Saturday, Aug 15 2020 | Time 09:30 Hrs(IST)
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Health -Lifestyle Share

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ
ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ನವದೆಹಲಿ, ಡಿ 25 [ಯುಎನ್ಐ] ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು, ಬರಹ, ರಾಜಕೀಯ ಜೀವನ ಕುರಿತು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರಾಗಿದ್ದ ಸಂದರ್ಭದಲ್ಲಿ ಈಗಿನ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಬರೆದಿದ್ದ ಲೇಖನ. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಸ್. ಪರಶಿವಮೂರ್ತಿ

" ಯಾವ ಹಾದಿಯಲ್ಲಿ ಸಾಗಲಿ?

ಒತ್ತಡದ ಕವಲುದಾರಿಯಲ್ಲಿ ಹಿರಿಮೆ ಅಳಿದಿದೆ

ಚದುರಂಗದಾಟದಲಿ ಯೋಧನಿಗೆ ಸೋಲು

ಛಲವ ಬಿಡದೆ ನಾ ಮುನ್ನಡೆಯಲೇ? ಇಲ್ಲವೇ

ರಣರಂಗದಿಂದ ಹಿನ್ನಡೆಯಲೇ?

ಯಾವ ಹಾದಿಯಲಿ ಸಾಗಲಿ?

ಕನಸೊಂದು ಹುಟ್ಟಿತು ಹಾಗೆಯೇ ಅಸುನೀಗಿತು

ವಸಂತದಲಿ ವನ ಸೊರಗಿತು

ಬಿದ್ದ ಎಲೆಗಳನ್ನು ಒಗ್ಗೂಡಿಸಲೇ? ಇಲ್ಲವೇ

ನವನವೀನ ಜಗವೊಂದನ್ನು ಕಟ್ಟಲೇ?

ಯಾವ ಹಾದಿಯಲಿ ಸಾಗಲಿ?

ಇವು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಕವನ ರಾಹ್ ಕೌನ್ಸಿ ಜಾವೂನ್ ಮೈನ್ ನಲ್ಲಿ ಅಭಿವ್ಯಕ್ತಪಡಿಸಿದ ಕೆಲ ಚಿಂತನೆಗಳು.

ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿ, ದುರ್ಗಮ ಹಾದಿಯನ್ನೇ ಸವೆಸಬೇಕಾಗುತ್ತದೆ. ಹಲವಾರು ಎಡರು ತೊಡರುಗಳು, ಪ್ರತಿಕೂಲ ಪರಿಸ್ಥಿತಿಗಳು, ಪ್ರಕ್ಷುಬ್ಧ ಸನ್ನಿವೇಶಗಳನ್ನು ಎದುರಿಸಲು ಆತ ಸಿದ್ಧನಿರಬೇಕಾಗುತ್ತದೆ. ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರು, ಈ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಬೇಕೆ ಅಥವಾ ಇದರಿಂದ ಹಿಂದೆ ಸರಿಯಬೇಕೇ ಎಂಬ ಸಂದಿಗ್ಧಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಆತ್ಮಸ್ಥೈರ್ಯ ಇಲ್ಲದವರು, ಮೊದಲ ಅಡ್ಡಿ ಎದುರಾದಾಗಲೇ ಹಿಂಜರಿಯಲು ತೊಡಗುತ್ತಾರೆ, ಆದರೆ ಬಲಿಷ್ಠ ಮನೋಶಕ್ತಿಯ ನಾಯಕ, ಪ್ರತಿಯೊಂದು ಅಡ್ಡಿಯನ್ನು ದಾಟಿ ಮುನ್ನುಗಲು ಇಚ್ಛಿಸುತ್ತಾನೆ ಮತ್ತು ಅಂತಿಮವಾಗಿ ಬಯಸಿದ ಗುರಿಯನ್ನು ಸಾಧಿಸುತ್ತಾನೆ. ಅಟಲ್ ಬಿಹಾರಿ ವಾಜಪೇಯಿ, ಇಂತಹ ಒಬ್ಬ ಅದ್ಭುತ ನಾಯಕರು. ಹಾಗಾಗಿಯೇ ಅವರು ದೇಶದ ಜನತೆಯ ಹೃದಯಗಳಲ್ಲಿ ಅಚ್ಚಳಿಯದ ಸ್ಥಾನವನ್ನು ಗಿಟ್ಟಿಸಿದ್ದಾರೆ.

