Connect with us


      




ಕರ್ನಾಟಕ

ನಾಳೆಯಿಂದ SSLC ಪರೀಕ್ಷೆ; ಹಿಜಾಬ್ ಧರಿಸುವಂತಿಲ್ಲ

Kumara Raitha

Published

on

ಬಾಗಲಕೋಟೆ: ಮಾ.27 ( ಯು.ಎನ್.ಐ) ಮಾ.28 ಸೋಮವಾರದಿಂದ 10ನೇ ತರಗತಿ ಪರೀಕ್ಷೆ ಆರಂಭವಾಗ್ತಿದೆ.‌ಪರೀಕ್ಷೆಗೆ ರಾಜ್ಯಾದ್ಯಂತ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯಾರ್ಥಿಗಳು ಪರೀಕ್ಷೆಗೆ ಸಮವಸ್ತ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಬಾಗಲಕೋಟೆಯಲ್ಲಿ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಿಕ್ಷಣ ವಿಭಾಗದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸಚಿವರಾದ ಬಿ.ಸಿ.‌ನಾಗೇಶ್ ಪರಿಶೀಲನೆ ನಡೆಸಿದ್ರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಕರ್ನಾಟಕ ಶಿಕ್ಷಣ ಕಾಯ್ದೆ, ರಾಜ್ಯ ಸರ್ಕಾರದ ಆದೇಶಗಳು, ಸುತ್ತೋಲೆಗಳು ಹಾಗೂ ತರಗತಿಗಳಲ್ಲಿ ಸಮವಸ್ತ್ರ ನಿಯಮ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಪ್ರಕಾರ, ಸಮವಸ್ತ್ರದಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗಬೇಕು.

ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು ಸಮವಸ್ತ್ರ ಇಲ್ಲದೇ ಸಾಮಾನ್ಯ ಧಿರಿಸಿನಲ್ಲಿ ಪರೀಕ್ಷೆ  ಬರೆಯಲು ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು. ತರಗತಿಗಳಲ್ಲಿ ಕೇಸರಿ ಶಾಲು, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರ ಅಥವಾ ಉಡುಪು, ಹೊದಿಕೆ ಹಾಕಿಕೊಳ್ಳಲು, ಪ್ರದರ್ಶನ ಮಾಡಲು ಅನುಮತಿ ಇರುವುದಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಮಕ್ಕಳು ಪಾಲಿಸಬೇಕು ಎಂದು ತಿಳಿಸಿದರು.

8.73 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕೋವಿಡ್ ಸೋಂಕು, ಸೋಂಕಿನ ಲಕ್ಷಣಗಳು ಇರುವವರಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರುತ್ತದೆ ಎಂದರು.

Share