment Share

ನವರಸನಾಯಕ ಜಗ್ಗೇಶ್ ಸಿನಿ ಪಯಣಕ್ಕೆ ೩೮ ವರ್ಷ

ಬೆಂಗಳೂರು, ನ ೨೧ (ಯುಎನ್‌ಐ) 'ಕಳ್ಳೇಕಾಯ್.. . . .ಕಳ್ಳೇಕಾಯ್’ ಡೈಲಾಗ್ ಮೂಲಕ ಕನ್ನಡ ಪ್ರೇಕ್ಷಕರ ಮನಸೆಳೆದು, ಶುಕ್ರವಾರ ಬಿಡುಗಡೆಯಾಗುತ್ತಿರುವ ’ಕಾಳಿದಾಸ ಕನ್ನಡ ಮೇಷ್ಟ್ರು’ ವರೆಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ನವರಸನಾಯಕ ಜಗ್ಗೇಶ್ ೩೮ ವರ್ಷಗಳ ಸಿನಿಜರ್ನಿ ಮುಗಿಸಿದ್ದಾರೆ
ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತ, ತಮ್ಮ ವಿಶಿಷ್ಟ ಹಾವಭಾವ, ಸಂಭಾಷಣಾ ವೈಖರಿಯಿಂದಲೇ ಗಮನ ಸೆಳೆದು ನಾಯಕನ ಪಟ್ಟಕ್ಕೇರಿದ ಜಗ್ಗೇಶ್, ಕಳೆದ ೩ ದಶಕಗಳಲ್ಲಿ ಚಂದನವನದಲ್ಲಿ ಎಂದಿಗೂ ಮರೆಯಲಾರದಂತಹ ಅನುಭವಗಳನ್ನು, ಅಭಿಮಾನಿಗಳ ಮಮತೆಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ
ಸ್ಯಾಂಡಲ್ ವುಡ್‌ನಲ್ಲಿ ೩೮ ವರ್ಷ ಪೂರೈಸಿರುವ ಜಗ್ಗೇಶ್ ಅವರಿಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ಅಭಿಮಾನಿಗಳು ಶುಭ ಕೋರಿದ್ದಾರೆ
ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಾಗಿರುವ ಜಗ್ಗೇಶ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಪ್ರತಿದಿನದ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಕೆಲವೊಮ್ಮೆ ಇದ್ದದ್ದನ್ನು ಇದ್ದಹಾಗೆ ಹೇಳಿ ಖಂಡಿಸುವ ಮೂಲಕ ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
’ಮೇಕಪ್’ ಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕರೂ ಆಗಿದ್ದಲ್ಲದೆ ಭಾರತೀಯ ಜನತಾ ಪಕ್ಷದ ಮೂಲಕ ತುರುವೇಕೆರೆ ಕ್ಷೇತ್ರದ ಶಾಸಕರೂ ಆಗಿ ರಾಜಕಾರಣದ ಅನುಭವವನ್ನೂ ಪಡೆದುಕೊಂಡಿದ್ದಾರೆ.
’ಇಬ್ಬನಿ ಕರಗಿತು’ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿ, ಮಠ, ಭಂಡ ನನ್ನ ಗಂಡ, ತರ್ಲೆ ನನ್ ಮಗ, ಸೇರಿದಂತೆ ಅನೇಕ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದಿರುವ ಜಗ್ಗೇಶ್, ೧೩೦ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಕಿರುತೆರೆಯ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೦೮೨೪