ಪ್ರಧಾನಮಂತ್ರಿ ಹುದ್ದೆಯವರೆಗಿನ ಅವರ ಪಯಣ ಸುಗಮವೇನೂ ಆಗಿರಲಿಲ್ಲ, ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರ ಮಗನಾಗಿ ವಾಜಪೇಯಿ ಅವರು, ಒಬ್ಬ ಪತ್ರಕರ್ತರಾಗಿ ತಮ್ಮ ಬದುಕಿನ ಹಾದಿ ಆರಂಭಿಸಿದರು. ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಬ್ಬ ಸದಸ್ಯರಾಗಿ ಸಕ್ರಿಯ ಪಾತ್ರ ನಿರ್ವಹಿಸಿದರು. ಅಲ್ಲದೇ ಸ್ವದೇಶ್, ವೀರಾರ್ಜುನ್, ರಾಷ್ಟ್ರಧರ್ಮ ಮತ್ತು ಪಾಂಚಜನ್ಯದಂತಹ ಜನಪ್ರಿಯ ಪತ್ರಿಕೆಗಳ ಸಂಪಾದಕರಾಗಿ ದುಡಿದರು. ವೃತ್ತಪತ್ರಿಕೆಗಳ ಆವೃತ್ತಿಗಳನ್ನು ಹೊರತರಲು ಮುದ್ರಣಾಲಯದಲ್ಲೇ ಅವರು ನಿದ್ದೆ ಇಲ್ಲದ ರಾತ್ರಿಗಳನ್ನೂ ಕಳೆದರು.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರದಿಂದ ಬಂಧನಕ್ಕೊಳಗಾದ ಅವರು, ಕಠಿಣ ಸಮಯವನ್ನು ಅನುಭವಿಸಬೇಕಾಯಿತು, ಆದರೂ ಜನತೆಯ ಏಳ್ಗೆಗಾಗಿನ ಅವರ ಬದ್ಧತೆ ಅಚಲವಾಗಿತ್ತು. ಭಾರತೀಯ ಜನತಾ ಪಾರ್ಟಿಯಾಗಿ ಪರಿವರ್ತನೆಗೊಂಡ ಭಾರತೀಯ ಜನಸಂಘದ ಅಧ್ಯಕ್ಷರಾಗಿ, ಪಕ್ಷವನ್ನು ತಳಹಂತದಿಂದ ಕಟ್ಟುವಲ್ಲಿ ಅವರು ಅವಿರತ ಪ್ರಯತ್ನ ನಡೆಸಿದರು.

೧೯೫೭ರಿಂದ ೨೦೦೯ರ ನಡುವೆ ವಾಜಪೇಯಿ ೧೦ ಬಾರಿ ಸಂಸತ್ತಿಗೆ ಆಯ್ಕೆಯಾದರು. ಜನತಾ ಪಾರ್ಟಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ, ಭಾರತದ ವಿದೇಶಾಂಗ ನೀತಿಯ ಮೇಲೆ ಅವರು ತಮ್ಮ ಛಾಪು ಮೂಡಿಸಿದರು. ಅನೇಕ ಸಂಘರ್ಷ-ಹೋರಾಟಗಳ ನಂತರ ಅವರು ಪ್ರಧಾನಿ ಹುದ್ದೆಗೆ ಏರಿದರು. ಪ್ರಧಾನಮಂತ್ರಿಯಾದ ನಂತರವೂ ಅವರು ಪ್ರತಿಯೊಂದು ಹೆಜ್ಜೆಯಲ್ಲೂ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಮೊದಲ ಬಾರಿಗೆ ಅವರು ಪ್ರಧಾನಮಂತ್ರಿ ಹುದ್ದೆಯಲ್ಲಿ ೧೩ ದಿನಗಳ ಕಾಲ, ಆನಂತರ ೧೩ ತಿಂಗಳು ಕಾಲ ಇದ್ದರು. ಆದರೆ ಅಂತಿಮವಾಗಿ ಅವರು ಮೊಟ್ಟಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ಹೊರಹೊಮ್ಮಿ, ಸುಮಾರು ೫ ವರ್ಷಗಳ ಕಾಲ ದೇಶದ ಆಡಳಿತ ನಿರ್ವಹಿಸಿದರು.

ತಮ್ಮ ಆಡಳಿತಾವಧಿಯಲ್ಲಿ ವಾಜಪೇಯಿ ಕ್ಷುಲ್ಲಕ ರಾಜಕಾರಣವನ್ನು ಬದಿಗೊತ್ತಿ, ದೇಶದ ಪ್ರಗತಿಗಾಗಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಾಮುಖ್ಯತೆ ನೀಡಿದರು. ಅತ್ಯಲ್ಪ ಅವಧಿಯಲ್ಲೇ, ಜನತೆಗೆ ದೀರ್ಘ ಕಾಲದಲ್ಲಿ ಪ್ರಯೋಜನ ಕಲ್ಪಿಸುವ ಹಲವಾರು ಮಹತ್ವದ ನಿರ್ಧಾರಗಳನ್ನು ಅವರು ಕೈಗೊಂಡರು. ದಶಕಗಳ ಕಾಲದ ದುರಾಡಳಿತದ ನಂತರ, ಒಬ್ಬ ಸಮರ್ಥ ನಾಯಕ ಲಭ್ಯವಾದರೆ, ದೇಶಕ್ಕೆ ಹೇಗೆ ಒಂದು ಹೊಸ ದಿಕ್ಕು-ಆಯಾಮ ದೊರೆಯಬಲ್ಲದು ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು.

ಅವರ ಆಡಳಿತಾವಧಿಯತ್ತ ಒಮ್ಮೆ ದೃಷ್ಟಿಹರಿಸಿದರೆ, ದೇಶದ ಅಭ್ಯುದಯಕ್ಕಾಗಿ ವಾಜಪೇಯಿ ಅವರು ಎಂತಹ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡರು ಎಂಬುದು ಮನವರಿಕೆಯಾಗುತ್ತದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿಶಾಲವಾದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ವಾಜಪೇಯಿ ಅವರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಸಾವಿರಾರು ಗ್ರಾಮಗಳಿಗೆ ರಸ್ತೆ ಸಂಪರ್ಕ ಒದಗಿಸಿದ್ದು, ಲಕ್ಷಾಂತರ ಜನ ಸಲೀಸಾಗಿ ನಗರ ಪ್ರದೇಶಗಳಿಗೆ ಪ್ರಯಾಣಿಸಲು ಇದರಿಂದ ಅನುವಾಯಿತು. ವಾಜಪೇಯಿ ಸರ್ಕಾರ ಕೈಗೊಂಡ ಸುವರ್ಣ ಚತುಷ್ಪಥ ಹಾಗೂ ಗ್ರಾಮೀಣ ಸಡಕ್ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಯ ಇತಿಹಾಸದಲ್ಲಿ ನಿಸ್ಸಂದೇಹವಾಗಿ ಪ್ರಮುಖ ಮೈಲುಗಲ್ಲುಗಳಾಗಿವೆ.

