Tuesday, Jun 25 2019 | Time 13:46 Hrs(IST)
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
Karnataka Share

ಮೈತ್ರಿ ಉಳಿವಿಗೆ ಕೊನೆಯ ಅಸ್ತ್ರವಾಗಿ ಸಂಪುಟ ಪುನಾರಚನೆ

ಮೈತ್ರಿ ಉಳಿವಿಗೆ ಕೊನೆಯ ಅಸ್ತ್ರವಾಗಿ ಸಂಪುಟ ಪುನಾರಚನೆ
ಮೈತ್ರಿ ಉಳಿವಿಗೆ ಕೊನೆಯ ಅಸ್ತ್ರವಾಗಿ ಸಂಪುಟ ಪುನಾರಚನೆ

ಬೆಂಗಳೂರು, ಮೇ 26 (ಯುಎನ್‍ಐ) ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಉಳಿವಿಗೆ ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ದೋಸ್ತಿ ನಾಯಕರಿಗೆ ಎದುರಾಗಿದೆ. ಬಂಡಾಯದ ಸಂಕಟದಿಂದ ದೂರಾಗಲು ಮೈತ್ರಿ ನಾಯಕರು ಸಂಪುಟ ಪುನಾರಚನೆಯ ದಾರಿ ಹಿಡಿದಿದ್ದಾರೆ.ದೇಶದಲ್ಲಿ ಎನ್‍ಡಿಎ ಮತ್ತೆ ಅಧಿಪತ್ಯಕ್ಕೆ ಬರುತ್ತಿದ್ದಂತೆಯೇ ಮೈತ್ರಿ ಸರ್ಕಾರಕ್ಕೆ ರಾಜ್ಯದಲ್ಲಿ ಆಪರೇಷನ್ ಕಮಲದ ಭೀತಿ ಸೃಷ್ಟಿಯಾಗಿದೆ. ಚಿಂಚೋಳಿ ಉಪಚುನಾವಣೆಯಲ್ಲಿ ಅವಿನಾಶ್ ಜಾಧವ್ ಗೆಲುವಿನಿಂದ ಬಿಜೆಪಿಯ ಸಂಖ್ಯಾಬಲ 105 ಕ್ಕೆ ಏರಿದ್ದು, ಮೈತ್ರಿ ಪಕ್ಷಗಳ ಶಾಸಕರ ಬೇಟೆಗೆ ಬಿಜೆಪಿ ನಾಯಕರು ತಂತ್ರ ರೂಪಿಸಿದ್ದಾರೆ. ತಿಂಗಳಾಂತ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ನ 10 ಶಾಸಕರು ಪಕ್ಷ ಬಿಡಲಿದ್ದಾರೆ ಎಂಬ ಮಾಹಿತಿ ದಟ್ಟವಾಗಿ ಹರಿದಾಡುತ್ತಿದೆ ಎನ್ನುವಾಗಲೇ ಈಗಾಗಲೇ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಇನ್ನೋರ್ವ ರೆಬೆಲ್ ಶಾಸಕ ಸುಧಾಕರ್ ಜೊತೆಗೂಡಿ ಬಿಜೆಪಿ ನಾಯಕರನ್ನು ಬಹಿರಂಗವಾಗಿಯೇ ಭೇಟಿಯಾಗಿದ್ದು, ಇನ್ನಷ್ಟು ಶಾಸಕರ ತಂಡ ತಮ್ಮೊಂದಿಗಿದೆ ಎಂದು ಸೂಚನೆಯನ್ನು ಸರ್ಕಾರಕ್ಕೆ ರವಾನಿಸಿದ್ದಾರೆ. ಇದರಿಂದ ಕಾಂಗ್ರೆಸ್ ಜೆಡಿಎಸ್ ಶಾಸಕರು ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ನಾಯಕರ ಸಂಪರ್ಕವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಭೀತಿಯೂ ಕಾಡುತ್ತಿದೆ. ಹೀಗಾಗಿ ಅತೃಪ್ತ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಂಪುಟ ಪುನಾರಚನೆ ಎಂಬ ಕೊನೆಯ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಜೂನ್ ಆರಂಭದಲ್ಲಿ ಸಂಪುಟ ಪುನಾರಚನೆಗೆ ಕೈಹಾಕಲಾಗುತ್ತಿದ್ದು, 10 ಶಾಸಕರ ಪೈಕಿ 9 ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಲೆಕ್ಕಾಚಾರವನ್ನು ಮೈತ್ರಿ ನಾಯಕರು ಹಾಕಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ ಪಕ್ಷದ ಕೆಲವು ಹಿರಿಯ ಮಂತ್ರಿಗಳಿಂದ ರಾಜೀನಾಮೆ, ಜೆಡಿಎಸ್‍ ಕೋಟಾದಲ್ಲಿ ಬಾಕಿ ಉಳಿದಿರುವ ಸ್ಥಾನಗಳ ಭರ್ತಿ, ಹಾಗೂ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಸ್ಥಾನವನ್ನು ತುಂಬುವ ಬಗ್ಗೆ ದೋಸ್ತಿಗಳು ಯೋಜನೆ ರೂಪಿಸಿದ್ದಾರೆ.

ಕಾಂಗ್ರೆಸ್‍ ನಿಂದ ಕೃಷ್ಣ ಬೈರೇಗೌಡ, ಯು.ಟಿ.ಖಾದರ್ ಹಾಗೂ ಪ್ರಿಯಾಂಕ್ ಖರ್ಗೆ, ಪುಟ್ಟರಂಗಶೆಟ್ಟಿ, ಜಯಮಾಲಾ, ವೆಂಕಟರಮಣಪ್ಪ ಜೆಡಿಎಸ್‍ನಿಂದ ಸಾ.ರಾಮಹೇಶ್, ಎಂ.ಸಿ.ಮನಗೂಳಿ, ಶ್ರೀನಿವಾಸ್ ಡಿ.ಸಿ.ತಮ್ಮಣ್ಣ ಸೇರಿದಂತೆ ಉಭಯ ಪಕ್ಷಗಳ ಆರು ಸಚಿವರ ಸ್ಥಾನವನ್ನು ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಭೀಮಾನಾಯ್ಕ್, ಅಖಂಡ ಶ್ರೀನಿವಾಸಮೂರ್ತಿ ಇವರಿಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

ಇತ್ತ ಜೆಡಿಎಸ್‍ ಕೋಟಾದಿಂದ ಹೆಚ್.ಕೆ.ಕುಮಾರಸ್ವಾಮಿ, ಅನ್ನದಾನಿ ಹಾಗೂ ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರುಗಳಿಗೂ ಮಂತ್ರಿಗಿರಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಪುನಾರಚನೆಯನ್ನು ಸಂಕಟ ಕಾಲದಲ್ಲಿ ಸರ್ಕಾರದ ಉಳಿವಿಗೆ ಬಳಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್, ಹೆಚ್.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಮತ್ತು ಅವರ ತಂಡ ಈಗಾಗಲೇ ಪಕ್ಷ ಬಿಡಲು ಸಜ್ಜಾಗಿರುವುದರಿಂದ ಮಂತ್ರಿಸ್ಥಾನದ ಆಮಿಷಕ್ಕೆ ಬಗ್ಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಒಟ್ಟಾರೆ ಸಂಕಟ ನಿವಾರಣೆಗೆ ಸಂಪುಟ ಪುನಾರಚನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ದೋಸ್ತಿ ನಾಯಕರ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಬಲ್ಲದು ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.

ಯುಎನ್‍ಐ ಯುಎಲ್ ಎಸ್ಎಂಆರ್ ಕೆವಿಆರ್ 1655