Connect with us


      
ರಾಜಕೀಯ

ಈಶಾನ್ಯ ಪ್ರದೇಶ, ಮಣಿಪುರದ ಪರಿವರ್ತನೆಯ ಹಿಂದೆ ಬಿಜೆಪಿಯ ಶ್ರಮವಿದೆ: ಮೋದಿ

Vanitha Jain

Published

on

ಇಂಫಲಾ: ಜನವರಿ 04(ಯು.ಎನ್.ಐ) ಭಾರತದ ಅಭಿವೃದ್ಧಿಯಲ್ಲಿ ಈಶಾನ್ಯ ಪ್ರದೇಶ ಮತ್ತು ಮಣಿಪುರವು ಹೆಚ್ಚಿನ ಪಾತ್ರ ವಹಿಸುತ್ತಿದೆ. ಇವುಗಳ ಸಂಪೂರ್ಣ ಪರಿವರ್ತನೆಯ ಹಿಂದೆ ಬಿಜೆಪಿ ಸರ್ಕಾರದ ಏಳು ವರ್ಷಗಳ ಪರಿಶ್ರಮವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಕಣದಲ್ಲಿರುವ ಮಣಿಪುರದಲ್ಲಿ 4,800 ಕೋಟಿ ರೂಪಾಯಿಗಳ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಮಣಿಪುರಕ್ಕೆ 2,387 ಮೊಬೈಲ್ ಟವರ್‍ಗಳನ್ನು ಒದಗಿಸಿಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಇಂಫಾಲ್‍ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿಯಲ್ಲಿ ಈಶಾನ್ಯ ಪ್ರದೇಶ ಮತ್ತು ಮಣಿಪುರವು ಹೆಚ್ಚಿನ ಪಾತ್ರವನ್ನು ವಹಿಸುತ್ತಿದೆ. ಹಿಂದಿನ ಸರ್ಕಾರಗಳು ಈ ಪ್ರದೇಶವನ್ನು ನಿರ್ಲಕ್ಷಿಸಿದ ಪರಿಣಾಮ ಇಲ್ಲಿನ ಜನರು ಈ ಪ್ರದೇಶ ತೊರೆದಿದ್ದರು. ಇದೀಗ ಏಳು ವರ್ಷಗಳ ಸತತ ಪ್ರಯತ್ನದಿಂದಾಗಿ ಬಿಜೆಪಿಯು ಈ ಪ್ರದೇಶವನ್ನು ಅಭಿವೃದ್ಧಿಯ ಕೊಂಡೊಯ್ಯುವ ಮೂಲಕ ಪರಿವರ್ತಿಸಿದೆ ಎಂದು ಮೋದಿ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಣಿಪುರದ ಅಭಿವೃದ್ಧಿ ಚಿತ್ರಣ ಸಂಪೂರ್ಣ ಬದಲಾಗಿದೆ ಎಂದ ಅವರು, ಪಿಎಂ-ಕಿಸಾನ್ ಯೋಜನೆಯಡಿ 6 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ, 4 ಲಕ್ಷಕ್ಕೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಯೋಜನೆಯಿಂದ ಉಚಿತ ವೈದ್ಯಕೀಯ ನೆರವು ಪಡೆದಿದ್ದಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರವು ಮಣಿಪುರದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಶೀಘ್ರದಲ್ಲೇ ಒದಗಿಸಲಿದೆ. ‘ತೌಬಲ್ ಬಹುಪಯೋಗಿ ಯೋಜನೆಯ ಜಲ ಪ್ರಸರಣ ವ್ಯವಸ್ಥೆ’ ಸೇರಿದಂತೆ ಇಂದು ಉದ್ಘಾಟನೆಗೊಂಡ ಯೋಜನೆಗಳು ಈ ಪ್ರದೇಶದ ಜನರಿಗೆ ಕುಡಿಯುವ ನೀರನ್ನು ಪೂರೈಸಲಿದೆ. ಒಂದು ಕಾಲದಲ್ಲಿ ಮಣಿಪುರದ ಕೇವಲ 6 ಪ್ರತಿಶತ ಕುಟುಂಬಗಳು ಶುದ್ಧ ಕುಡಿಯುವ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದವು. ಇಂದು ಶೇಕಡಾ 60 ಕ್ಕಿಂತ ಹೆಚ್ಚು ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಇಡೀ ಪ್ರದೇಶದಲ್ಲಿ 100 ಪ್ರತಿಶತದಷ್ಟು ಕುಡಿಯುವ ನೀರನ್ನು ಪಡೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಅಸೆಂಬ್ಲಿ ಚುನಾವಣೆಗಳು ಫೆಬ್ರವರಿಯಿಂದ ಮಾರ್ಚ್, 2022 ರ ನಡುವೆ ನಡೆಯಲಿದೆ.

Share