ಮಾಜಿ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಅವರು ಆರಂಭಿಸಿದ ಆರ್ಥಿಕ ಸುಧಾರಣೆಗಳನ್ನು, ಮಹಾ ಮುತ್ಸದ್ದಿ ವಾಜಪೇಯಿ ಹೆಚ್ಚು ಚುರುಕಿನಿಂದ ಮುಂದುವರಿಸಿದರು. ದೇಶದ ಆರ್ಥಿಕ ಪ್ರಗತಿಯ ಹಿತದೃಷ್ಟಿಯಿಂದ ವಿದೇಶ್ ಸಂಚಾರ್ ನಿಗಮ್ ನಿಯಮಿತದಂತಹ ಸಾರ್ವಜನಿಕ ವಲಯದ ಹಲವಾರು ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಅವರು ಹಿಂಜರಿಯಲಿಲ್ಲ. ವಿಶೇಷ ಆರ್ಥಿಕ ವಲಯಗಳು ಮತ್ತು ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ ಅಲ್ಲದೇ ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಪರಿವರ್ತಿಸಿದ ಮಾಹಿತಿ ತಂತ್ರಜ್ಞಾನ ಉದ್ಯಮ ಕ್ಷೇತ್ರದಲ್ಲಿ, ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸುವಂತಹ ಅನೇಕ ಅಭಿವೃದ್ಧಿ ಕ್ರಮಗಳನ್ನು ಅವರು ಕೈಗೊಂಡರು. ಅನಿವಾಸಿ ಭಾರತೀಯರನ್ನು ಆಕರ್ಷಿಸಿ ಅವರನ್ನು ದೇಶದ ಪ್ರಗತಿ ಪ್ರಕ್ರಿಯೆಯಲ್ಲಿ ತೊಡಗಿಸುವ ಒಂದು ಪ್ರಯತ್ನವಾಗಿ, ಪ್ರತಿ ವರ್ಷ ಪ್ರವಾಸ್ ಭಾರತೀಯ ದಿವಸ್ ಆಚರಣೆ ಆರಂಭಿಸಿದವರು ವಾಜಪೇಯಿ. ಇದರ ಜೊತೆ ಜೊತೆಯಲ್ಲೇ ಜನಸಾಮಾನ್ಯರ ಅಭ್ಯುದಯದತ್ತ ವಾಜಪೇಯಿ ಸದಾ ಗಮನ ಕೇಂದ್ರೀಕರಿಸಿದ್ದರು ಹಾಗೂ ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನಾ (ಎಸ್ ಜಿ ಆರ್ ವೈ), ಅಂಬೇಡ್ಕರ್ ವಾಲ್ಮೀಕಿ ಬಸ್ತಿ ಯೋಜನಾ ಹಾಗೂ ರಾಷ್ಟ್ರೀಯ ಪೌಷ್ಠಿಕಾಹಾರ ಮಿಷನ್‌ನಂತಹ, ಬಡವರ ಪರವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು. ವಾಜಪೇಯಿ ಸರ್ಕಾರ ಆರಂಭಿಸಿದ ಸರ್ವಶಿಕ್ಷಾ ಅಭಿಯಾನ್, ಲಕ್ಷಾಂತರ ಅನಕ್ಷಸ್ಥರಿಗೆ ಸಾಕ್ಷರತೆಯನ್ನು ಕಲ್ಪಿಸಿತು.

ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅಲ್ಪಸಮಯದಲ್ಲೇ ಪೋಕ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸುವ ಮೂಲಕ, ಭಾರತದ ಅಣು ಸಾಮರ್ಥ್ಯವನ್ನು ಜಗತ್ತಿಗೆ ಸಾಧಿಸಿ ತೋರಿದರು, ಅಲ್ಲದೇ ಅಣುಶಕ್ತಿ ರಾಷ್ಟ್ರಗಳ ಸಂಘಟನೆಗೆ ಭಾರತವನ್ನು ಸೇರಿಸಿದರು. ಅಮೆರಿಕ, ಬ್ರಿಟನ್ ಮತ್ತು ಕೆನಡಾಗಳು ಹಲವಾರು ಆರ್ಥಿಕ ದಿಗ್ಬಂಧನಗಳನ್ನು ಹೇರಿ ಭಾರತದ ಕೈ ತಿರುಚಲು ಯತ್ನಿಸಿದವಾದರೂ, ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿರುವುದನ್ನು ಕಂಡು ಈ ದಿಗ್ಬಂಧನಗಳನ್ನು ಹಿಂಪಡೆಯಬೇಕಾಯಿತು. ಆ ನಂತರ ವಾಜಪೇಯಿ ಅವರು ತಮ್ಮದೇ ಶೈಲಿಯ ವಿದೇಶಾಂಗ ನೀತಿ ಅಳವಡಿಸಿಕೊಂಡು ವಿದೇಶ ಸಂಬಂಧಗಳ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡರು.

