Health -LifestylePosted at: Jan 19 2021 1:03PM Shareಪ್ರಖ್ಯಾತ ವೈದ್ಯೆ ಡಾ. ಶಾಂತಾ ನಿಧನ : ಪ್ರಧಾನಿ ಸಂತಾಪಚೆನ್ನೈ, ಜ 19 (ಯುಎನ್ಐ) ಖ್ಯಾತ ಆಂಕೊಲಾಜಿಸ್ಟ್ ಮತ್ತು ಕ್ಯಾನ್ಸರ್ ಆರೈಕೆಯ ಆದ್ಯ ಪ್ರವರ್ತಕಿ ಡಾ ವಿ ಶಾಂತಾ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ರಾಜ್ಯಪಾಲ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಂತಾಪ ಸೂಚಕ ಸಂದೇಶ ನೀಡಿರುವ ಪ್ರಧಾನಿ ಮೋದಿ, ''ಉನ್ನತ ಗುಣಮಟ್ಟದ ಕ್ಯಾನ್ಸರ್ ಆರೈಕೆಗಾಗಿ ಡಾ. ಶಾಂತಾ ಅವರ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗದು. ಚೆನ್ನೈನ ಅಡ್ಯಾರ್ ನಲ್ಲಿರುವ ಕ್ಯಾನ್ಸರ್ ಸಂಸ್ಥೆ ಮುಂಚೂಣಿಯಲ್ಲಿದ್ದು, ಬಡವರಿಗೆ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುತ್ತಿದೆ. ನಾನು 2018 ರಲ್ಲಿ ಸಂಸ್ಥೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಓಂ ಶಾಂತಿ '' ಎಂದು ಟ್ವೀಟ್ ಮಾಡಿದ್ದಾರೆ. ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ''ಪದ್ಮವಿಭೂಷಣ, ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಡಾ.ವಿ.ಶಾಂತಾ ಅವರ ನಿಧನ ದುಃಖ ತಂದಿದೆ. ಕ್ಯಾನ್ಸರ್ ಪೀಡಿತರಿಗೆ ಅತ್ಯುತ್ತಮ ಆರೈಕೆ ನೀಡುವ ಸಲುವಾಗಿ 60 ವರ್ಷಗಳಿಗಿಂತಲೂ ಹೆಚ್ಚು ಸಮಯವನ್ನು ಅವರು ಸಮರ್ಪಿಸಿದ್ದಾರೆ” ಎಂದಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಯ ಜತೆಗೆ ಸಹಾನುಭೂತಿಯಿಂದ ಆರೈಕೆ ಮಾಡುತ್ತಿದ್ದ ಡಾ. ಶಾಂತಾ, ಸಾರ್ವಜನಿಕ ಮತ್ತು ಅಧಿಕೃತ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ಕ್ಯಾನ್ಸರ್ ನಿರ್ವಹಣೆ ಮತ್ತು ನಿಯಂತ್ರಣದಲ್ಲಿನ ಪ್ರಗತಿಗೆ ಅವರ ಕೊಡುಗೆಗಳಿಗಾಗಿ ಪದ್ಮಶ್ರೀ, ಪದ್ಮಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಾ. ಶಾಂತಾ ಅವರು ಎಲ್ಲ ಮಹಿಳೆಯರಿಗೆ ಸ್ಪೂರ್ತಿದಾಯಕ ಆದರ್ಶಪ್ರಾಯರು ಎಂದು ರಾಜ್ಯಪಾಲರು ಹೇಳಿದ್ದಾರೆ. ಯುಎನ್ಐ ಎಸ್ಎ 1306