Saturday, Aug 15 2020 | Time 11:15 Hrs(IST)
 • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
 • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
 • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
 • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
 • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
 • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
 • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
 • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
 • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
 • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
 • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
 • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Karnataka Share

ಬೆಂಗಳೂರು ನಗರ ಶೇ. 80ರಷ್ಟು ಪ್ಲಾಸ್ಟಿಕ್ ಮುಕ್ತ; ನ್ಯಾ. ಸುಭಾಷ್ ಅಡಿ

ಬೆಂಗಳೂರು ನಗರ ಶೇ. 80ರಷ್ಟು ಪ್ಲಾಸ್ಟಿಕ್ ಮುಕ್ತ; ನ್ಯಾ. ಸುಭಾಷ್ ಅಡಿ
ಬೆಂಗಳೂರು ನಗರ ಶೇ. 80ರಷ್ಟು ಪ್ಲಾಸ್ಟಿಕ್ ಮುಕ್ತ; ನ್ಯಾ. ಸುಭಾಷ್ ಅಡಿ

ಸಂದರ್ಶನ- ಸುಪ್ರೀತಾ ಹೆಬ್ಬಾರ್

ಬೆಂಗಳೂರು, ಡಿ 2 (ಯುಎನ್ಐ)- ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಪಣ ತೊಟ್ಟಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಬೆಂಗಳೂರು ಘಟಕದ ಸದಸ್ಯ ಹಾಗೂ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಈ ನಿಟ್ಟಿನಲ್ಲಿ ಕೆಲವು ತಿಂಗಳಿಂದ ಅವಿರತ ಪ್ರಯತ್ನದಲ್ಲಿದ್ದು, ಬಹುತೇಕ ಯಶಸ್ವಿಯಾಗಿದ್ದಾರೆ. ಇವರ ಪ್ರಕಾರ ನಗರದಲ್ಲಿ ಶೇ.80ರಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ. ಈ ಕುರಿತು ಸುಭಾಷ್ ಅಡಿ ಅವರೊಂದಿಗಿನ ಮಾತುಕತೆಯ ಸಾರಾಂಶ ಇಲ್ಲಿದೆ.

1. 1. ಸೆ.1ರೊಳಗೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಗೊಳ್ಳಬೇಕು ಎಂದಿದ್ದಿರಿ. ಎಷ್ಟರ ಮಟ್ಟಿಗೆ ಅದು ಯಶಸ್ವಿಯಾಗಿದೆ?

-ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಮಾರುಕಟ್ಟೆಗಳು, ಹೋಟೆಲ್ ಗಳು, ಮಾಲ್ ಗಳು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ಬ್ಯಾಗುಗಳು ನಿಷೇಧಗೊಂಡಿವೆ. ಹೋಟೆಲ್ ಗಳ ಸಂಘಟನೆಗಳು ಕೂಡ ಪ್ಲಾಸ್ಟಿಕ್ ಲೋಟ, ತಟ್ಟೆಗಳನ್ನು ನಿಷೇಧಿಸಿವೆ. ಪಾರ್ಸಲ್ ಗಳನ್ನು ಪ್ಲಾಸ್ಟಿಕ್ ನಲ್ಲಿ ನೀಡುವ ಪದ್ಧತಿಗೆ ಕೂಡ ಅಂತ್ಯ ಹಾಡಿವೆ.

2. ಆಹಾರ ವಲಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಇರುವ ಸವಾಲುಗಳೇನು?

ಸ್ವಿಗ್ಗಿ, ಜೊಮ್ಯಾಟೊದಂತಹ ಆಹಾರ ಪೂರೈಕೆ ಸಂಸ್ಥೆಗಳು ಕೂಡ ಬದಲಾವಣೆಗೆ ಒಪ್ಪಿಕೊಂಡಿವೆ. ಸಾಧ್ಯವಿರುವಷ್ಟು ಪರ್ಯಾಯ ಮಾರ್ಗ ಬಳಸುತ್ತೇವೆ ಎಂದಿದ್ದಾರೆ. ಆದರೆ, ಹೋಟೆಲ್ ಗಳಲ್ಲಿ ಆರ್ಡರ್ ಇದ್ದರೆ ಸಾಗಿಸಬೇಕಾಗುತ್ತದೆ. ಸ್ಟೀಲ್ ಪಾತ್ರೆಗಳ ಸಾಗಣೆ ಮತ್ತು ಮರಳಿ ತರುವುದು ಕಷ್ಟಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಹಾರದ ಪ್ಯಾಕಿಂಗ್ ವ್ಯವಸ್ಥೆಯಲ್ಲಿ ಇನ್ನೂ ಸಾಕಷ್ಟು ಸುಧಾರಣೆ ಕಂಡು ಬರಬೇಕಿದೆ. ವಿಮಾನಗಳಲ್ಲಿ ಕೂಡ ಪ್ಲಾಸ್ಟಿಕ್ ಲೋಟಗಳು, ಪ್ಲೇಟ್ ಗಳ ಬಳಕೆ ನಿಷೇದಿಸುವಂತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಈ ಸಂಬಂಧ ಸೂಚನೆ ನೀಡಿದ್ದೇನೆ. ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು ನಿಷೇದಗೊಂಡಿವೆ. ವಿಮಾನಯಾನ ಸಂಸ್ಥೆಗಳು ಕೂಡ ತಮ್ಮ ವಿಮಾನಗಳಲ್ಲಿ ಕೂಡ ಪ್ಲಾಸ್ಟಿಕ್ ಬಾಟಲ್ ಬಳಕೆ ಸ್ಥಗಿತಗೊಳಿಸಿದ್ದು, ಪೇಪರ್ ಲೋಟದಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ.

