ನವದೆಹಲಿ, ಫೆ 22(ಯುಎನ್ಐ) ರಕ್ಷಣಾ ವಲಯದ ಅಗತ್ಯಗಳಿಗಾಗಿ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಭಾರತಕ್ಕೆ ಪೂರ್ವ ಕಾಲದಿಂದಲೂ ಭಾರಿ ಅನುಭವ ಹೊಂದಿರುವ ಸುದೀರ್ಘ ಇತಿಹಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶ ಸ್ವಾತಂತ್ರ್ಯಪಡೆದ ನಂತರ ಅದನ್ನು ಬಲಪಡಿಸಲು ಯಾರೂ ಪ್ರಯತ್ನ ನಡೆಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ರಕ್ಷಣಾ ಉತ್ಪನ್ನಗಳ ತಯಾರಿ ಸಾಮರ್ಥ್ಯವನ್ನು ಹೆಚ್ಚಿಸಲು ದೇಶ ಬದ್ಧವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಬಜೆಟ್ನಲ್ಲಿ ರಕ್ಷಣಾ ವಲಯದ ಪ್ರಸ್ತಾವನೆಗಳ ಅನುಷ್ಠಾನ ಕುರಿತು ಸೋಮವಾರ ವೆಬ್ನಾರ್ನಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲು ನಮ್ಮಲ್ಲಿ ನೂರಾರು ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮಗಳು ಇದ್ದವು. ಜಾಗತಿಕ ಸಮರದ ಸಮಯದಲ್ಲಿ, ಭಾರತದಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗುತ್ತಿತ್ತು. ಆದರೆ, ದೇಶ ಸ್ವಾತಂತ್ರ್ಯಹೊಂದಿದ ನಂತರ ಈ ವ್ಯವಸ್ಥೆ ನಿರೀಕ್ಷಿಸಿದಷ್ಟು ಬಲಗೊಳ್ಳಲಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪ್ರತಿಭೆ ಹಾಗೂ ಸಾಮರ್ಥ್ಯಗಳ ಹೊರತಾಗಿಯೂ, ಶಸ್ತ್ರಾಸ್ತ್ರಗಳ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಯಾರೂ ಗಮನಹರಿಸಲಿಲ್ಲ, ಆದರೆ, ಆಮದು ಮಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡಲಾಯಿತು. ಇ ದು ನಾವು ಹೆಮ್ಮೆಪಡುವ ವಿಷಯವಲ್ಲ. ಈಗ ಭಾರತ ಆ ಪರಿಸ್ಥಿತಿಯನ್ನು ಬದಲಾಯಿಸುವ ಕೆಲಸ ಮಾಡುತ್ತಿದೆ. ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ, ”ಎಂದು ಮೋದಿ ಹೇಳಿದರು.
ಈ ಸಂದರ್ಭದಲ್ಲಿ, ಡಿ-ಲೈಸೆನ್ಸಿಂಗ್, ಡಿ-ರೆಗ್ಯುಲೇಷನ್ ಮತ್ತು ರಫ್ತು ಪ್ರೋತ್ಸಾಹ ಸೇರಿದಂತೆ ರಕ್ಷಣಾ ಕ್ಷೇತ್ರದ ಉತ್ಪಾದನಾ ವ್ಯವಸ್ಥೆಗೆ ಉತ್ತೇಜನ ನೀಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೋದಿ ಪ್ರಸ್ತಾಪಿಸಿದರು.
ಯುಎನ್ಐ ಕೆವಿಆರ್ 1428