Sunday, Aug 25 2019 | Time 01:49 Hrs(IST)
National Share

ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು

ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು
ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು

ನವದೆಹಲಿ, ಜುಲೈ 16 (ಯುಎನ್ಐ) ವಿಧಾನಸಭಾ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಗೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕದ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

ಈ ಮೂಲಕ 13 ತಿಂಗಳ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸುವ ಹಾಗೂ ಶಾಸಕಾಂಗ ಮತ್ತು ನ್ಯಾಯಾಂಗ ನಡುವಿನ ಮಹತ್ವದ ಬೆಳವಣಿಗೆಯೆಂದೇ ಪರಿಗಣಿಸಲ್ಪಟ್ಟಿರುವ ಈ ಪ್ರಕರಣದ ತೀರ್ಪಿನ ಬಗ್ಗೆ ದೇಶಾದ್ಯಂತ ವ್ಯಾಪಕ ಕುತೂಹಲ ವ್ಯಕ್ತವಾಗಿದೆ.

ಸುಮಾರು 2.30 ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, 'ಬುಧವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಾಗುವುದು' ಎಂದು ತಿಳಿಸಿತು.

ನ್ಯಾಯಪೀಠ ಸೋಮವಾರ ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೊಹಟಗಿ, ಸ್ಪೀಕರ್ ಪರವಾಗಿ ಡಾ.ಅಭಿಷೇಕ್ ಮನುಸಿಂಘ್ವಿ, ರಾಜ್ಯದ ಮುಖ್ಯಮಂತ್ರಿಯ ಪರವಾಗಿ ಡಾ.ರಾಜೀವ್ ಧವನ್ ಅವರ ಸುದೀರ್ಘ ವಾದ ಆಲಿಸಿತ್ತು.

ಶಾಸಕರ ಪರ ವಕೀಲರು, ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ಸ್ಪೀಕರ್ ತಮ್ಮ ರಾಜೀನಾಮೆ ಅಂಗೀಕರಿಸದೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಂಗಳವಾರ ಬೆಳಗ್ಗೆ, ಮುಕುಲ್ ರೋಹಟಗಿ ಅವರು, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಭೀತಿಯಿಂದ ಶಾಸಕರ ರಾಜೀನಾಮೆ ಅಂಗೀಕರಿಸುತ್ತಿಲ್ಲ. ಜುಲೈ 10ರಂದೇ ಎಲ್ಲಾ 10 ಅರ್ಜಿದಾರರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ಆ ದಿನ ಕೇವಲ ಇಬ್ಬರ ವಿರುದ್ಧ ಮಾತ್ರ ಅನರ್ಹತೆಯ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ವಾದಿಸಿದರು.

ಸಂವಿಧಾನದ 190ನೇ ಪರಿಚ್ಛೇದ ಹಾಗೂ 10ನೇ ಕಲಂ ಪ್ರಕಾರ ಸ್ಪೀಕರ್ ಪಾತ್ರ ಭಿನ್ನವಾಗಿದೆ. ಆದ್ದರಿಂದ ಅನರ್ಹತೆ ಪ್ರಕ್ರಿಯೆಯ ವಿಳಂಬ ರಾಜೀನಾಮೆ ಅಂಗೀಕಾರಕ್ಕೆ ಕಾರಣವಾಗಲಾರದು. ಜೊತೆಗೆ, ಮತ್ತೆ ಐವರು ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಕೂಡ ಸ್ಪೀಕರ್ ಅಂಗೀಕರಿಸಿಲ್ಲ. ಇಂತಹ ಅಸಮರ್ಥ ಪ್ರಕ್ರಿಯೆಗಳು ಸೂಕ್ತವಲ್ಲ ಎಂದರು.

ಇನ್ನೊಂದೆಡೆ, ಸ್ಪೀಕರ್ ಪರ ವಕೀಲರು, ಅತೃಪ್ತರ ರಾಜೀನಾಮೆ ಪತ್ರವನ್ನು ಪರಿಶೀಲಿಸಿ, ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಇಲ್ಲವೇ ಒತ್ತಡಕ್ಕೊಳಗಾಗಿದ್ದರೆ ಎಂಬುದನ್ನು ಪರಿಶೀಲಿಸಲು ಕಾಲಾವಧಿ ಬೇಕು ಎಂದು ವಾದಿಸಿದರು.

ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿರುವ ಕಾರಣವೇನು ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ರೋಹಟಗಿ ಅವರು, ಶಾಸಕರ ವಿರುದ್ಧ ಅನರ್ಹತೆಯ ಯಾವುದೇ ಸ್ಪಷ್ಟ ಕಾರಣಗಳಿಲ್ಲ ಎಂದರು.

ಸ್ಪೀಕರ್ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಅನರ್ಹತೆ ಅರ್ಜಿಗೆ ಮುನ್ನ ಸಲ್ಲಿಕೆಯಾಗಿರುವ ರಾಜೀನಾಮೆ ಅರ್ಜಿ ಕ್ರಮಬದ್ಧವಾಗಿರಲಿಲ್ಲ. ರಾಜೀನಾಮೆ ಪತ್ರ ಹಾಗೂ ಅನರ್ಹತೆ ಅರ್ಜಿಗಳ ನಡುವಿನ ದಿನಾಂಕ, ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದರು.

ಶಾಸಕರ ರಾಜೀನಾಮೆ ಸಂಬಂಧ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಜುಲೈ 12ರಂದು ನೀಡಿದ್ದ ಆದೇಶವನ್ನು ತೆರವುಗೊಳಿಸಿ, ಸ್ಪೀಕರ್ ಅವರಿಗೆ ಬುಧವಾರದಂದು ರಾಜೀನಾಮೆ ಹಾಗೂ ಅನರ್ಹತೆ ಅರ್ಜಿಗಳ ಕುರಿತು ನಿರ್ಧರಿಸಲು ಅನುವು ಮಾಡಿಕೊಡಬೇಕು ಎಂದು ಸಿಂಘ್ವಿ ಮನವಿ ಮಾಡಿದರು.



ಜುಲೈ 11ರವರೆಗೆ ಯಾವುದೇ ಶಾಸಕರು ರಾಜೀನಾಮೆ ಕುರಿತು ಸ್ಪೀಕರ್ ಮುಂದೆ ಹಾಜರಾಗಿ ವಿವರಣೆ ನೀಡಿರಲಿಲ್ಲ. ಅವರು ಮುಂಬೈ ಹಾಗೂ ಸುಪ್ರೀಂಕೋರ್ಟ್ ಗೆ ಹೋದರೆ ಹೊರತು ಸ್ಪೀಕರ್ ಬಳಿ ಹೋಗಲಿಲ್ಲ. ಆದ್ದರಿಂದ ಎಲ್ಲಾ ರಾಜೀನಾಮೆಗಳು ಅನರ್ಹತೆ ಅರ್ಜಿಯ ನಂತರ ಪರಿಗಣನೆಯಾಗುತ್ತವೆ. ಈಗ ನ್ಯಾಯಾಲಯ ಸ್ಪೀಕರ್ ಗೆ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಬೇಕು ಎಂದರು.

ಯುಎನ್ಐ ಎಸ್ಎಚ್ ವಿಎನ್ 1844