3.ಜನರಲ್ಲಿ ಜಾಗೃತಿ ಮೂಡಿದೆಯೇ?

-ಜನರಲ್ಲಿ ಸಂಪೂರ್ಣ ಜಾಗೃತಿಯಿದೆ. ಕೆಲವು ವಿವಾಹಗಳಂತಹ ದೊಡ್ಡ ಸಮಾರಂಭಗಳಲ್ಲಿ ಕೂಡ ಪ್ಲಾಸ್ಟಿಕ್ ಲೋಟ, ಚಮಚಗಳ ಬಳಕೆ ಕಡಿಮೆಯಾಗಿದೆ. ಸಣ್ಣ ಪ್ರಮಾಣದ ಕ್ಯಾಟರಿಂಗ್ ಮಾಡುವವರು ಕೂಡ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬೀದಿ ವ್ಯಾಪಾರಿಗಳ ಸಂಘಟನೆ ಕೂಡ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ನಿಷೇಧಿಸುವುದಾಗಿ ಹೇಳಿಕೆ ನೀಡಿದೆ. ಜನರು ಕೂಡ ಈ ಕುರಿತು ಜಾಗೃತಿ ಹೊಂದಿದ್ದು, ಬಟ್ಟೆಯ ಬ್ಯಾಗ್ ಗಳನ್ನು ಕೊಂಡೊಯ್ಯುತ್ತಿದ್ದಾರೆ. ಘನತ್ಯಾಜ್ಯಗಳ ಸಂಗ್ರಹಣೆಯನ್ನು ಗಮನಿಸಿದರೆ ಅದರಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಮುಂದಿನ ಕೆಲ ತಿಂಗಳುಗಳಲ್ಲಿ ಪ್ಲಾಸ್ಟಿಕ್ ಬ್ಯಾಗುಗಳು ಕಣ್ಮರೆಯಾಗುತ್ತವೆ ಎಂಬ ನಂಬಿಕೆಯಿದೆ. ಇತ್ತೀಚೆಗೆ ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುಗಳ ಪರ್ಯಾಯ ವಸ್ತುಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು. ಜನರಿಂದ ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

4.ಸವಾಲಾಗಿರುವ ಕ್ಷೇತ್ರಗಳು ಯಾವುವು?

- ಪ್ಲಾಸ್ಟಿಕ್ ನಿಷೇಧ ಸವಾಲಾಗಿರುವ ಕ್ಷೇತ್ರಗಳು ಕೆಲವಿವೆ. ಜವಳಿ ವಲಯದಲ್ಲಿ ಇನ್ನೂ ಪ್ಲಾಸ್ಟಿಕ್ ಬಳಕೆ ಚಾಲ್ತಿಯಲ್ಲಿದೆ. ರೇಷ್ಟ್ಮೆಯಂತಹ ಬಟ್ಟೆಗಳು ಪ್ಲಾಸ್ಟಿಕ್ ಗಳಲ್ಲೇ ಬರುತ್ತವೆ. ಕುಕ್ಕರ್ ನಂತಹ ಪಾತ್ರೆಗಳನ್ನು ಕಂಪನಿಯೇ ಪ್ಲಾಸ್ಟಿಕ್ ನೊಂದಿಗೆ ಸುತ್ತಲಾಗುತ್ತದೆ. ಜೊತೆಗೆ, ಕೆ.ಆರ್.ಮಾರುಕಟ್ಟೆಯಂತಹ ಬೃಹತ್ ಮಾರುಕಟ್ಟೆ ಪ್ರದೇಶಗಳಲ್ಲಿ ಇನ್ನೂ ಅಲ್ಲಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬರುತ್ತಿದೆ. ಜೊತೆಗೆ, ತ್ಯಾಜ್ಯವನ್ನು ಎಸೆಯುವ ಕಪ್ಪು ಬ್ಯಾಗುಗಳ ಬಳಕೆ ವ್ಯಾಪಕವಾಗಿವೆ. ಇದರ ನಿಷೇಧದ ಕುರಿತು ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಾಲ್ಕು ವಿಶೇಷ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ, ತ್ಯಾಜ್ಯ ಸಂಗ್ರಹಣೆಯನ್ನು ಕೆಲವೆಡೆ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿವೆ. ಅವರಿಗೆ ಯಾರಿಗೂ ಉತ್ತರದಾಯಿಗಳಾಗಿರಲಿಲ್ಲ.