ಚೈನಾದೊಂದಿಗೆ ದ್ವಿಪಕ್ಷೀಯ ಸಂಧಾನಗಳ ಮೂಲಕ ಗಡಿ ವಿವಾದಗಳನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಆ ದೇಶದೊಂದಿಗೆ ಅವರು ಸ್ನೇಹ ಹಸ್ತವನ್ನು ಚಾಚಿದರು. ವಾಜಪೇಯಿ ಅವರು ಪ್ರಧಾನಮಂತ್ರಿ ಹುದ್ದೆಗೆ ಏರುವ ಮೊದಲು ಅಮೆರಿಕದೊಂದಿಗಿನ ನಮ್ಮ ಬಾಂಧವ್ಯ ಅಷ್ಟೇನೂ ಬಲಿಷ್ಠವಾಗಿರಲಿಲ್ಲ, ಆದರೆ ವಾಜಪೇಯಿ ಆಡಳಿತದಲ್ಲಿ ಈ ಸಂಬಂಧಗಳಲ್ಲಿ ಒಂದು ಗುಣಾತ್ಮಕ ಬದಲಾವಣೆ ಕಂಡುಬಂದಿತು. ೨೨ ವರ್ಷಗಳ ಹಿಂದೆ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭೇಟಿಯ ನಂತರದ ದೀರ್ಘ ಸಮಯದ ಬಳಿಕ, ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಅಧಿಕೃತ ಪ್ರವಾಸದ ಮೇಲೆ ಬಂದರು. ಇದು ಅಂತಾರಾಷ್ಟ್ರೀಯ ಶೀತಲ ಸಮರದ ಯುಗಾಂತ್ಯದ ಬಳಿಕ, ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಮಹತ್ವದ ವಿಚಾರಗಳಲ್ಲಿ ದ್ವಿಪಕ್ಷೀಯ ಸಮಬಂಧಗಳ ಪುನಃಸ್ಥಾಪನೆಗೆ ಹಾದಿ ನಿರ್ಮಿಸಿಕೊಟ್ಟಿತು. ಭಯೋತ್ಪಾದನೆ ವಿರುದ್ಧ ಸಂಘಟಿತ ಸಮರ ಸಾರಬೇಕಾದ ಅಗತ್ಯದ ಬಗ್ಗೆ ವಾಜಪೇಯಿ ಅವರು ಜಗತ್ತಿಗೆ ಸಾರಿ ಹೇಳಿದ ಹಲವಾರು ವರ್ಷಗಳ ನಂತರ, ಅಮೆರಿಕ ೯/೧೧ ರ ಭಯೋತ್ಪಾದಕ ದಾಳಿಗಳ ಸಂಕಷ್ಟ್ಟಕ್ಕೆ ಗುರಿಯಾದಾಗ, ವಾಜಪೇಯಿ ಅವರ ಸಂದೇಶದ ಮಹತ್ವವನ್ನು ಮನಗಂಡಿತು. ಅಲ್ಲದೇ ತಾಲಿಬಾನ್ ಮತ್ತು ಅಲ್ ಖೈದಾ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತದ ಮಹತ್ವಪೂರ್ಣ ನೆರವನ್ನು ಯಾಚಿಸಿತು.

ಪಾಕಿಸ್ತಾನದಿಂದ ಎದುರಾಗುತ್ತಿದ್ದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಹತ್ತಿಕ್ಕುವ ಪ್ರತಿದಾಳಿಗಳನ್ನು ನಡೆಸುತ್ತಲೇ, ಲಾಹೋರ್‌ಗೆ ಬಸ್ ಯಾತ್ರಾ ಆರಂಭಿಸುವ ಮೂಲಕ ಈ ನೆರೆಯ ದೇಶಕ್ಕೆ ವಾಜಪೇಯಿ ಸ್ನೇಹ ಹಸ್ತ ನೀಡಿದರು. ವಾಜಪೇಯಿ ಅವರು ನೀಡಿದ ಸ್ಫೂರ್ತಿಯಿಂದ ಭಾರತೀಯ ಸಶಸ್ತ್ರ ಪಡೆಗಳು, ವಿಜಯ್ ಕಾರ್ಯಾಚರಣೆಯಡಿ ಕಾರ್ಗಿಲ್‌ನಲ್ಲಿ ಶತ್ರುಗಳ ಅತಿಕ್ರಮಣವನ್ನು ಬಗ್ಗುಬಡಿದವು, ಹಾಗೂ ಪಾಕಿಸ್ತಾನದ ಒಳನುಸುಳುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದವು. ಸೇನೆಗೆ ಸಕಾಲದಲ್ಲಿ ಮಾಹಿತಿಗಳನ್ನು ಒದಗಿಸಲು ಪರಿಣಾಮಕಾರಿಯಾದ ರಕ್ಷಣಾ ಗುಪ್ತಚರ ವ್ಯವಸ್ಥೆಯ ನಿರ್ಮಾಣಕ್ಕೆ ಅವರು ಸಾಧನವಾದರು.

