ಬೆಂಗಳೂರು, ನ 28 (ಯುಎನ್ಐ) ಲಾಕ್ ಡೌನ್ ಬಳಿಕ ಬಿಡುಗಡೆಯಾದ ದಕ್ಷಿಣದ ಮೊದಲ ನೂತನ ಚಿತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿರುವ “ಆಕ್ಟ್ -1978” ಚಿತ್ರಕ್ಕೆ ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉತ್ತಮ ಚಿತ್ರವೆಂಬ ಕಾರಣಕ್ಕೆ ಚಿತ್ರತಂಡದ ಬೆಂಬಲಕ್ಕೆ ನಿಂತಿರುವ ಅವರು, ಸ್ವಯಂಪ್ರೇರಿತರಾಗಿ ಬೆಂಗಳೂರು ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ ಪ್ರದರ್ಶನ ಏರ್ಪಡಿಸಿ ಸಿನಿಮಾ ತೋರಿಸಿದ್ದಾರೆ.
ಸಿನಿಮಾ ನೋಡಿದ ಕಚೇರಿಯ ಸಿಬ್ಬಂದಿ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇಂತಹ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಹೇಳಿದ್ದಾರೆ. ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ಸಿಬ್ಬಂದಿಯೊಬ್ಬರು ಈ ಸಿನೆಮಾ ನೋಡಿದ ನಂತರ ತಾವು ಪ್ರಾಮಾಣಿಕವಾಗಿ ಸರ್ಕಾರಿ ಕೆಲಸ ಮಾಡುವುದಕ್ಕೆ ಈ ಸಿನಿಮಾ ನನಗೆ ಸ್ಪೂರ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
"ಆಕ್ಟ್-1978" ಸಿನಿಮಾ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳ ಬಾಕ್ಸ್ ಆಫೀಸ್ ಗಳಿಕೆ ಉತ್ತಮವಾಗಿದ್ದು. ಕರೋನಾ ಭಯದ ನಡುವೆಯೂ ಯುವಕರಿಂದ ವಯೋವೃದ್ಧರ ತನಕ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದು, ಸಿನಿಮಾಗೆ ಪ್ರೇಕ್ಷಕರಿಂದಲೂ ಶಹಬ್ಬಾಸ್ಗಿರಿ ಸಿಕ್ಕುತ್ತಿದೆ. ಗಾಂಧಿನಗರದ ಪ್ರಕಾರ "ಆಕ್ಟ್-1978 ಚಿತ್ರ ಹಿಟ್"ಎಂದು ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಹೆಚ್ಚಿನ ಜನರಿಗೆ ತಲುಪಲಿದ್ದು, ಇತರೆ ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಈ ಎಲ್ಲ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ "ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡಬೇಕು" ಎಂಬ ತಂಡದ ನಿರ್ಧಾರಕ್ಕೆ ಯಶಸ್ಸು ಸಿಕ್ಕಿದೆ.
ಆಕ್ಟ್-1978 ಚಿತ್ರಕ್ಕೆ ಸಿಕ್ಕ ಜನಬೆಂಬಲ ಕಂಡು ಸ್ಯಾಂಡಲ್ವುಡ್ ಗರಿಗೆದರಿದೆ, ಈ ಶುಕ್ರವಾರ ಮೂರು ಹೊಸ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಮುಂದಿನ ವಾರದ ಹೊತ್ತಿಗೆ ಸುಮಾರು ಹದಿನೈದು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದೆ. ಒಟ್ಟು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ ಆಕ್ಟ್-1978 ಸಿನಿಮಾದ ಗೆಲುವು ಬರೀ ತಂಡದ ಗೆಲುವಲ್ಲ, ಪ್ರೇಕ್ಷಕರು, ನೆಟ್ಟಿಗರು, ಮಾಧ್ಯಮದವರು ಮತ್ತು ಚಿತ್ರಮಂದಿರದ ಸಿಬ್ಬಂದಿ ಹಾಗೂ ಮಾಲೀಕರ ಗೆಲುವು ಎಂದು ಸಿನಿಮಾ ತಂಡ ಭಾವಿಸಿದೆ.
ಯುಎನ್ಐ ಎಸ್ಎ 1747