Connect with us


      




ಕರ್ನಾಟಕ

ಅಪಾಯಕಾರಿ ಮಾರ್ಗಗಳ ತೆರವುಗೊಳಿಸಿ ಹೊಸ ಮಾರ್ಗಕ್ಕೆ ವ್ಯವಸ್ಥೆ

Vanitha Jain

Published

on

ಬೆಂಗಳೂರು: ಜನೆವರಿ 08 (ಯು.ಎನ್.ಐ.)ರಾಜ್ಯದ ಶಾಲಾ- ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಇಂಧನ ಇಲಾಖೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, 1783 ಅಪಾಯಕಾರಿ ಮಾರ್ಗಗಳನ್ನು ತೆರವುಗೊಳಿಸಿ ಹೊಸ ಮಾರ್ಗಕ್ಕೆ ವ್ಯವಸ್ಥೆ ಕಲ್ಪಿಸಿದೆ.

ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್, ಬಾಕಿ ಉಳಿದಿರುವ ಅಪಾಯಕಾರಿ ಮಾರ್ಗಗಳ ಬದಲಾವಣೆಯನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಆಗಸ್ಟ್ 15ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವಾಗ ಶಾಲಾ ಆವರಣದಲ್ಲಿ ಹಾದು ಹೋಗಿದ್ದ ಅಪಾಯಕಾರಿ ವಿದ್ಯುತ್ ಮಾರ್ಗಕ್ಕೆ ಧ್ವಜ ತಗುಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಹಾಸನದಲ್ಲೂ ಇದೇ ಬಗೆಯ ಘಟನೆ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದ ಸಚಿವ ಸುನೀಲ್ ಕುಮಾರ್ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗ ಗುರುತಿಸಿ ಬದಲಿ ಮಾರ್ಗ ಕಲ್ಪಿಸುವ ಅಥವಾ ಎಬಿ ಕೇಬಲ್ ಅಳವಡಿಸುವಂತೆ ಆಗಸ್ಟ್ 19 ರಂದು ಎಲ್ಲ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿತ್ತು.

ರಾಜ್ಯದಲ್ಲಿ ಒಟ್ಟು 6886 ಇಂಥ ಅಪಾಯಕಾರಿ ಮಾರ್ಗಗಳು ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವುದನ್ನು ಗುರುತಿಸಲಾಗಿದ್ದು, ಆದೇಶ ನೀಡಿದ ಮೂರೇ ತಿಂಗಳಲ್ಲಿ 1783 ಮಾರ್ಗಗಳನ್ನು ಬದಲಿಸಿ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ 4997 ಮಾರ್ಗಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನದಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 114.50 ಕೋಟಿ ರೂ.ನ್ನು ಇಂಧನ ಇಲಾಖೆ ವೆಚ್ಚ ಮಾಡುತ್ತಿದೆ. ಇಂಧನ ಇಲಾಖೆಯ ಈ ಕ್ರಮದಿಂದ ವಿದ್ಯಾರ್ಥಿಗಳು , ಶಿಕ್ಷಕರು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Share