5.ಕಸ ಸಮಸ್ಯೆಗೆ ಬಿಬಿಎಂಪಿ ಸ್ಪಂದಿಸುತ್ತಿಲ್ಲವಲ್ಲ?

-ಕಸದ ವಿಂಗಡನೆ ಮುಖ್ಯ. ಆದರೆ ಈ ಕುರಿತು ಜನರಲ್ಲಿ ಗೊಂದಲಗಳಿವೆ. ಕಾನೂನಿನ ಪ್ರಕಾರ ಮನೆಗಳಲ್ಲೇ ಕಸ ವಿಂಗಡನೆ ಕಡ್ಡಾಯ. ಆದರೆ, ಬಿಬಿಎಂಪಿ ಈ ಕುರಿತು ಸ್ಪಷ್ಟ ಮಾರ್ಗ ಸೂಚಿಗಳನ್ನು ಹೊರತರುತ್ತಿಲ್ಲ. ವಿಂಗಡನೆಯ ನಂತರ ಹಸಿ ಕಸವನ್ನು ಪ್ಲಾಸ್ಟಿಕ್ ನಲ್ಲಿ ಇರಿಸಲಾಗುವುದು.ಅದಕ್ಕಾಗಿ ಕಸದ ಬುಟ್ಟಿಗಳನ್ನು ಬಳಸಬೇಕಾಗುತ್ತದೆ. ಆದರೆ ಅನೇಕ ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹಣೆಗಾರರು ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಸವನ್ನು ನಗರದ ಹೊರಗೆ ಸಾಗಿಸುತ್ತಾರೆ. ಇವರು ನಿಯಮ ಪಾಲಿಸುವುದಿಲ್ಲ. ಇದರಿಂದ ಕಸದ ಸಮಸ್ಯೆ ಮೂಲದಲ್ಲೇ ಪರಿಹಾರವಾಗಲು ಸಾಧ್ಯವಾಗುತ್ತಿಲ್ಲ.

6.ಕಸ ನಿರ್ವಹಣೆಯ ತೆಗೆದುಕೊಳ್ಳಬೇಕಾದ ಮೂಲ ಕ್ರಮಗಳೇನು?

-ಸ್ಥಳೀಯ ಆಡಳಿದಿಂದ ಸೂಕ್ತ ಬೆಂಬಲ ದೊರೆತರೆ ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಈಗಾಗಲೇ ಭೂಭರ್ತಿ ಪ್ರದೇಶಗಳು ಹೆಚ್ಚುತ್ತಿದೆ. ಇದಕ್ಕಾಗಿ ನೂರಾರು ಎಕರೆ ಜಮೀನು ಸ್ವಾದೀನಪಡಿಸಿಕೊಳ್ಳಲಾಗುತ್ತಿದೆ. ಕಸದ ಸಂಸ್ಕರಣೆ ಅತ್ಯಂತ ಕಡಿಮೆಯಿದೆ. ಉಳಿದ ಕಸವೆಲ್ಲಾ ಎಲ್ಲಿ ಹಾಕಬೇಕು? ಮೈಕ್ರೋ ಯೋಜನೆ, ವಾರ್ಡ್ ಮಟ್ಟದಲ್ಲಿ ಕಸದ ಸಾಗಣೆಯ ವಿಕೇಂದ್ರಿತ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಹಸಿ ಕಸವನ್ನು ಗೊಬ್ಬರ ಮಾಡಲು ಬಳಸಬೇಕು ಹಾಗೂ ಒಣ ಕಸವನ್ನು ಚಿಂದಿ ಆಯುವವರನ್ನು ಇಲ್ಲವೇ ಅದರ ಖರೀದಿಗೆ ಮುಂದೆ ಬರುವವರಿಗೆ ನೀಡಬಹುದು. ಇವುಗಳ ವಿಂಗಡನೆಯಾದ ಮೇಲೆ ಉಳಿಯುವ ಆರ್ ಡಿಎಫ್ ಅನ್ನು ಸಿಮೆಂಟ್ ವ್ಯಾಪಾರಿಗಳಿಗೆ ನೀಡಬಹುದು. ಈಗ ದೊಡ್ಡ ಮಟ್ಟದ ಹಣ ಕಸದ ಸಾಗಣೆಗಾಗಿ ವೆಚ್ಚವಾಗುತ್ತಿದೆ. ಇದನ್ನು ತಡೆಯಲು ವಾರ್ಡ್ ವಾರು ಸಂಸ್ಕರಣಾ ಘಟಕ ಸ್ಥಾಪನೆ ಅನಿವಾರ್ಯ.

