ನವದೆಹಲಿ, ಫೆ 28 [ಯುಎನ್ಐ] ಜಲ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ನೀರು ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಈಗ ಬೇಸಿಗೆ ಆರಂಭವಾಗುತ್ತಿದೆ. ಈಗಿನಿಂದಲೇ ಜಲಸಂರಕ್ಷಣೆಗೆ ನಾವು ಪ್ರಯತ್ನ ಮಾಡಬೇಕು ಎಂದರು.
ಪಶ್ಚಿಮ ಬಂಗಾಳದ ‘ಉತ್ತರ ದೀನಾಜ್ ಪುರ್’ ನಿಂದ ಸುಜೀತ್ ಅವರು ಜಲ ಸಂರಕ್ಷಣೆ ಬಗ್ಗೆ ಕಳುಹಿಸಿದ ಸಂದೇಶವನ್ನು ಪ್ರಸ್ತಾಪಿಸಿದರು. ಸುಜೀತ್ ಅವರು ಪ್ರಕೃತಿ ಜಲರೂಪದಲ್ಲಿ ನಮಗೆ ಒಂದು ಸಾಮೂಹಿಕ ಕೊಡುಗೆಯನ್ನು ನೀಡಿದೆ. ಆದ್ದರಿಂದ ಅದನ್ನು ಸಂರಕ್ಷಿಸುವ ಜವಾಬ್ದಾರಿಯೂ ಎಲ್ಲರಿಗೂ ಸೇರಿದ್ದು ಎಂದು ಸಂದೇಶ ಕಳುಹಿಸಿದ್ದಾರೆ. ಒಂದು ಕಾಲದಲ್ಲಿ, ಗ್ರಾಮಗಳಲ್ಲಿ ಎಲ್ಲರೂ ಸೇರಿ ಬಾವಿಗಳು ಮತ್ತು ಹೊಂಡಗಳ ಸಂರಕ್ಷಣೆಯನ್ನು ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಈಗ ಇಂಥದೇ ಒಂದು ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸ್ಥಳೀಯರು ತಮ್ಮ ಬಾವಿಗಳ ಸಂರಕ್ಷಣೆಗೆ ಆಂದೋಲನ ಕೈಗೊಂಡಿದ್ದಾರೆ. ಇವರು ತಮ್ಮ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಬಳಕೆಯಲ್ಲಿರದ ಬಾವಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದಾರೆ ಎಂದು ಮಹತ್ವಪೂರ್ಣವಾದ ಮಾಹಿತಿ ನೀಡಿದರು.
ಮಧ್ಯಪ್ರದೇಶದ ಅಗ್ರೋತಾ ಗ್ರಾಮದ ಬಬಿತಾ ರಾಜ್ ಪೂತ್ ಅವರು ಬುಂದೇಲ್ ಖಂಡದಲ್ಲಿದ್ದಾರೆ. ಅವರ ಗ್ರಾಮದ ಬಳಿ ಹಿಂದೆ ಬಹುದೊಡ್ಡ ಕೊಳವಿತ್ತು. ಅದು ಒಣಗಿಹೋಗಿತ್ತು. ಅವರು ಗ್ರಾಮದ ಇತರ ಮಹಿಳೆಯರ ಜತೆಗೂಡಿ ಕೊಳದವರೆಗೆ ನೀರನ್ನು ಹರಿಸಲು ಕಾಲುವೆಯೊಂದನ್ನು ನಿರ್ಮಿಸಿದರು. ಬಿದ್ದ ಮಳೆ ನೀರು ಈ ಕಾಲುವೆ ಮೂಲಕ ಕೊಳಕ್ಕೆ ಬಂದು ಸೇರುತ್ತಿತ್ತು. ಈಗ ಕೊಳ ನೀರಿನಿಂದ ತುಂಬಿ ತುಳುಕುತ್ತಿದೆ ಎಂದರು.
ಈ ರೀತಿ ನೀರಿನ ಬಗ್ಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಭಾರತದ ಹೆಚ್ಚಿನ ಭಾಗಗಳಲ್ಲಿ ಮೇ-ಜೂನ್ ನಲ್ಲಿ ಮಳೆ ಆರಂಭವಾಗುತ್ತದೆ. ನಾವು ಈಗಿನಿಂದಲೇ ನಮ್ಮ ಸುತ್ತಮುತ್ತಲ ನೀರಿನ ಮೂಲಗಳ ಸ್ವಚ್ಛತೆಗೆ, ಮಳೆ ನೀರು ಸಂಗ್ರಹಕ್ಕೆ, 100 ದಿನಗಳ ಆಂದೋಲನವನ್ನು ಆರಂಭಿಸಬಹುದೇ? ಇದೇ ವಿಚಾರದೊಂದಿಗೆ ಕೆಲ ದಿನಗಳ ನಂತರ ಜಲಶಕ್ತಿ ಸಚಿವಾಲಯದಿಂದ “ ಕ್ಯಾಚ್ ದಿ ರೈನ್” ಎಂಬ ಆಂದೋಲನವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಇಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ದೇಶದ ಮಹಾನ್ ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರ ಸಂಶೋಧನೆ ರಾಮನ್ ಎಫೆಕ್ಟ್ ಎಂದೇ ಖ್ಯಾತವಾಗಿದ್ದು, ಈ ಸಂಶೋಧನೆ ವಿಜ್ಞಾನದ ದಿಕ್ಕನ್ನೇ ಬದಲಿಸಿದೆ ಎಂದು ಶ್ಲಾಘಿಸಿದರು.