ಪಾಕಿಸ್ತಾನದ ಒಳನುಸುಳುವಿಕೆ ಯತ್ನವನ್ನು ಧ್ವಂಸಗೊಳಿಸಿದ ನಂತರವೂ ಆಗಿನ ಪಾಕಿಸ್ತಾನ ಅಧ್ಯಕ್ಷ ಜನರಲ್ ಮುಷರಫ್ ಅವರೊಂದಿಗೆ ಮಾತುಕತೆ ನಡೆಸುವುದರೊಂದಿಗೆ, ನೆರೆ ರಾಷ್ಟ್ರದೊಂದಿಗೆ ವಾಜಪೇಯಿ ಶಾಂತಿ ಬಯಸಿದರು. ಉಪಖಂಡದಲ್ಲಿ ಶಾಂತಿ ನೆಲೆಸಿದಲ್ಲಿ ಮಾತ, ತ್ವರಿತ ಪ್ರಗತಿ ಸಾಧ್ಯ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಶಾಂತಿ ಸಂಧಾನದ ಪ್ರಕ್ರಿಯೆಯಲ್ಲೇ ನಮಗೆ ಸದಾ ವಿಶ್ವಾಸ ಆದರೆ ನಮ್ಮ ಪ್ರದೇಶಕ್ಕೆ ಅತಿಕ್ರಮಣದ ಯಾವುದೇ ಯತ್ನವನ್ನು ಅತ್ಯಂತ ಕಠಿಣವಾಗಿ ನಿಗ್ರಹಿಸಲು ನಾವು ಹಿಂಜರಿಯುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ನಾವು ಕಳೆದ ೫೦ ವರ್ಷಗಳಿಂದ ಪರಸ್ಪರ ಘರ್ಷಣೆಯಲ್ಲೇ ತೊಡಗಿದ್ದೇವೆ. ಇನ್ನೆಷ್ಟು ಕಾಲ ಈ ಘರ್ಷಣೆ ಮುಂದುವರಿಯುವುದನ್ನು ನೀವು ಬಯಸುತ್ತೀರಿ, ಇದು ಪಾಕಿಸ್ತಾನಕ್ಕಾಗಲೀ ಅಥವಾ ಭಾರತಕ್ಕಾಗಲೀ ಯಾವುದೇ ಒಳಿತನ್ನು ಉಂಟು ಮಾಡುವುದಿಲ್ಲ. ನಾವು ನಮ್ಮ ಅಮೂಲ್ಯವಾದ ಸಂಪನ್ಮೂಲಗಳನ್ನು ಯುದ್ಧಗಳಲ್ಲಿ ಅನಗತ್ಯವಾಗಿ ವ್ಯರ್ಥ ಮಾಡುತ್ತಿದ್ದೇವೆ. ನಾವು ಯುದ್ಧಗಳನ್ನೇ ಮಾಡದಿದ್ದಲ್ಲಿ ಈ ಪರಿಮಿತ ಸಂಪನ್ಮೂಲಗಳನ್ನು ನಮ್ಮ ಜನರ ಜೀವನಮಟ್ಟ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ನಾವು ಯುದ್ಧಕ್ಕೆ ಇಳಿದರೆ ನಿರುದ್ಯೋಗ, ರೋಗ-ರುಜಿನಗಳು, ಬಡತನ ಹಾಗೂ ಹಿಂದುಳಿದಿರುವಿಕೆಯನ್ನು ಅನುಭವಿಸ ಬೇಕಾಗುತ್ತದೆ ಎಂದು, ೨೦೦೧ ರ ಆಗಸ್ಟ್ ೧೫ ರಂದು ದೆಹಲಿಯ ಕೆಂಪುಕೋಟೆಯ ಬತೇರಿಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ವಾಜಪೇಯಿ ಹೇಳಿದರು.

ವಾಜಪೇಯಿ ಅವರಲ್ಲಿನ ಬಹುಮುಖ್ಯ ಸಾಮರ್ಥ್ಯ ಎಂದರೆ ಅವರ ವಾಕ್ಚಾತುರ್ಯ. ಒಬ್ಬ ನಿಸರ್ಗ ಕವಿಯಾಗಿ ಅವರ ಭಾಷಣಗಳುದ್ದಕ್ಕೂ ಕವಿತೆಗಳೇ ಹರಿದು ಬರುತ್ತವೆ. ಅವರ ಕಾವ್ಯಾತ್ಮಕ ಭಾಷೆ, ಅಭಿವ್ಯಕ್ತಿ ಹಾಗೂ ಶೈಲಿ ಜನ ಸಾಮಾನ್ಯರನ್ನೂ ಸಹ ಸೆಳೆಯುವುದು. ಇದು ಶಿವನ ಜಟೆಯಿಂದ ಗಂಗೆ ಧರೆಗಿಳಿದು ಬಂದಂತೆ. ಇದು ಅವರಿಗೆ ವರದಾನವಾಗಿ ಪರಿಣಮಿಸಿ ಅವರನ್ನು ಜನಸಂಘ ಮತ್ತು ಬಿಜೆಪಿಯ ನಾಯಕನನ್ನಾಗಿಸಿತು.