7.ನಾಗರಿಕರ ಜವಾಬ್ದಾರಿಯಷ್ಟು?

-ಹೆಚ್ಚಿನ ಜವಾಬ್ದಾರಿ ನಾಗರಿಕರ ಮೇಲಿದೆ. ಬೆಂಗಳೂರಿನಲ್ಲಿ ಜೀವಿಸುವುದು ಉಚಿತವಲ್ಲ, ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳಿವೆ. ಮಳೆ ನೀರು ಕೊಯ್ಲಿನಂತೆ ಒಣ ಕಸ ಸಂಸ್ಕರಿಸುವುದು ಕೂಡ ಕಡ್ಡಾಯವಾಗಬೇಕು. ವಾರಕ್ಕೆ ಒಂದು ಇಲ್ಲವೇ ಎರಡು ಬಾರಿ ಒಣಕಸವನ್ನು ಚಿಂದಿ ಆಯುವವರು ಸಂಗ್ರಹಿಸಬೇಕು. ಎಲ್ಲಾ ಸರ್ಕಾರಿ ಕ್ವಾರ್ಟಸ್ ಗಳ ಆವರಣದಲ್ಲಿ ಕಸ ಸಂಸ್ಕರಣೆಯನ್ನು ಕಡ್ಡಾಯಗೊಳಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಕೂಡ ತಮ್ಮದೇ ವ್ಯವಸ್ಥೆ ಹೊಂದಿರಬೇಕು. ಇವೆಲ್ಲವೂ ಬೈಲಾಗಳಲ್ಲಿವೆ. ಅದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಸ್ಥಳೀಯ ಸಂಸ್ಥೆಗಳ ಹೊರೆ ಕಡಿಮೆಯಾಗುತ್ತದೆ.

8. ಕಸ ವಿಲೇವಾರಿಯಲ್ಲಿ ಖಾಸಗಿ ವ್ಯಕ್ತಿಗಳ ಹಾವಳಿ ಜಾಸ್ತಿಯಿದೆಯಲ್ಲಾ?

ಹೌದು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಕೆಲ ಖಾಸಗಿ ವ್ಯಕ್ತಿಗಳು ಕಸ ಸಂಗ್ರಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ಸರ್ಕಾರಿ ಸಂಸ್ಕರಣಾ ಘಟಕಗಳು ಕೂಡ ಕೆಲಸ ಮಾಡುತ್ತಿಲ್ಲ. ಬೆಂಗಳೂರು ನಗರದ ಹೊರವಲಯದ ಕೇಲವ ಭೂಭರ್ತಿಗಳಷ್ಟೇ ಅಲ್ಲದೆ, ಅನೇಕ ಜಮೀನುಗಳು, ಸೈಟುಗಳಲ್ಲಿ ಕಸ ಎಸೆಯಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಹಣ ಪಡೆದು ಸಹಕರಿಸುತ್ತಿದ್ದಾರೆ. ಈ ಸಂಬಂಧ ಜಂಟಿ ಸರ್ವೆ ನಡೆಸುವಂತೆ ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದೇನೆ.

