Connect with us


      
ಜಾನಪದ

ಕಾಶಿ ವಿಶ್ವನಾಥ ಧಾಮ ಸನಾತನ ಸಂಸ್ಕೃತಿಯ ಸಂಕೇತ- ಪ್ರಧಾನಿ ಮೋದಿ

UNI Kannada

Published

on

 

 


ವಾರಾಣಸಿ, ಡಿ ೧೩(ಯುಎನ್ ಐ) ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿಂದು ೩೩೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೊದಲನೇ ಹಂತದ ಕಾಶಿ ವಿಶ್ವನಾಥ ಧಾಮವನ್ನು ಸಾವಿರಾರು ಸಾಧು ಸಂತರು ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ,    ಕಾಶಿ ವಿಶ್ವನಾಥ, ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ದಾಖಲಿಸಲಾಗುತ್ತಿದೆ. ಕಾಶಿ ವಿಶ್ವನಾಥ ಧಾಮ ಕೇವಲ ಭವ್ಯ ಭವನವಲ್ಲ. ಅದು ಭಾರತದ ಸನಾತನ ಸಂಸ್ಕೃತಿ, ಸಂಪ್ರದಾಯಗಳ ಸಂಕೇತವಾಗಿದೆ ಎಂದರು.
ಪುರಾತನ ಸಂಸ್ಕೃತಿಯಿಂದ ಪ್ರೇರಣೆ ಪಡೆದು ಭವಿಷ್ಯವನ್ನು ಯಾವ ರೀತಿ ರೂಪಿಸಬಹುದು ಎಂಬುದನ್ನು ಪ್ರತಿಯೊಬ್ಬರೂ ಕೂಡ ಇಲ್ಲಿ ನೋಡಬಹುದು ಎಂದರು.
ನವಭಾರತ ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿದ್ದು, ಸಾಮರ್ಥ್ಯ, ಪರಂಪರೆ ಹಾಗೂ ಅಭಿವೃದ್ಧಿಯ ವಿಶ್ವಾಸವನ್ನು ಹೊಂದಿರಲಿದೆ ಎಂದು ನುಡಿದರು.
ಸ್ವಚ್ಛತೆ, ಕ್ರೀಯಾಶೀಲತೆ, ಆವಿಷ್ಕಾರ ಹಾಗೂ ಸ್ವಾವಲಂಬಿ ಭಾರತ ನಿರ್ಮಿಸುವ ನಿರಂತರ ಪ್ರಯತ್ನ ಎಂಬ ಮೂರು ಸಂಕಲ್ಪಗಳನ್ನು ಜನರು ಕೈಗೊಳ್ಳಬೇಕಾಗಿದೆ. ಇದು ದೇಶಕ್ಕೆ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.
ಕಾಶಿ ವಿಶ್ವನಾಥ ಧಾಮದ ಭವ್ಯ ಸಂಕೀರ್ಣದ ನಿರ್ಮಾಣದಲ್ಲಿ ಶ್ರಮದಾನ ಮಾಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾವು ಕೃತಜ್ಞತೆ ಸಲ್ಲಿಸುವುದಾಗಿ, ಕೋವಿಡ್ ಸಾಂಕ್ರಾಮಿಕದ ನಡುವೆಯೂ ಕಾಮಗಾರಿಗಳು ಸ್ಥಗಿತಗೊಳ್ಳದೆ ಮುಂದುವರಿದಿದ್ದವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಡಿ ಈ ಪವಿತ್ರ ದಿನದ ಕಾರ್ಯಕ್ರಮ ನಡೆಯುತ್ತಿದೆ. ಕಾಶಿಯನ್ನು ಮೊದಲು ಮಹಾರಾಣಿ ಅಹಲ್ಯಾ ಭಾಯಿ ಹೋಲ್ಕರ್ ಪುನರ್ ನಿರ್ಮಿಸಿದರು. ಈ ನಗರಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದಾಗ ಕಾಶಿಯನ್ನು ಸ್ವಚ್ಛಗೊಳಿಸಬೇಕು ಎಂದು ಕನಸು ಕಂಡಿದ್ದರು. ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ ಎಂದು ನುಡಿದರು.

ಇದಕ್ಕೂ ಮೊದಲು ವಾರಣಾಸಿ ತಲುಪಿದ ಪ್ರಧಾನಿ ಮೋದಿ, ಕಾಶಿಯ ಸಂರಕ್ಷಕನೆಂದೇ ಹೆಸರಾಗಿರುವ ಕಾಲಭೈರವ ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸಿದರು.
ಗಂಗಾ ನದಿಯಲ್ಲಿ ಮಿಂದು ಪ್ರಾರ್ಥನೆ ಸಲ್ಲಿಸಿದ ನಂತರ , ಪವಿತ್ರ ಗಂಗಾಜಲದೊಂದಿಗೆ ಕಾಶಿ ವಿಶ್ವನಾಥ ಧಾಮ ಪ್ರವೇಶಿಸಿ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ಸಂಜೆ ಪ್ರಧಾನಿ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

 

 

 

 

Share