ನಮ್ಮ ಯುವಜನತೆ ಭಾರತದ ವೈಜ್ಞಾನಿಕ ಇತಿಹಾಸ ಹಾಗೂ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲಿ, ಅರ್ಥೈಸಿಕೊಳ್ಳಲಿ ಮತ್ತು ಚೆನ್ನಾಗಿ ಓದಲಿ ಎಂದು ನಾನು ಕೂಡ ಬಯಸುತ್ತೇನೆ. ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ ಜನರು ಇದನ್ನು ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ ಮತ್ತು ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತಾರೆ, ಆದರೆ ವಿಜ್ಞಾನದ ವಿಸ್ತಾರ ಇದಕ್ಕಿಂತ ಬಹಳ ದೊಡ್ಡದಾಗಿದೆ ಮತ್ತು ‘ಆತ್ಮನಿರ್ಭರ್ ಭಾರತ್’ / ಸ್ವಾವಲಂಬಿ ಭಾರತ ಆಂದೋಲನದಲ್ಲಿ ವಿಜ್ಞಾನದ ಕೊಡುಗೆ ಬಹಳ ದೊಡ್ಡದು. ನಾವು ವಿಜ್ಞಾನವನ್ನು ಲ್ಯಾಬ್ ಟು ಲ್ಯಾಂಡ್ ಎಂಬ ಮಂತ್ರದೊಂದಿಗೆ ಮುಂದುವರಿಸಬೇಕಿದೆ ಎಂದು ಕರೆ ನೀಡಿದರು.
ಸ್ವಾವಲಂಬಿ ಭಾರತದ ಈ ಮಂತ್ರ ದೇಶದ ಪ್ರತಿಯೊಂದು ಗ್ರಾಮವನ್ನು ತಲುಪುತ್ತಿದೆ ಎಂಬುದು ನನಗೆ ಸಂತಸ ತಂದಿದೆ. ಬಿಹಾರದ ಬೇತಿಯಾದ ನಿವಾಸಿ ಪ್ರಮೋದ್ ಅವರು ದಿಲ್ಲಿಯಲ್ಲಿ ಒಬ್ಬ ಟೆಕ್ನಿಶಿಯನ್ ಆಗಿ ಎಲ್.ಇ.ಡಿ ಬಲ್ಪ್ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಅವರು ತಮ್ಮ ಮನೆಗೆ ಹಿಂದಿರುಗಬೇಕಾಯಿತು. ಅವರು ಸ್ವತಃ ಬಲ್ಪ್ ತಯಾರಿಸುವ ಚಿಕ್ಕ ಘಟಕವನ್ನು ಸ್ಥಾಪಿಸಿದರು. ಅವರು ತಮ್ಮ ಕ್ಷೇತ್ರದ ಕೆಲ ಯುವಕರ ಸಹಾಯ ಪಡೆದು ಕೆಲವೇ ತಿಂಗಳುಗಳಲ್ಲಿ ತಮ್ಮ ಮನೆಯಲ್ಲೇ ಇದ್ದುಕೊಂಡು ಕಾರ್ಖಾನೆಯ ಕೆಲಸಗಾರನಿಂದ ಮಾಲೀಕನಾಗುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಮುಂದಿನ ಕೆಲ ತಿಂಗಳುಗಳು ವಿದ್ಯಾರ್ಥಿಗಳ ಜೀವನದಲ್ಲಿ ವಿಶೇಷವಾಗಿವೆ. ಹೆಚ್ಚಿನ ಯುವಜನರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ನೀವೆಲ್ಲ ಸೇನಾನಿಗಳಾಗಬೇಕು, ಮುಂದಿನ ಕೆಲ ಸಮಯದಲ್ಲಿ ಪರೀಕ್ಷೆ ಬರೆಯಲು ಹೋಗಬೇಕು ಮತ್ತು ಮುಗುಳುನಗುತ್ತಾ ಹಿಂದಿರುಗಬೇಕು. ಪರೀಕ್ಷೆಯಲ್ಲಿ ನಿಮ್ಮ ಅತ್ಯುತ್ತಮವಾದುದನ್ನು ಪ್ರದರ್ಶಿಸಬೇಕು ಎಂದು ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.
ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿರುವುದರಿಂದ ನಮ್ಮ ವ್ಯಾಪಾರಿಗಳು ಮತ್ತು ಉದ್ಯಮಿ ಸ್ನೇಹಿತರು ಕೂಡಾ ಕಾರ್ಯನಿರತರಾಗಿದ್ದಾರೆ. ಈ ಎಲ್ಲ ಕೆಲಸಗಳ ಮಧ್ಯೆ ನಾವು ಕೊರೊನಾ ಬಗ್ಗೆ ಎಚ್ಚರವಹಿಸುವುದನ್ನು ಮರೆಯಬಾರದು. ನೀವೆಲ್ಲರೂ ಆರೋಗ್ಯದಿಂದಿರುತ್ತೀರಿ. ಸಂತೋಷದಿಂದಿರುತ್ತೀರಿ, ಕರ್ತವ್ಯಪಾಲನೆ ಮಾಡುತ್ತೀರಿ ಎಂದಾದಲ್ಲಿ ದೇಶ ತ್ವರಿತವಾಗಿ ಮುನ್ನಡೆಯುತ್ತಿರುತ್ತದೆ ಎಂದರು.
ಯುಎನ್ಐ ವಿಎನ್ 1419