ಬೆಳಗಾವಿ, ಡಿ 2(ಯುಎನ್ಐ) ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಂತರ ರಾಜ್ಯದಲ್ಲಿ ಜೆಡಿ (ಎಸ್) ಪಕ್ಷದೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಕ್ತ ಮನಸ್ಸು ಹೊಂದಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಜಾಪ್ರಭುತ್ವವನ್ನು ಅಣಕ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆರಿದೆ. ಉಪಚುನಾವಣೆ ಫಲಿತಾಂಶಗಳು ಹೊರಬಿದ್ದನಂತರ. ರಾಜ್ಯ ಬಿಜೆಪಿ ಸರ್ಕಾರ ಅಂತ್ಯ ಕಾಣಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿಸೆಂಬರ್ ೯ ರಂದು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ಶಾಸಕರ ಖರೀದಿ ವ್ಯಾಪಾರ ನಡೆಸುತ್ತಿದ್ದು, ಬಿಜೆಪಿ ಕುದುರೆ ವ್ಯಾಪಾರ ಪ್ರವರ್ತಕ ಪಕ್ಷವಾಗಿದೆ ಎಂದು ಆರೋಪಿಸಿದರು. ಅನರ್ಹ ಶಾಸಕರಿಗೆ ಬಿಜಪಿ ನಾಯಕರು ಅಮಿಷವೊಡ್ಡಿದ್ದ ಪರಿಣಾಮವೇ ರಾಜ್ಯದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಸರ್ಕಾರ ಪತನಗೊಳ್ಳಲು ಕಾರಣ ಎಂದರು
ಕರ್ನಾಟಕದ ಮತದಾರರು, ಅತ್ಯಂತ ಪ್ರಬುದ್ಧರಾಗಿದ್ದು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸರಿಯಾದ ದಾರಿ ತೋರಿಸಲಿದ್ದಾರೆ ಉಪಚುನಾವಣೆ ಫಲಿತಾಂಶ ಕೇಸರಿ ಪಕ್ಷಕ್ಕೆ ಕಹಿ ಪಾಠವಾಗಲಿದೆ ಎಂದು ವೇಣುಗೋಪಾಲ್ ಭವಿಷ್ಯ ನುಡಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ ಕುರಿತಂತೆ, ಕಾಂಗ್ರೆಸ್ ಎಂದೂ ತನ್ನ ತತ್ವ ಸಿದ್ದಾಂತಗಳೊಂದಿಗೆ ಎಂದೂ ರಾಜೀಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯುಎನ್ಐ ಕೆವಿಆರ್