Tuesday, Oct 22 2019 | Time 08:46 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
business economy Share

ಡೈರಿ ಉತ್ಪನ್ನಗಳ ಆಮದಿಗೆ ಮುಕ್ತ ವ್ಯಾಪಾರ ಒಪ್ಪಂದದಡಿ ಅವಕಾಶ : ಭಾರತದ ಡೈರಿ ಉದ್ಯಮಕ್ಕೆ ಸಂಕಷ್ಟ

ಬೆಂಗಳೂರು, ಅ 9 (ಯುಎನ್ಐ) ಮುಕ್ತ ವ್ಯಾಪಾರ ಒಪ್ಪಂದ / ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕತೆ ಪಾಲುದಾರಿಕೆ) ಅಡಿಯಲ್ಲಿ ಯಾವುದೇ ಡೈರಿ ಉತ್ಪನ್ನಗಳ ಆಮದನ್ನು ಅನುಮತಿಸುವುದು ಭಾರತೀಯ ಡೈರಿ ಉದ್ಯಮ ಮತ್ತು ದೇಶದ ಇಡೀ ಕೃಷಿ ಸಮುದಾಯಕ್ಕೆ ಸವಾಲಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿ ಈ ಒಪ್ಪಂದಕ್ಕೆ ಅನುಮತಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ದೇಶದಲ್ಲಿ ಹಾಲು ಉತ್ಪಾದನೆಯ ಬೇಡಿಕೆ ಹೆಚ್ಚುವುದಲ್ಲದೆ, ಡೈರಿ ಉತ್ಪನ್ನಗಳನ್ನು ರಫ್ತು ಮಾಡುವ ಅವಕಾಶ ಇದೆ ಎಂದು ಫೆಬ್ರವರಿ 2018ರ ನೀತಿ ಆಯೋಗದ ವರದಿ ತಿಳಿಸಿದೆ.

2033 ರ ವೇಳೆಗೆ 292 ದಶಲಕ್ಷ ಮೆಟ್ರಿಕ್ ಟನ್ ಮತ್ತು ಹಾಲಿನ ಉತ್ಪಾದನೆ 330 ದಶಲಕ್ಷ ಮೆಟ್ರಿಕ್ ಟನ್ ಗೆ ಬೇಡಿಕೆ ಹೆಚ್ಚುವ ಅಂದಾಜಿದೆ.


ನ್ಯೂಜಿಲೆಂಡ್ / ಆಸ್ಟ್ರೇಲಿಯಾ ಅಥವಾ ಯುರೋಪಿಯನ್ ಮಾದರಿಯ ಡೈರಿ ವ್ಯವಸ್ಥೆ ಭಾರತದಲ್ಲಿ ಇಲ್ಲ. ಹೈನುಗಾರಿಕೆ ಇನ್ನೂ ಕೃಷಿ/ಕಾರ್ಮಿಕ ಆಧಾರಿತವಾಗಿದೆ ಮತ್ತು ಅನೇಕ ಭೂ ರಹಿತ ಕೃಷಿ ಕಾರ್ಮಿಕರು ಮುಖ್ಯವಾಗಿ ಡೈರಿ ಕೃಷಿ ಅವಲಂಬಿಸಿದ್ದಾರೆ.


ದೇಶದಲ್ಲಿ ಕ್ಷೀರ ಮತ್ತು ಕ್ಷೀರೋತ್ಪನ್ನಗಳ ಬಳಕೆ ಹೆಚ್ಚಿದೆ. ನ್ಯೂಜಿಲ್ಯಾಂಡ್ ತನ್ನ ಒಟ್ಟು ಹಾಲು ಉತ್ಪಾದನೆಯ 93% ರಷ್ಟನ್ನು ಮುಕ್ತ ವ್ಯಾಪಾರ ಒಪ್ಪಂದ ಅಡಿಯಲ್ಲಿ ಭಾರತಕ್ಕೆ ರಫ್ತು ಮಾಡುವ ಸಾಧ್ಯತೆ ಹೆಚ್ಚಿದೆ.



