Wednesday, Jun 3 2020 | Time 07:35 Hrs(IST)
Sports Share

ಇಂಗ್ಲೆಂಡ್‌ಗೆ ಕ್ರಿಕೆಟ್‌ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್‌

ಇಂಗ್ಲೆಂಡ್‌ಗೆ ಕ್ರಿಕೆಟ್‌ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್‌
ಇಂಗ್ಲೆಂಡ್‌ಗೆ ಕ್ರಿಕೆಟ್‌ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್‌

ನವದೆಹಲಿ, ಜೂ 12 (ಯುಎನ್‌ಐ) ಇಂಗ್ಲೆಂಡ್ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಸಂಸದ ಶಿಶಿ ತರೂರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರ ಸೌಥ್‌ಹ್ಯಾಮ್ಟನ್‌ನಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಪಂದ್ಯ ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿತ್ತು. ಅಲ್ಲದೇ, ಮಂಗಳವಾರ ಬ್ರಿಸ್ಟಲ್‌ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಯಿತು. ಜತೆಗೆ, ಜೂ. 7 ರಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯವೂ ಮಳೆಯಿಂದ ರದ್ದಾಗಿತ್ತು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾದಂತಾಯಿತು.

ಇದೀಗ ಟೂರ್ನಿಯ ಹೈವೋಲ್ಟೇಜ್‌ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮಳೆ ಭೀತಿ ಶುರುವಾಗಿದೆ.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಶಶಿ ತರೂರ್ " ಜಗತ್ತಿನ ಹವಾಮಾನ ಸಮಸ್ಯೆ ನಿವಾರಣೆ ಆಗುವವರೆಗೂ ಕ್ರಿಕೆಟ್‌ ಟೂರ್ನಿ ಆತಿಥ್ಯ ವಹಿಸುವುದಕ್ಕೆ ಇಂಗ್ಲೆಂಡ್‌ಗೆ ನಿಷೇಧ ಹೇರಬೇಕು ಅಥವಾ ಇಂಗ್ಲೆಂಡ್‌ನಲ್ಲಿರುವ ಎಲ್ಲ ಕ್ರೀಡಾಂಗಣಗಳಿಗೂ ಮೇಲ್ಛಾವಣೆ ಹಾಕಲು ಕ್ರಮಕೈಗೊಳ್ಳಬೇಕು" ಎಂದು ಹೇಳಿದ್ದಾರೆ.

ಮೂರು ಪಂದ್ಯಗಳ ರದ್ದಾದ ಬಳಿಕ ಪ್ರತಿಕ್ರಿಯಿಸಿದ ಐಸಿಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ರಿಚರ್ಡ್‌ಸನ್‌ "ಪ್ರತಿಯೊಂದು ಪಂದ್ಯಕ್ಕೂ ಮೀಸಲು ದಿನ ನೀಡುವುದರಿಂದ ಐಸಿಸಿಯು ಟೂರ್ನಿಯ ಅವಧಿಯನ್ನು ವಿಸ್ತರಿಸುವುದು ಅಗತ್ಯವಾಗಿರುತ್ತದೆ. ಅಲ್ಲದೇ, ಇದನ್ನು ಪ್ರಾಯೋಗಿಕವಾಗಿ ತರುವುದು ಕೂಡ ಕಷ್ಟವಾಗಲಿದೆ" ಎಂದು ಹೇಳಿದ್ದರು.

" ಮೀಸಲು ದಿನಗಳಿಗೆ ಮೊರೆ ಹೋದರೆ ಇದು ಟೂರ್ನಿಯ ಸ್ವಭಾವದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪಿಚ್‌ ಸಿದ್ಧತೆ, ತಂಡದ ಚೇತರಿಕೆ, ಪ್ರಯಾಣದ ದಿನಗಳು, ಸೌಕರ್ಯ ಮತ್ತು ಸ್ಥಳ ಲಭ್ಯತೆ, ಪಂದ್ಯಾವಳಿಯ ಸಿಬ್ಬಂದಿ, ಸ್ವಯಂ ಸೇವಕ ಸಿಬ್ಬಂದಿ, ಟೂರ್ನಿಯ ಅಧಿಕಾರಿಗಳ ಲಭ್ಯತೆ, ಪಂದ್ಯ ವೀಕ್ಷಣೆಯ ಪ್ರೇಕ್ಷಕರ ಪ್ರಯಾಣ ಇವುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಗುಂಪು ಹಂತದ ಮೀಸಲು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯವಿರುತ್ತದೆ." ಎಂದು ವಿವರಿಸಿದ್ದರು.

ಯುಎನ್‌ಐ ಆರ್‌ಕೆ ಎಎಚ್‌ 1205