Connect with us


      




ಕರ್ನಾಟಕ

ಎಂಇಎಸ್ ಮುಖಂಡರಿಗೆ ಮಸಿ; ನಾಳೆ ಬೆಳಗಾವಿ ಬಂದ್ ಗೆ ಕರೆ

Iranna Anchatageri

Published

on

ಬೆಳಗಾವಿ, ಡಿಸೆಂಬರ್ 13 (ಯು.ಎನ್.ಐ) ಎಂಇಎಸ್ ಪುಂಡರಿಗೆ ಈ ಬಾರಿ ಕನ್ನಡ ಪರ ಸಂಘಟನೆಗಳು ಸರಿಯಾದ ಪಾಠ ಕಲಿಸಿದ್ದರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಅಧಿವೇಶನ ಆರಂಭಿಸಿದೆ. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಸಮಿತಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಇಂದಿನಿಂದ ಆರಂಭಗೊಂಡಿರುವ ವಿಧಾನಮಂಡಳದ ಅಧಿವೇಶನ ವಿರೋಧಿಸಿ ಮಹಾಮೇಳಾವ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಸಿ ಬಳೆದು ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಪ್ರತಿಬಾರಿ ಪುಂಡಾಟಿಕೆ ನಡೆಸುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯೂ ಪ್ರತಿಭಟನೆ ಸಮಾವೇಶ ಮಹಾಮೇಳಾವಕ್ಕೆ ವೇದಿಕೆಯನ್ನು ನಗರದ ವ್ಯಾಕ್ಸಿನ್ ಡಿಪೋ ಬಳಿ ನಿರ್ಮಾಣ ಮಾಡಿದ್ದರು.

ಆದರೆ, ಬೆಳಗಾವಿ ಪಾಲಿಕೆ ಅಧಿಕಾರಿಗಳು ವೇದಿಕೆ ತೆರವುಗೊಳಿಸಲು ಮುಂದಾದರೂ ಎಂಇಎಸ್ ಪುಂಡರು, ವೇದಿಕೆಯಿಂದ ಕೆಳಗಿಳಿಯಲು ಒಪ್ಪಲಿಲ್ಲ. ಕುರ್ಚಿ ಇಲ್ಲದೆ ವೇದಿಕೆ ಮೇಲೆ ಕುಳಿತು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಎಂಇಎಸ್ ಸಂಘಟಕರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

ಈ ವೇಳೆ ಎಂಇಎಸ್ ನ ಮಾಜಿ ಶಾಸಕ ಮನೋಹರ್ ಕಿಣೇಕರ್, ದೀಪಕ್ ದಳವಿ, ಶುಭಂ ಶೇಳಕೆ ಮತ್ತಿತರು ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಈ ಗೊಂದಲದ ಪರಿಸ್ಥಿತಿಯಲ್ಲಿ ಮೇಳಾದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದ ಪುಂಡರನ್ನು ಬಲವಂತವಾಗಿ ಕೆಳಗಿಳಿಸಿ ವೇದಿಕೆ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಎಂಇಎಸ್ ಮುಖಂಡರಾದ ದೀಪಕ್ ದಳವಿ ಹಾಗೂ ಮನೋಹರ್ ಕಿಣೇಕರ್ ಮೇಲೆ ಮಸಿ ಚೆಲ್ಲಿ ಆಕ್ರೋಶ ಹೊರ ಹಾಕಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಮಸಿ ಎರಚಿದ ಕನ್ನಡ ಪರ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯನ್ನು ವಿರೋಧಿ ನಾಳೆ ಬೆಳಗಾವಿ ಬಂದ್ ನಡೆಸುವುದಾಗಿ ಎಂಇಎಸ್ ಮುಖಂಡರು ತಿಳಿಸಿದ್ದಾರೆ.

Share