Monday, Oct 26 2020 | Time 03:09 Hrs(IST)
Sports Share

ಡುಪ್ಲೆಸಿಸ್ ಅರ್ಧಶತಕ, ರಾಯುಡು, ಜಡ್ಡು ಅಬ್ಬರ

ಶಾರ್ಜಾ, ಅ.17 (ಯುಎನ್ಐ)- ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ (58) ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ (33) ಇವರುಗಳ ಸೊಗಸಾದ ಆಟದ ನೆರವಿನಿಂದ ಶನಿವಾರ ನಡೆದ ಐಪಿಎಲ್ ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 180 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ಗೆ 179 ರನ್ ಸೇರಿಸಿತು.
ಆರಂಭಿಕರಾಗಿ ಬಡ್ತಿ ಪಡೆದಿರುವ ಸ್ಯಾಮ್ ಕರನ್ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್ ಗೆ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಜೋಡಿ ತಂಡಕ್ಕೆ ನೆರವಾಯಿತು. ಈ ಜೋಡಿ ತಂಡ ಹಾಕಿಕೊಂಡ ಯೋಜನೆಯಂತೆ ಬ್ಯಾಟ್ ಮಾಡಿತು. ಆರಂಭದಲ್ಲಿ ಬಿದ್ದ ವಿಕೆಟ್ ಮಹತ್ವ ಅರಿತು ಬ್ಯಾಟ್ ಮಾಡಿದ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು.
ಈ ಜೋಡಿ 11.4 ಓವರ್ ಗಳವರೆಗೆ ಬ್ಯಾಟಿಂಗ್ ನಡೆಸಿ 87 ರನ್ ಸೇರಿಸಿತು. ಶೇನ್ ವ್ಯಾಟ್ಸನ್ 28 ಎಸೆತಗಳಲ್ಲಿ 36 ರನ್ ಸಿಡಿಸಿ ಔಟ್ ಆದರು.
ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಡುಪ್ಲೆಸಿಸ್ ಬಲಿಷ್ಠ ಡೆಲ್ಲಿ ಬೌಲಿಂಗ್ ಪಡೆಯನ್ನು ದಂಡಿಸಿದರು. ಇವರು 47 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 58 ರನ್ ಸಿಡಿಸಿದರು. ನಾಯಕ ಮಹೇಂದ್ರ ಸಿಂಗ್ 3 ರನ್ ಬಾರಿಸಿ ಔಟ್ ಆದರು.
ಐದನೇ ವಿಕೆಟ್ ಗೆ ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಜಡೇಜಾ ಕೇವಲ 33 ಎಸೆತಗಳಲ್ಲಿ 4 ಸಿಕ್ಸರ್ ಸಹಾಯದಿಂದ 33 ರನ್ ಸಿಡಿಸಿ ಅಜೆಯರಾಗುಳಿದರು. ರಾಯುಡು 45 ಗಳಿಸಿದರು.
ಡೆಲ್ಲಿ ತಂಡದ ಪರ ಎನ್ರಿಚ್ ನೋರ್ಟ್ಚೆ ಎರಡು, ತುಶಾರ್ ದೇಶಪಾಂಡೆ, ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು.
ಯುಎನ್ಐ ವಿಎನ್ಎಲ್ 2126