ನಮ್ಮ ಬಳಿ ಹಾಗೂ ಬಿಬಿಎಂಪಿ ಬಳಿ ಕೂಡ ಹಂತಹಂತವಾಗಿ ತ್ಯಾಜ್ಯ ಸಂಸ್ಕರಣೆಯನ್ನು ನಿರ್ವಹಿಸುವ ಕುರಿತು ಸಂಪೂರ್ಣ ನೀಲಿನಕ್ಷೆ ಸಿದ್ಧವಿದೆ. ಆದರೆ, ಅದೆಷ್ಟರ ಮಟ್ಟಿಗೆ ಅಳವಡಿಕೆಯಾಗುತ್ತದೆ ಎಂಬುದರ ಮೇಲೆ ಸಮಸ್ಯೆಯ ಪರಿಹಾರ ನಿಂತಿದೆ. ಇದರ ಪರಿಹಾರಕ್ಕೆ ಕಠಿಣ ಆದೇಶದ ಅಗತ್ಯವಿದೆ. ಸೋಮವಾರ ಎಲ್ಲಾ ವಿಶೇಷ ಆಯುಕ್ತರ ಸಭೆ ನಡೆಸಿ ವರದಿ ತಯಾರಿಸಲಿದ್ದೇವೆ. 2020ರ ಫೆಬ್ರವರಿಯಲ್ಲಿ ನಡೆಲಿರುವ ವಿಚಾರಣೆ ವೇಳೆ ವರದಿ ಸಲ್ಲಿಸುತ್ತೇವೆ. ಅಷ್ಟರೊಳಗೆ ಬೈಲಾಗಳು ರಚನೆಯಾಗಿ ಜಾರಿಯಾಗುತ್ತವೆ ಎಂಬ ವಿಶ್ವಾಸ ನನ್ನದು.

9. ಈ ಸಮಸ್ಯೆಗೆ ಪರಿಹಾರವೇನು?

-ಡಿಸೆಂಬರ್ 14ರಂದು ಹೈಕೋರ್ಟ್ ನಲ್ಲಿ ಘನತ್ಯಾಜ್ಯ ಸಂಸ್ಕರಣೆ ಕುರಿತ ಪ್ರಕರಣದ ವಿಚಾರಣೆಯಿದೆ. ಅಲ್ಲಿಯವರೆಗೆ ನಾನೇನೂ ಹೇಳುವುದಿಲ್ಲ. ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸೋಣ. ಈ ಹಿಂದೆ ಕೂಡ ನ್ಯಾಯಾಲಯದ ಆದೇಶದ ಮೇರೆಗೆ ಸಾಕಷ್ಟು ಪ್ರಗತಿಯಾಗಿದೆ. ಆದರೆ, ಹೈಕೋರ್ಟ್ ನಿರ್ದೇಶನದಂತೆ ನಿರ್ಮಾಣಗೊಂಡ ಸಂಸ್ಕರಣಾ ಘಟಕಗಳ ಸುತ್ತಮುತ್ತ ವಸತಿ ಪ್ರದೇಶಗಳ ಬೆಳವಣಿಗೆಗೆ ಪಾಲಿಕೆ ಅವಕಾಶ ನೀಡಿದೆ. ಈಗ ಅಲ್ಲಿನ ಜನರು ದುರ್ವಾಸನೆಯ ದೂರು ಹೇಳುತ್ತಿದ್ದಾರೆ.

ತಮಿಳುನಾಡಿನಲ್ಲಿ ಕೆಲ ಕಾರ್ಪೊರೆಟ್ ಸಂಸ್ಥೆಗಳು ಕಸದ ಸಂಸ್ಕರಣೆಯ ಜವಾಬ್ದಾರಿ ಹೊತ್ತುಕೊಳ್ಳಲು ಮುಂದೆ ಬಂದಿವೆ. ಕಸ ಸಂಗ್ರಹಣೆಯನ್ನು ಕೂಡ ಅವೇ ನಿರ್ವಹಿಸುತ್ತಿದೆ. ಇದು ಚೆನ್ನೈ ನಗರದಲ್ಲಿ ಯಶಸ್ವಿಯಾಗಿ ಅಳವಡಿಕೆಯಾಗಿದೆ. ಬೆಂಗಳೂರು ನಗರದಲ್ಲಿ ನಾಗರಿಕರಿಗೆ ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸುವ ಆಸಕ್ತಿಯಿದೆ. ಅವರನ್ನು ಬಳಸಿಕೊಳ್ಳಬೇಕು. ಕೆಲ ವಾರ್ಡ್ ಗಳಲ್ಲಿ ಜನರೇ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆಡಳಿತ ಯಂತ್ರ ಸ್ವಲ್ಪ ಚುರುಕಾಗಿ ಕಾನೂನುಬಾಹಿರ ವ್ಯವಹಾರಗಳಿಗೆ ಕಡಿವಾಣ ಹಾಕಿ, ಸೂಕ್ತ ನಿಯಮಗಳನ್ನು ರೂಪಿಸಿ, ಅಳವಡಿಸಿದರೆ ಇದು ಬಗೆಹರಿಸಲಾಗದ ಸಮಸ್ಯೆಯೇನೂ ಅಲ್ಲ.

ಯುಎನ್ಐ ಎಸ್ಎಚ್ 1623