ನವದೆಹಲಿ, ಡಿ 2(ಯುಎನ್ಐ) ಇಸ್ರೇಲ್ ನ ಎನ್ ಎಸ್ ಓ ತಂತ್ರಜ್ಞಾನ ಗುಂಪು ಅಭಿವೃದ್ದಿಪಡಿಸಿರುವ ಸ್ಪೈವೇರ್ ಪೆಗಾಸಸ್ ಬಳಸಿ ಖಾತೆದಾರ ಮೇಲೆ ಕಣ್ಗಾವಲು ನಡೆಸುವುದನ್ನು ತಿಳಿಸುವಲ್ಲಿ ವಿಫಲವಾಗಿರುವ ವಾಟ್ಸ್ ಆ್ಯಪ್ ಮೆಸೆಂಜರ್ ವಿರುದ್ದ ಆರ್ ಎಸ್ ಎಸ್ ಸಿದ್ಧಾಂತಿ ಕೆ.ಎನ್. ಗೋವಿಂದಾಚಾರ್ಯ ಸಲ್ಲಿಸಿರುವ ಆರ್ಜಿಯಲ್ಲಿ ಲೋಪಗಳಿರುವ ಕಾರಣ ಅದನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ಆರ್ಜಿಯಲ್ಲಿ ಹಲವು ಲೋಪಗಳಿದ್ದು, ಅದನ್ನು ಹಿಂತೆಗೆದುಕೊಳ್ಳುವಂತೆ ಆರ್ಜಿದಾರ ಕೆ.ಎನ್. ಗೋವಿಂದಾಚಾರ್ಯರಿಗೆ ಸೂಚಿಸಿದೆ.
ಆರ್ಜಿ ಹಿಂಪಡೆದು ಮತ್ತೊಂದು ಆರ್ಜಿ ಸಲ್ಲಿಸಲು ನ್ಯಾಯಪೀಠ ಅವಕಾಶ ಕಲ್ಪಿಸಲಾಗಿದೆ ಆ್ಯಪ್ನಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಇದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ, ಆದರೆ ಯಾವುದೇ ಕಣ್ಗಾವಲು ನಡೆಯುತ್ತಿದೆ ಎಂಬುದನ್ನು ತಿಳಿಸಲು ವಿಫಲವಾಗಿದೆ ಎಂದು ದೂರಿ ಆರ್ಜಿದಾರ ಗೋವಿಂದಾಚಾರ್ಯ ಅವರು ಫೇಸ್ಬುಕ್ ಅಂಗಸಂಸ್ಥೆಯ ವಿರುದ್ಧ ಕ್ರಿಮಿನಲ್ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ವಿಷಯದಲ್ಲಿ ಕೋರ್ಟ್ ನಿಗಾವಣೆಯಲ್ಲಿ ವಿಶೇಷ ತನಿಖಾ ತಂಡ ರಚನೆಗೆ ಆದೇಶಿಸಬೇಕು ಎಂದು ಆರ್ಜಿದಾರರು ಕೋರಿದ್ದರು.
ಹಿರಿಯ ವಕೀಲ ವಿಕಾಸ್ ಸಿಂಗ್, ವಿರಾಗ್ ಗುಪ್ತಾ ಆರ್ಜಿದಾರರ ಪರ ವಾದಿಸಿದರು. ಫೇಸ್ ಬುಕ್ ಅಥವಾ ವಾಟ್ಸ್ ಆ್ಯಪ್ ಸುಳ್ಳು ಹೇಳಿದೆ ಎಂಬುದಕ್ಕೆ ಅದರ ವಿರುದ್ಧ ಯಾವುದಾದರೂ ಪುರಾವೆ ಅಥವಾ ದಾಖಲೆ ಇದ್ದರೆ ಅದನ್ನು ಒದಗಿಸುವಂತೆ ನ್ಯಾಯಪೀಠ ಗೋವಿಂದಾ ಚಾರ್ಯ ಅವರಿಗೆ ಸೂಚಿಸಿತು.
ಆರ್ಜಿದಾರರ ಪರ ವಕೀಲರು, ತಿದ್ದಪಡಿ ಆರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು
ಈ ವಿಷಯ ಹೈಕೋರ್ಟ್ ನಲ್ಲಿ ಏಕೆ ಪ್ರಶ್ನಿಸಬಾರದು ಎಂದು ನ್ಯಾಯಪೀಠ ಮರು ಪ್ರಶ್ನಿಸಿತು.
ವಾಟ್ಸ್ ಆ್ಯಪ್ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಈ ಸ್ವರೂಪದ ಪ್ರಕರಣಗಳು ಸುಪ್ರೀಂ ಕೋರ್ಟ್ ಗೆ ವರ್ಗಾವಣೆಗೊಳ್ಳುತ್ತವೆ ಎಂದು ವಾದಿಸಿದರು.
ಈ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂಬುದರಲ್ಲಿ ಹೆಚ್ಚು ಸಕಾರಣಗಳಿವೆ ಎಂದು ಗೋವಿಂದಾಚಾರ್ಯ ವಕೀಲರು ಹೇಳಿದರು.
ಭಾರತೀಯ ಬಳಕೆದಾರರಿಗೆ ಮಧ್ಯಂತರ ನಿಯಮಾವಳಿಗಳನ್ನು ಜಾರಿಗೊಳಿಸದ ಕಾರಣ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ವಾದಿಸಿದರು. ಆರ್ಜಿ ಹಿಂಪಡೆದು ಹೊಸ ಆರ್ಜಿ ಸಲ್ಲಿಸಲು ಗೋವಿಂದಚಾರ್ಯರಿಗೆ ನ್ಯಾಯಪೀಠ ಅನುಮತಿ ನೀಡಿತು.
ವಾಟ್ಸ್ ಆ್ಯಪ್, ಫೇಸ್ ಬುಕ್, ಎನ್ ಎಸ್ ಓ ಹಾಗೂ ಇತರ ಇಬ್ಬರ ವಿರುದ್ದ ದಾಖಲಾಗಿರುವ ದೂರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ/ ನ್ಯಾಯಾಲಯ ನಿಗಾದಲ್ಲಿ ಎಸ್ ಐಟಿ ತನಿಖೆ ನಡೆಸಬೇಕೆಂದು ಗೋವಿಂದಾಚಾರ್ಯ ತಮ್ಮ ಆರ್ಜಿಯಲ್ಲಿ ಮನವಿ ಮಾಡಿದ್ದರು.
ಸರ್ಕಾರ ಪೆಗಾಸಿಸ್ ಸ್ಪೈವೇರ್ ಅನ್ನು ಅನಧಿಕೃತವಾಗಿ ಬಳಸುವುದನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಬೇಕೆಂದು ಆರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ಯುಎನ್ಐ ಕೆವಿಆರ್