೧೯೫೭ರಲ್ಲಿ ಮೊಟ್ಟ ಮೊದಲ ಬಾರಿಗೆ ಅವರು ಲೋಕಸಭೆಗೆ ಆಯ್ಕೆಯಾದಾಗ ಅವರು ಕೊನೆಯ ಸಾಲಿನಲ್ಲಿದ್ದರೂ ಅವರ ಕಾವ್ಯಾತ್ಮಕ ಭಾಷಣ ಅಂದಿನ ಪ್ರಧಾನಮಂತ್ರಿ ಜವಹರಲಾಲ್ ನೆಹರೂ ಅವರನ್ನು ಬಹಳಷ್ಟು ಬೆರಗುಗೊಳಿಸಿತು. ಆ ಭಾಷಣದ ನಂತರ ನೆಹರೂ ಅವರು ವಾಜಪೇಯಿ ಅವರನ್ನು ಆಲಂಗಿಸಿ, ವಾಜಪೇಯಿ ಒಂದಲ್ಲ ಒಂದು ದಿನ ದೇಶದ ಪ್ರಧಾನಮಂತ್ರಿಯಾಗುವರು ಎಂದು ಭವಿಷ್ಯ ನುಡಿದರು. ನೆಹರೂ ಅವರ ಆ ಮಾತುಗಳು ಸುಮಾರು ನಾಲ್ಕು ದಶಕಗಳ ನಂತರ ನಿಜವಾಗಿ ಪರಿಣಮಿಸಿದವು.

ವಾಜಪೇಯಿ ಅವರು ಒಬ್ಬ ಅಜಾತಶತ್ರು. ಇದೇ ಅವರ ಎರಡನೇ ಬಹುದೊಡ್ಡ ಶಕ್ತಿ. ಅವರು ಯಾರನ್ನೂ ದ್ವೇಷಿಸಿದ್ದಿಲ್ಲ, ಯಾರೂ ಅವರನ್ನು ದ್ವೇಷಿಸಿದ್ದಿಲ್ಲ. ವಿರೋಧ ಪಕ್ಷದಲ್ಲೇ ಇರಲಿ, ಪ್ರಧಾನಮಂತ್ರಿ ಹುದ್ದೆಯಲ್ಲೇ ಇರಲಿ, ಪ್ರತಿಯೊಬ್ಬರ ಗೌರವಕ್ಕೂ ಅವರು ಪಾತ್ರರಾದವರು. ಅವರದು ಅಂತಹ ಅದ್ಭುತ ವ್ಯಕ್ತಿತ್ವ.

