Connect with us


      




ಸಾಮಾನ್ಯ

ಪೆರಿಫರೆಲ್ ರಿಂಗ್ ರಸ್ತೆ; ಸರ್ಕಾರದೊಂದಿಗೆ ಚರ್ಚೆ: ಎಸ್.ಆರ್.ವಿಶ್ವನಾಥ್

Kumara Raitha

Published

on

ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರು ಶುಕ್ರವಾರ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.

ಬೆಂಗಳೂರು: ಫೆಬ್ರವರಿ ೧೦ (ಯು.ಎನ್.‌ಐ.) ಸರ್ಕಾರ ಮತ್ತು ರೈತರೊಂದಿಗೆ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿದ ನಂತರವೇ ಪೆರಿಫರೆಲ್ ರಿಂಗ್ ರಸ್ತೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.

ಶುಕ್ರವಾರ ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ವಿಶ್ವನಾಥ್ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತರ ನಿಯೋಗದೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಯೋಜನೆ ಕಾರ್ಯಗತದ ಬಗ್ಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆ. ಆದರೆ, ಯಾವ ಯಾವ ಅಂಶಗಳ ಬಗ್ಗೆ ಏನೇನು ನಿರ್ಧಾರ ಕೈಗೊಂಡಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸರ್ಕಾರದಿಂದ ಈ ಬಗ್ಗೆ ಎಲ್ಲಾ ಮಾಹಿತಿಗಳು ಬಂದ ನಂತರ ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕ್ಷಿಪ್ರಗತಿಯಲ್ಲಿ ಬೆಂಗಳೂರು ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯೂ ದುಪ್ಪಟ್ಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಪಿಆರ್ ಆರ್ ರಸ್ತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳೆದ ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಈಗ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ರೈತರ ಹಿತ ಕಾಪಾಡಲು ಬದ್ಧ:
ಇದೇ ವೇಳೆ, ರೈತರ ಹಿತವನ್ನು ಬಲಿ ಕೊಟ್ಟು ಯೋಜನೆಯನ್ನು ಕಾರ್ಯಗತಗೊಳಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು ಮತ್ತು ಇನ್ನಿತರೆ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಈ ಬಗ್ಗೆ ರೈತರೊಂದಿಗೂ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಭೂಮಿ ಕಳೆದುಕೊಳ್ಳುವ ರೈತರು ಮತ್ತು ಮಾಲೀಕರಿಗೆ ನಗದು ರೂಪದಲ್ಲಿಯೇ ಪರಿಹಾರ ನೀಡಲಾಗುತ್ತದೆ. ಯಾವ ಮಾರ್ಗಸೂಚಿಯನ್ನಿಟ್ಟುಕೊಂಡು ಪರಿಹಾರ ನೀಡಬೇಕೆಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ವಿಶ್ವನಾಥ್ ತಿಳಿಸಿದರು.
ಫೆಬ್ರವರಿ 28 ಕ್ಕೆ ರೈತರೊಂದಿಗೆ ಮತ್ತೊಂದು ಸಭೆ:
ಈ ವೇಳೆ ಮಾತನಾಡಿದ ಆಯುಕ್ತ ರಾಜೇಶ್ ಗೌಡ ಅವರು, ಯೋಜನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿಸ್ತೃತವಾಗಿ ಚರ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಫೆಬ್ರವರಿ 28 ರಂದು ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ರೈತರ ಬೇಡಿಕೆ:
ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಭೂಮಿ ನೀಡುವವರಿಗೆ 2013 ರ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಪರಿಹಾರ ನೀಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

Share