Connect with us


      
ರಾಜಕೀಯ

ಬಂಡಾಯದ ನಡುವೆಯೇ ರಾಜೀನಾಮೆ ನೀಡಲು ಸಿದ್ಧ ಎಂದ ಸಿಎಂ ಉದ್ಧವ್ ಠಾಕ್ರೆ

Lakshmi Vijaya

Published

on

ಮುಂಬೈ: ಜೂನ್ 22 (ಯು.ಎನ್.ಐ.) ತಮ್ಮ ಪಕ್ಷದಲ್ಲಿ ಬಂಡಾಯ ಬಿಕ್ಕಟ್ಟು ಸ್ಫೋಟಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಾವು ರಾಜೀನಾಮೆ ಕೊಡಲು ಸಿದ್ಧ ಎಂದಿದ್ದಾರೆ. ತಾವು ಕುರ್ಚಿಗಾಗಿ ಹೋರಾಡುವುದಿಲ್ಲ ಮತ್ತು ನಮ್ಮ ಪಕ್ಷ ಶಿವಸೇನೆಯು ಹಿಂದುತ್ವವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಒಬ್ಬ ಶಾಸಕನಾದರೂ ಆಕ್ಷೇಪಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ನನ್ನ ರಾಜೀನಾಮೆ ಪತ್ರವನ್ನು ಸಿದ್ಧವಾಗಿರಿಸುತ್ತಿದ್ದೇನೆ. ನಾನು ರಾಜೀನಾಮೆ ನೀಡಬೇಕೆಂದು ಬಯಸಿದರೆ ನೀವು ನನಗೆ ಹೇಳಿ ಎಂದು ಉದ್ಧವ್ ಠಾಕ್ರೆ ಹೇಳಿದರು.

30 ಶಿವಸೇನೆ ಶಾಸಕರು ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕನನ್ನಾಗಿ ಬೆಂಬಲಿಸಿ ರಾಜ್ಯಪಾಲರಿಗೆ ಪತ್ರ ಬರೆದ ನಂತರ ಉದ್ಧವ್ ಠಾಕ್ರೆ ಮಾತನಾಡಿದರು.ಏಕನಾಥ್ ಶಿಂಧೆ ಅವರೊಂದಿಗೆ ಹೋಗಿರುವ ಶಾಸಕರಿಂದ ನನಗೆ ಕರೆಗಳು ಬರುತ್ತಿವೆ; ಅವರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆಂದು ಹೇಳುತ್ತಿದ್ದಾರೆ ಎಂದು ಠಾಕ್ರೆ ಹೇಳಿದರು.

ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯ ಹೋಟೆಲ್‌ನಲ್ಲಿರುವ ಬಂಡಾಯ ಶಾಸಕರನ್ನು ಬಂಡಾಯದ ಕೃತ್ಯಕ್ಕಾಗಿ ಅವರನ್ನು ಉದ್ಧವ್ ಠಾಕ್ರೆ ವಜಾಗೊಳಿಸಿದ ಒಂದು ದಿನದ ನಂತರ ಏಕನಾಥ್ ಶಿಂಧೆ ಅವರು ಇನ್ನೂ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಬಂಡಾಯ ಶಾಸಕರು ಪತ್ರ ಬರೆದಿದ್ದಾರೆ.

ಶಿವಸೇನೆ ಪಕ್ಷದ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಕರೆದಿರುವ ಸಭೆ ಕಾನೂನುಬಾಹಿರವಾಗಿದೆ ಎಂದು ಬಂಡಾಯ ಶಾಸಕರು ಒತ್ತಾಯಿಸಿದ್ದಾರೆ.
ಬಂಡಾಯ ಗುಂಪಿನಿಂದ ಭರತ್ ಗೊಗಾವ್ಲೆ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಮತ್ತು ಅವರು ಇನ್ನೂ ಶಿವಸೇನೆಯೊಂದಿಗೆ ಇದ್ದಾರೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ. ಹೊಸ ನೇಮಕಾತಿಯು ಉದ್ಧವ್ ಠಾಕ್ರೆ ಅವರ ನಾಮನಿರ್ದೇಶಿತ ಸುನೀಲ್ ಪ್ರಭು ಅವರನ್ನು ಮುಖ್ಯ ಸಚೇತಕರನ್ನಾಗಿ ರದ್ದುಗೊಳಿಸಿದೆ ಎಂದು ಬಂಡುಕೋರರು ಹೇಳಿದ್ದಾರೆ. ಪತ್ರಕ್ಕೆ ಸಹಿ ಮಾಡಿರುವ 34 ಮಂದಿಯಲ್ಲಿ ನಾಲ್ವರು ಸ್ವತಂತ್ರ ಶಾಸಕರು ಸೇರಿದ್ದಾರೆ.

Share