ಉತ್ತಮ ಆಡಳಿತ ಎಂಬ ಮೂಲ ಚಿಂತನೆಯನ್ನು ಮುಂದಿಟ್ಟವರು ಬೇರಾರೂ ಅಲ್ಲ, ಅದು ಈ ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ. ವ್ಯಕ್ತಿಯನ್ನು ಸಬಲಗೊಳಿಸುವುದು ಎಂದರೆ ದೇಶವನ್ನು ಸಬಲಗೊಳಿಸುವುದು ಎಂಬುದೇ ನಮ್ಮ ವಿಶ್ವಾಸ. ತ್ವರಿತ ಸಾಮಾಜಿಕ ಪರಿವರ್ತನೆಯಿಂದ ಕೂಡಿದ ತ್ವರಿತ ಆರ್ಥಿಕ ಬೆಳವಣಿಗೆ ಮೂಲಕ, ಈ ಸಬಲೀಕರಣವನ್ನು ಅತ್ಯುತ್ತಮ ರೀತಿಯಲ್ಲಿ ಆಗುಮಾಡಬಹುದು ಎಂದು, ೨೦೦೦ದ ಸೆಪ್ಟೆಂಬರ್ ೭ರಂದು ನ್ಯೂಯಾರ್ಕ್‌ನಲ್ಲಿ ಏಷ್ಯಾ ಸೊಸೈಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಾಜಪೇಯಿ ನುಡಿದರು. ಸವಾಲಿನ ಸನ್ನಿವೇಶಗಳ ನಡುವೆ ವಾಜಪೇಯಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಭಾರತದ ಅಭಿವೃದ್ಧಿಗಾಗಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡರು, ಅದು ಆ ಸಮಯದಲ್ಲಿದ್ದ ನೀತಿ ವೈಕಲ್ಯವನ್ನು ತೊಡೆದು ಹಾಕುವಲ್ಲಿ ನೆರವಾಯಿತು. ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ ೨೫ನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಾಜಪೇಯಿ ಅವರಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ, ಒಬ್ಬ ಆರ್‌ಎಸ್‌ಎಸ್ ಕಾರ‍್ಯಕರ್ತರಾಗಿ ವೃತ್ತಿ ಆರಂಭಿಸಿದರು. ಒಬ್ಬರು ಶಾಲಾ ಶಿಕ್ಷಕರ ಮಗ, ಮತ್ತೊಬ್ಬರು ಚಾಯ್‌ವಾಲ. ಈ ಇಬ್ಬರೂ ಈ ದೇಶದ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಗೆ ಏರಲು ಸಾಧ್ಯವಾದದ್ದೇ ಭಾರತದ ಪ್ರಜಾಸತ್ತೆಯ ಅಂತ:ಸತ್ವ. ಇಬ್ಬರದೂ ಒಂದೇ ಸಿದ್ಧಾಂತ, ಒಂದೇ ಯೋಜನೆ, ಒಂದೇ ಗುರಿ. ವಾಜಪೇಯಿ ಅವರ ಪರಂಪರೆಯನ್ನು ಮುಂದುವರಿಸಿ, ಉತ್ತಮ ಆಡಳಿತ ಕುರಿತ ಅವರ ಕನಸುಗಳನ್ನು ಸಾಕಾರಗೊಳಿಸುವ ಕಾರ‍್ಯವನ್ನು ಮೋದಿ ಕೈಗೊಂಡಿದ್ದಾರೆ. ವಾಜಪೇಯಿ ಅವರಂತೆಯೆ ನರೇಂದ್ರ ಮೋದಿ ಸಹ, ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆಯಲ್ಲಿರುವ ವ್ಯಕ್ತಿಗಳು ಆಳ್ವಿಕೆ ಮಾಡುವವರಲ್ಲ, ಅವರು ಸೇವಕರು ಎಂದು ನಂಬಿರುವವರು. ತಾವು ಜನತೆಯ ಪ್ರಧಾನಮಂತ್ರಿ ಅಲ್ಲ, ಜನತೆಯ ಪ್ರಧಾನ ಸೇವಕ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ಮೋದಿಯವರ ಪ್ರಕಾರ, ಉತ್ತಮ ಆಡಳಿತ, ಜನತೆಯನ್ನು ಅಭಿವೃದ್ಧಿ ಪ್ರಕ್ರಿಯೆಯ ಕೇಂದ್ರ ಸ್ಥಾನದಲ್ಲಿರಿಸುವುದಾಗಿದೆ. ಉತ್ತಮ ಆಡಳಿತ ಎಂದರೆ ಅದು ಜನಪರವಾಗಿರಬೇಕು. ಇಷ್ಟಾದರೂ ಒಳ್ಳೆಯ ಆಡಳಿತ ಅಂದರೇನು? ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿನ ಸರ್ಕಾರಗಳ ಹೊಣೆಗಾರಿಕೆಗಳ ಮೇಲೆ ಉತ್ತಮ ಆಡಳಿತದ ಪರಿಕಲ್ಪನೆ ಕೇಂದ್ರೀಕೃತವಾಗಿರುತ್ತದೆ. ಅತ್ಯಂತ ದುರ್ಬಲ ಹಾಗೂ ಸಮಾಜದ ಅತ್ಯಂತ ದು:ಸ್ಥಿತಿಯ ವರ್ಗಗಳವರೂ ಸಹ, ದೇಶದ ಬೆಳವಣಿಗೆಯಲ್ಲಿ ಸಮಾನ ಪಾಲು ಹೊಂದಿರಬೇಕು. ಅಂದರೆ ಇದು ಪಾರದರ್ಶಕತೆ, ದಕ್ಷತೆ ಮತ್ತು ಸ್ಪಂದನಶೀಲತೆಗೆ ಸಂಬಂಧಿಸಿದ್ದು. ಶುದ್ಧ, ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕೆ ಸಂಬಂಧಿಸಿದ್ದು. ಸರ್ಕಾರ ಮತ್ತು ಅದರ ಸಂಸ್ಥೆಗಳು ಸಾಮಾನ್ಯ ನಾಗರಿಕನಿಗೆ ಉತ್ತರದಾಯಿತ್ವ ಹೊಂದಿರಬೇಕಾಗುತ್ತದೆ. ಉತ್ತಮ ಆಡಳಿತದಲ್ಲಿ ಪಕ್ಷಪಾತ ಧೋರಣೆಗೆ, ಸರ್ವಾಧಿಕಾರಿ ವರ್ತನೆಗಳಿಗೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿನ ವಿಳಂಬಕ್ಕೆ ಆಸ್ಪದವಿರಬಾರದು. ಉದಾಹರಣೆಗೆ, ಪ್ರಧಾನಮಂತ್ರಿಯವರ ಮಧ್ಯಪ್ರವೇಶದಿಂದಾಗಿ ಎಲ್ಲ ವರಮಾನ ತೆರಿಗೆ ಮರುಪಾವತಿಗಳನ್ನು ೧೫ ದಿನಗಳಲ್ಲಿ ನಿರ್ವಹಿಸುವಂತಾಗಿದೆ, ಏನಾದರೂ ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು.

