KarnatakaPosted at: Jan 22 2021 11:15AM Shareಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿಶಿವಮೊಗ್ಗ,ಜ.22 (ಯುಎನ್ಐ) ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಸಂಭವಿಸಿದ ಸ್ಫೋಟ ಅವಘಡದಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಗುತ್ತಿಗೆದಾರ ಸುಧಾಕರ್, ಕಲ್ಲು ಗಣಿಗಾರಿಕೆಗೆ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಜಮೀನಿನ ಮಾಲೀಕ ಅವಿನಾಶ್ ಎಂಬವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.ಘಟನೆ ನಡೆದ ಸ್ಥಳದಲ್ಲಿ ಚಿತ್ರದುರ್ಗ, ದಾವಣಗೆರೆಯಿಂದ ಎಎಸ್'ಸಿ ವಿಶೇಷ ತಂಡ ಹಾಗೂ ಶ್ವಾನದಳಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಈ ನಡುವೆ, ಸ್ಫೋಟ ಸ್ಥಳಕ್ಕೆ ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ, ತನಿಖೆ ಆರಂಭಿಸಿದೆ. ಪರಿಶೀಲನೆ ಬಳಿಕ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಮೆಡಿಕಲ್ ಟೀಂ ಶೋಧ ಕಾರ್ಯ ನಡೆಸಲಾಗುತ್ತದೆಘಟನಾ ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾರನ್ನೂ ಒಳಗೆ ಬಿಡುತ್ತಿಲ್ಲ. ಭಾರಿ ಪ್ರಮಾಣದ ಸ್ಫೋಟಕ ತಂದಿರುವ ಹಿನ್ನೆಲೆಯಲ್ಲಿ, ಅವೆಲ್ಲವು ರಾತ್ರಿಯೇ ಸ್ಫೋಟಗೊಂಡಿರಬಹುದು. ಒಂದು ವೇಳೆ ಕೆಲವು ಸ್ಫೋಟಕಗಳು ಸಜೀವ ಸ್ಥಿತಿಯಲ್ಲಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ನಡುವೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಇತರೆ ನಾಯಕರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳುತ್ತೇವೆ, ಈ ಘಟನೆ ದೊಡ್ಡ ಅಚಾತುರ್ಯ. ಕಾರಣರಾದವರನ್ನು ಹುಡುಕಿ ಕಾನೂನಿನ ಮುಂದೆ ತರಲಾಗುವುದು ನಾಳೆ ತಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಯುಎನ್ಐ ಎಎಚ್ 1113