Connect with us


      
ಕರ್ನಾಟಕ

ಅನುಮತಿಯಿಲ್ಲದೆ ನೈಸ್ ಟೋಲ್ ಹೆಚ್ಚಳ: ಮಾಜಿ ಪ್ರಧಾನಿ ಹೆಚ್ ಡಿಡಿ ಕಿಡಿ

Lakshmi Vijaya

Published

on

ಬೆಂಗಳೂರು: ಏಪ್ರಿಲ್ 03 (ಯು.ಎನ್.ಐ) ಸರ್ಕಾರದ ಅನುಮತಿ ‌ಇಲ್ಲದೆ ನೈಸ್ ಸಂಸ್ಥೆ ಟೋಲ್ ಹಣವನ್ನು ಹೆಚ್ಚಳ ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕಿಡಿಕಾರಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್. ಡಿ. ದೇವೇಗೌಡ ಅವರು ನೈಸ್ ಸಂಸ್ಥೆಯು ಅನುಮತಿ ಇಲ್ಲದೇ ಟೋಲ್ ದರ ಹೆಚ್ಚಳ ಮಾಡುವ ಮೂಲಕ ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿಗೆ ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ‌ ನೀಡಿರೋ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ ಬರೆದಿದ್ದೀನಿ. ವಿಧಾನ ಪರಿಷತ್ ನಲ್ಲಿ ಈ ವಿಷಯ ಚರ್ಚೆ ಆಯ್ತು. ಆದ್ರೆ ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ನಾನು ಅನೇಕ ಪತ್ರಗಳನ್ನು ಸಿಎಂ ಅವರಿಗೆ ಮತ್ತು ಸಿಎಸ್ ಅವರಿಗೆ ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಬರೆದಿದ್ದೇನೆ.

ಸರ್ಕಾರ ನೈಸ್ ವಿಚಾರವಾಗಿ ಕಮಿಟಿ‌ ಮಾಡ್ತು. ಕಮಿಟಿಯನ್ನ ಪದೇ‌ ಪದೇ ಬದಲಾವಣೆ ಮಾಡುತ್ತಾ ಹೋದ್ರು. ಸಚಿವ ಮಾಧುಸ್ವಾಮಿ ಅವ್ರು ಈ ಕಂಪನಿ ವ್ಯವಹಾರಗಳು ಸರಿ ಇಲ್ಲ ಅಂತ ಹೇಳಿದ್ದಾರೆ. ಆಗ ಅವ್ರಿಗೆ 5 ಲಕ್ಷ ಮಾತ್ರ ಪೆನಾಲ್ಟಿ ಹಾಕಿದ್ರು. ಈಗ ಮಾಧುಸ್ವಾಮಿ ಅವ್ರನ್ನ ಕಮಿಟಿಯಿಂದ ಕೈ ಬಿಟ್ಟಿದ್ದಾರೆ. ನಾನು ಒಳ್ಳೆಯ ಉದ್ದೇಶಕ್ಕಾಗಿ ಯೋಜನೆ ತಂದೆ. ಆದ್ರೆ ನಂತ್ರ ‌ಇದ್ರಲ್ಲಿ ಅನೇಕ ನಿಯಮಗಳನ್ನ ಬದಲಾವಣೆ ‌ಮಾಡಿದ್ದಾರೆ. ನೈಸ್ ಬಗ್ಗೆ ಸದನ‌ ಸಮಿತಿ ಮಾಡಿದ್ರು. ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಅಂತ ವರದಿ ಕೊಟ್ಟಿತ್ತು. ಆದ್ರೆ 2016 ರಲ್ಲಿ ನೈಸ್ ಸಂಸ್ಥೆ ಅವರು ಹೈಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ತಾರೆ. ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹ ಆಗಿದೆ.

2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ಸಂಗ್ರಹ ಆಗುತ್ತೆ. ಯಾರಾದ್ರು ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ತುಂಬಾ ಆಸೆ ಇಟ್ಟು ಈ ಪ್ರಾಜೆಕ್ಟ್ ಮಾಡಿದ್ದೆ. ಆದ್ರೆ ರೈತರಿಗೆ ನೈಸ್ ಸಂಸ್ಥೆ ಸರಿಯಾಗಿ ಪರಿಹಾರವನ್ನೇ ನೀಡಲಿಲ್ಲ. ಈ ಕಂಪನಿ ರೈತರಿಗೆ ಅನ್ಯಾಯ ಮಾಡಿತ್ತು. ಸರ್ಕಾರಿ ಜಮೀನನ್ನ ಅಡ ಇಟ್ಟು ಸಾಲ ಪಡೆದಿದ್ದಾರೆ ಎಂದು ಆರೋಪಿಸಿದರು

ವಿಪರ್ಯಾಸವೆಂದರೆ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ , ಜೊತೆಗೆ ಕಾಂಕ್ರೀಟ್ ರೋಡ್ ಮಾಡಿದ್ದೇನೆ ಅಂತಾರೆ ಆದ್ರೆ ಅದು ಕೂಡ ಕಳಪೆ ರಸ್ತೆ ಆಗಿದೆ. ಈ‌ ಬಗ್ಗೆ ಅನೇಕ ಪತ್ರ ಬರೆದಿದ್ದೇನೆ. ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ. ಹೈಕೋರ್ಟ್ ನಲ್ಲಿ ಇಷ್ಟು ಅಕ್ರಮ ಮಾಡಿದ್ದಾರೆ ಅಂತ ಸರ್ಕಾರ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರ್ಕಾರವೂ ಈ ಕೆಲಸವನ್ನ ಮಾಡಲಿಲ್ಲ ಎಂದು ಆರೋಪಿಸಿದರು.

Share