ಉತ್ತಮ ಆಡಳಿತದ ಒಂದು ಭಾಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನ್‌ಧನ್ ಯೋಜನಾ ಬ್ಯಾಂಕ್ ಖಾತೆಗಳನ್ನು ಆಧಾರ್ ಕಾರ್ಡ್ ಮತ್ತು ಮೊಬೈಲ್ ಆಡಳಿತದೊಂದಿಗೆ ಸಂಪರ್ಕಿಸುವುದರೊಂದಿಗೆ, ದೇಶದಲ್ಲಿ ಭ್ರಷ್ಟಾಚಾರವನ್ನು ಬುಡಮೇಲು ಮಾಡುವ ದಿಶೆಯಲ್ಲಿ ಜೆಎಎಂ ವ್ಯವಸ್ಥೆಯನ್ನು ರೂಪಿಸಿದರು. ನೇರ ಪ್ರಯೋಜನ ವರ್ಗಾವಣೆ, ಡಿಜಿಟಲ್ ಅಥವಾ ವಿದ್ಯುನ್ಮಾನ ಪಾವತಿಗಳು, ನಗದು ರಹಿತ ವಹಿವಾಟಿನತ್ತ ಮುನ್ನಡೆ ಇವೆಲ್ಲ ಉತ್ತಮ ಆಡಳಿತದ ಕ್ರಮಗಳು. ಈ ಎಲ್ಲ ನಿರ್ಧಾರಗಳ ಹಿಂದಿನ ಉದ್ದೇಶವೆಂದರೆ, ಮಧ್ಯವರ್ತಿಗಳಿಂದ ಆಗುವ ಭ್ರಷ್ಟಾಚಾರವನ್ನು ತೊಡೆದು ಹಾಕುವುದು ಮತ್ತು ಜನರಿಂದ ಅತ್ಯಂತ ಅನುಕೂಲಕರವಾದ ಮತ್ತು ಸುಲಭವಾದ ವಿಧಾನಗಳ ಮೂಲಕ ಪಾವತಿ - ಸ್ವೀಕೃತಿಗಳ ವ್ಯವಸ್ಥೆ ನಿರ್ಮಿಸುವುದಾಗಿದೆ. ಜನರ ಬದುಕನ್ನು ಸುಲಭವಾಗಿಸಲು, ಹಸನಾಗಿಸಲು ಮೋದಿ ಸರ್ಕಾರ, ಪಾರ್ಲಿಮೆಂಟ್‌ನಲ್ಲಿ ಹಳೆಯ ಮತ್ತು ಬಳಕೆಯಲ್ಲಿಲ್ಲದ ೧೦೦೦ಕ್ಕೂ ಹೆಚ್ಚು ಕಾನೂನುಗಳನ್ನು ಹಿಂಪಡೆದಿದೆ ಹಾಗೂ ಸರ್ಕಾರದ ಪ್ರಕ್ರಿಯೆಯನ್ನು ಸಹ ಸರಳಗೊಳಿಸಿದೆ. ಈ ಮೊದಲು ಒಬ್ಬ ಪಿಂಚಣಿದಾರ, ಅಧಿಕಾರಿಗಳು ನೀಡುವ ಜೀವಂತಿಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತಿತ್ತು, ಪಿಂಚಣಿದಾರರಿಗೆ ಆಧಾರ್ ಆಧರಿತ ಜೀವನ ಪ್ರಮಾಣ್ ಡಿಜಿಟಲ್ ಜೀವಂತಿಕೆ ಪ್ರಮಾಣ ಪತ್ರ ವ್ಯವಸ್ಥೆ ಕಲ್ಪಿಸಿರುವುದರಿಂದ, ಅವರೀಗ ಪ್ರತಿ ವರ್ಷ ತಮ್ಮ ಪಿಂಚಣಿ ಮುಂದುವರಿಕೆ ಖಾತ್ರಿಪಡಿಸಿಕೊಳ್ಳಲು, ವಾಸ್ತವ ಜೀವಂತಿಕೆ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿರುವುದಿಲ್ಲ. ಮೈಗೌ ಮತ್ತು ನರೇಂದ್ರ ಮೋದಿ ಆಪ್‌ಗಳನ್ನು ಆರಂಭಿಸಿದ್ದು, ಜನತೆ ಈಗ ದೇಶದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಿದೆ. ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ಸರ್ಕಾರದ ಹಲವಾರು ಯೋಜನೆ ಉದ್ದೇಶಗಳಿಗೆ ಕೊಡುಗೆ ಸಲ್ಲಿಸಲು ಈ ಆಪ್‌ಗಳು ವೇದಿಕೆಗಳಾಗಿ ಪರಿಣಮಿಸಿವೆ.

ವಾಜಪೇಯಿ ಅವರು ಹಾಕಿ ಕೊಟ್ಟ ಉತ್ತಮ ಆಡಳಿತದ ಹಾದಿಯನ್ನು ಮೋದಿ ಅವರು ಮತ್ತಷ್ಟು ವಿಸ್ತರಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ವಾಜಪೇಯಿ ಅವರು ತಮ್ಮ ಪ್ರಸಿದ್ಧ ಕವನವೊಂದರಲ್ಲಿ ನಾನು ಸೋಲೊಪ್ಪುವುದಿಲ್ಲ (ಹಾರ್ ನಹಿ ಮಾನೂಂಗ) ಎಂದು ಹೇಳಿದ್ದಾರೆ. ಇದನ್ನು ಒಂದು ಸ್ಫೂರ್ತಿಯಾಗಿ ಕಂಡುಕೊಂಡ ನರೇಂದ್ರ ಮೋದಿಯವರು, ಜನತೆಯ ಹಿತಕ್ಕಾಗಿ ಹೋರಾಡುವ ದೃಢ ನಿಶ್ಚಯ ಮಾಡಿ, ಅವರ ಹೃದಯಗಳಲ್ಲಿ ಶಾಶ್ವತ ಸ್ಥಾನಗಳಿಸುವ ನಿಟ್ಟಿನಲ್ಲಿ ಸಾಗಿದ್ದಾರೆ.

- ಎಂ.ವೆಂಕಯ್ಯ ನಾಯ್ಡು

ಕೇಂದ್ರ ಸಮಾಚಾರ ಮತ್ತು ಪ್ರಸಾರ ಹಾಗೂ ನಗರಾಭಿವೃದ್ಧಿ ಖಾತೆ ಸಚಿವರು.

ಅನುವಾದ ಎಸ್. ಪರಶಿವಮೂರ್ತಿ

ಯುಎನ್ಐ ವಿಎನ್ 0856