Connect with us


      
ಕರ್ನಾಟಕ

ಜ.9 ರಂದು ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಆರಂಭ

UNI Kannada

Published

on

ಬೆಂಗಳೂರು,ಜನವರಿ 01(ಯು.ಎನ್.ಐ)ಮೇಕೆ ದಾಟು ಯೋಜನೆ  ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನೀರಿನ ರಾಜಕಾರಣವನ್ನು ತನ್ನ ಮತಬ್ಯಾಂಕ್ ಆಗಿ ಪರಿವರ್ತಿಸಲು ಕಾಂಗ್ರೆಸ್ ಜ.9ರಂದು ಕಾಂಗ್ರೆಸ್​ ಪಾದಯಾತ್ರೆ ಕೈಗೊಳ್ಳುತ್ತಿದೆ.

ಜ.9ರಿಂದ 19ರವರೆಗೂ ಒಟ್ಟು 11 ದಿನಗಳ ಕಾಲ ಕಾಂಗ್ರೆಸ್​ ಪಾದಯಾತ್ರೆ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದಿಂದ ಆರಂಭವಾಗುವ ಪಾದಯಾತ್ರೆ ಕನಕಪುರ ಮಾರ್ಗವಾಗಿ ರಾಮನಗರಕ್ಕೆ ಬಂದು ಮೈಸೂರು ರಸ್ತೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ.

ಒಟ್ಟು 165 ಕಿಲೋ ಮೀಟರ್‌ನ ಮೇಕೆದಾಟುವಿನ ರಸ್ತೆಯ ಒಟ್ಟು ಪಾದಯಾತ್ರೆಯ‌ ಮೊದಲ ದಿನ 15 ಕೀಲೊ ಮೀಟರ್ ಪಾದಯಾತ್ರೆ ನಡೆಯಲಿದೆ. ಕೊನೆಯ ದಿನ  ಡಿಸಿಸಿ ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿವರೆಗೂ ಪಾದಯಾತ್ರೆ ನಡೆಸಿ ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೊದಲ ದಿನ ಪಾದಯಾತ್ರೆಯಲ್ಲಿ  ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನವೇ ಸುಮಾರು 25 ಸಾವಿರ ಜನರನ್ನ ಸೇರಿಸಿ ಪಾದಯಾತ್ರೆಗೆ ಪ್ಲಾನ್ ಮಾಡಲಾಗಿದ್ದು, ಪ್ರತಿ ದಿನ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಬಂದ ಎಲ್ಲ ನಾಯಕರಿಗೂ ಉಳಿದುಕೊಳ್ಳಲು ಹಾಸ್ಟಲ್, ಸ್ಕೂಲ್ ಸೇರಿದಂತೆ ವಿವಿದೆಡೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಾದಯಾತ್ರೆ ಮಧ್ಯೆ ಪ್ರತಿದಿನ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದ್ದು ಇದಕ್ಕಾಗಿಯೇ ಸುಮಾರು ಒಂದುವರೆ ಎಕರೆ ಪ್ರದೇಶದಲ್ಲಿ  ಸಿದ್ಧತೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ  ಬೇರೆ ಬೇರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Share