ನ್ಯೂಜಿಲೆಂಡ್ ನ ಜನಸಂಖ್ಯೆ 42 ಲಕ್ಷವಿದ್ದು 3 ಲಕ್ಷ ಕಾರ್ಮಿಕರು ಕೃಷಿ ಅವಲಂಬಿಸಿದ್ದಾರೆ. ಅಂದರೆ ಜನಸಂಖ್ಯೆಯ ಶೇ 7 ರಷ್ಟು ಜನರು ಮಾತ್ರ ಕೃಷಿ ಕಾರ್ಮಿಕರಾಗಿದ್ದಾರೆ. ಆದರೆ ಭಾರತದ ಜನಸಂಖ್ಯೆ 130 ಕೋಟಿ ಇದ್ದು 62 ಕೋಟಿ ಜನರು ಅಂದರೆ ಸುಮಾರು ಶೇ 52 ರಷ್ಟು ಜನಸಂಖ್ಯೆ ಕೃಷಿಯನ್ನು ಅವಲಂಬಿಸಿದೆ. ನ್ಯೂಜಿಲೆಂಡ್ ನಲ್ಲಿ 240 ಲಕ್ಷ ಮೆಟ್ರಿಕ್ ಟನ್ ಹಾಲು ಉತ್ಪಾದನೆಯಾದರೆ ಭಾರತದಲ್ಲಿ ಅದರ ಸುಮಾರು ಎಂಟು ಪಟ್ಟು ಅಂದರೆ 1800 ಲಕ್ಷ ಮೆಟ್ರಿಕ್ ಟನ್ ಹಾಲು ಉತ್ಪಾದನೆಯಾಗುತ್ತಿದ್ದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) 10 ಸದಸ್ಯರು ಮತ್ತು ಅದರ 6 ಪಾಲುದಾರರಾದ ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಏಷಿಯಾನ್ ಗುಂಪುಗಳಾದ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್ ಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು (ಆರ್ ಇ ಸಿ ಪಿ) ಪ್ರಸ್ತಾಪಿಸಲಾಗಿದ್ದು ಈ ವರ್ಷದ ನವೆಂಬರ್ ವೇಳೆ ಒಪ್ಪಂದ ಅಂತಿಮಗೊಳಿಸಲು ನಿರ್ಧರಿಸಿವೆ.

ಈ ಒಪ್ಪಂದದಿಂದಾಗಿ ಆಮದು ಹೆಚ್ಚಾಗಿ ದೇಶೀಯ ಮಾರುಕಟ್ಟೆ ನಶಿಸಿಹೋಗುವ ಅಪಾಯವಿದ್ದು, ಭಾರತದಲ್ಲಿ ಡೈರಿ ಉದ್ಯಮ ಕುಸಿದು ಜನರು ತೀವ್ರ ಸಂಕಷ್ಟ ಎದುರಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿನ ಡೈರಿ ಉದ್ಯಮ ಸಹಕಾರ ಮಾದರಿಯಲ್ಲಿ ನಡೆಯುತ್ತಿದ್ದು ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅತ್ಯಂತ ಉತ್ತಮ ಬೆಲೆಗೆ ಪಡೆಯಲು ಸಹಾಕಾರಿಯಾಗಿದೆ. ಇತರ ದೇಶಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಮಾಣ ಶೇ 30 – 35 ರಷ್ಟಿದ್ದರೆ ಭಾರತದಲ್ಲಿ ಶೇ 75 ರಷ್ಟಿದೆ.

ಆದ್ದರಿಂದ, ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕ್ಕೆ ಒಪ್ಪದಿದ್ದರೆ ಮಾತ್ರ ಭಾರತೀಯ ಡೈರಿ ಉದ್ಯಮ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಹಾಲು ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡಲು ಸಹಕಾರಿಯಾಗಿದೆ.

ಎಫ್‌ಟಿಎ / ಆರ್‌ಸಿಇಪಿ ಒಪ್ಪಂದಗಳ ಅಡಿಯಲ್ಲಿ ಇತರ ದೇಶಗಳ ಬೆರಳೆಣಿಕೆಯಷ್ಟು ರೈತರಿಗೆ ಆಮದು ಮಾಡಿಕೊಳ್ಳಲು ನಮ್ಮ ಮಾರುಕಟ್ಟೆಯನ್ನು ನೀಡುವ ಬದಲು ಸ್ಥಳೀಯ ಉತ್ಪಾದಕರಿಗೆ ಸ್ಥಳೀಯ ಮಾರುಕಟ್ಟೆ ಬೇಡಿಕೆಯ ಪ್ರಕಾರ ಉತ್ಪಾದಿಸಲು ಪ್ರೋತ್ಸಾಹಿಸಿದರೆ ಮಾತ್ರ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಯಶಸ್ವಿಯಾಗಬಹುದು.

ಯಾವುದೇ ದೇಶದೊಂದಿಗೆ ಆರ್‌ಸಿಇಪಿ / ಎಫ್‌ಟಿಎ ಅಡಿಯಲ್ಲಿ ಡೈರಿ ಮಾರುಕಟ್ಟೆಯನ್ನು ಮುಕ್ತಗೊಳಿಸಿದರೆ ದೇಶೀಯ ಹಾಲು ಉತ್ಪಾದಕರ ಆದಾಯ ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.


ಹೀಗಾಗಿ ಯಾವುದೇ ಮುಕ್ತ ವ್ಯಾಪಾರ ಒಪ್ಪಂದದಡಿಯಲ್ಲಿ ಡೈರಿ ಉತ್ಪನ್ನಗಳ ಆಮದಿಗೆ ಅನುಮತಿ ನೀಡಬಾರದು ಎಂದು ತಜ್ಞರು ಶಿಫಾರಸ್ಸು ನೀಡಿದ್ದಾರೆ.

ಯುಎನ್ಐ ಜಿಎಸ್ಆರ್ 1138