Connect with us

ರಂಗಭೂಮಿ

ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ

ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ

pratham

Published

on

Photo:Google

ಬೇಜಾರಂದರೆ ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ. ಒಂದೆರಡು ದಿವಸ ಖುಷಿಗೆ ಮುದ್ದೆ ಮುರಿದು ರುಚಿ ಹತ್ತದೆ ನಿಲ್ಲಿಸಿಬಿಡುತ್ತಾರೆ. ಹೊರಗಿನವರು ವಿಚಾರಿಸಿದಾಗ ಪರಿಚಯಿಸಲು ಸಹ ಅಗತ್ಯ ಜ್ಞಾವಿರದಿರುವಷ್ಟು ಬರಡಾಗಿದ್ದೇವೆ.

ಮುದ್ದೆಗೆ ಅದರದೆ ಆದ ಸೌಂದರ್ಯವಿದೆ. ಕಟ್ಟುವ ಕಲೆಯಿದೆ. ಒಮ್ಮೆಗೆ ಒಂದೇ ಮುದ್ದೆ ಬೇಯಿಸಿ ಕಟ್ಟುವ ಚತರುರು ಇರುವರು. ಅಡ್ಡಾದಿಡ್ಡಿ ಕಟ್ಟಿ ಏನೇನೊ ಅವತಾರ ನಡೆಸಿ ಅದರ ಸೌಂದರ್ಯ ಹಾಳುಗೆಡವಿದ್ದಾರೆ ಈಗಿನ ಜನ. ಮೂಲ ಜನರೇ ಇಲ್ಲಿ ಆಪಾದಿತರು. ಮುದ್ದೆ ಸಂಸ್ಕೃತಿಯನ್ನು ಹಸ್ತಾಂತರಿಸುವಲ್ಲಿ ಬಹಳಾನೆ ಎಡವಿದ್ದಾರೆ. ಎರಡು ದಶಕಗಳಲ್ಲಿ ಮುಕ್ಕಾಲು ಜ್ಞಾನ ಮಣ್ಣು ಸೇರಿದೆ.

ಮುದ್ದೆ ಕಟ್ಟುವುದೆಂದರೆ ಹಿಟ್ಟನ್ನು ಚನ್ನಾಗಿ ಕುದಿಸಿ ಬೇಯಿಸಿ ದುಂಡದುಂಡಗೆ ನಯಸ್ಸಾಗಿ ಕಟ್ಟಬೇಕು. ವಿಕಾರವಾಗಿ ಕಟ್ಟಿದರೆ ಅಲ್ಲೆ ಅರ್ಧ ಮನಸು ಬೀಳುತ್ತದೆ. ತುತ್ತನ್ನು ನಾಲಿಗೆ ಮೇಲಿಟ್ಟರೆ ಅದೆಟ್ಕೆ ಅದೇ ಗಂಟಲಿಗಿಳಿಯಬೇಕು, ಸುಯ್ಯನೆ ಅನ್ನನಾಳದ ಮೂಲಕ ಜಾರುಬಂಡಿಯಂತೆ ಜಾರಬೇಕು. ಸುಡುವ ತುತ್ತು ಅನ್ನನಾಳದಲ್ಲಿ ಜಾರುತ್ತಿರುವುದು ನಿಮಗೆ ಅರಿವಾಗುತ್ತದೆ. ಅದೆಂಥ ದಿವ್ಯ ಅನುಭವ ಗೊತ್ತೇ? ಅಷ್ಟು ಮೆತ್ತಗಿರಬೇಕು ಮುದ್ದೆ. ಗುಂಡಕಲ್ಲಿನಂತೆ ಕಟ್ಟಿದರೆ ಗಂಟಲಿನಲ್ಲಿ ಸಿಕ್ಕಿಕೊಳ್ಳುತ್ತದೆ, ಪಾಯಸದಂತೆ ಮಾಡಿದರೆ ಬಾಯಿಗೆ ಅಂಟಿಕೊಳ್ಳುತ್ತದೆ. ಹಲವರ ಹೊಸ ಪ್ರಯತ್ನಗಳಲ್ಲಿ ಹಿಟ್ಟಿನ ಗಂಟುಗಳು ಉಳಿದುಬಿಡುತ್ತವೆ. ಸ್ವಲ್ಪ ಅಕ್ಕಿ/ಅನ್ನ ಬೆರೆಸಿದರೆ ಸುಲಭವಾಗಿ ಗಂಟುಗಳನ್ನು ನಿವಾರಿಸಬಹುದು. ಥಂಬ್ ರೂಲ್- ನಿಮ್ಮ ಮುದ್ದೆ ಸಾರಿನಲ್ಲಿ ಕರಗುತ್ತಿದ್ದರೆ ಅದು ಮುದ್ದೆಯೇ ಅಲ್ಲ ಎಂದರ್ಥ.

ಆಗ ತಾನೆ ಬೇಯಿಸಿದ ಮುದ್ದೆ ಬೆಳಕನ್ನು ಪ್ರತಿಫಲಿಸಿ ಫಳ ಫಳ ಹೊಳೆಯುತ್ತಿರುತ್ತದೆ. ತಟ್ಟೆಯಲ್ಲಿ ಅದೇ ಬಾಸು. ಗತ್ತಿನಿಂದ ರಾಜನ ಸೀಟಿನಲ್ಲಿ ಕೂತಿರುತ್ತದೆ. ಪಲ್ಯ ದಳಪತಿ, ಸಾರು ಮಂತ್ರಿಮಹೋದಯರು. ಬಿಸಿಬಿಸಿಯಾದ ಮುದ್ದೆ ತಿನ್ನಬೇಕು. ನಿಮ್ಮ ದೋಸೆ ತರಹ. ಮಾಯಾವಿ ಇದು, ಆರಿದಂತೆಲ್ಲ ಸೊಗಸು ಆವಿಯಾಗುತ್ತದೆ. ಸಂಪೂರ್ಣ ಆರಿದ ನಂತರ ಪುನಃ ಮೆಲ್ಲಗೆ ಸೊಗಸನ್ನು ವಾಪಸ್ಸು ಹೀರಿಕೊಳ್ಳಲಾರಂಭಿಸುತ್ತದೆ. ತಂಗಳಾಗುವ ತನಕ. ತಂಗಳು ಹಿಟ್ಟು ಎನ್ನುತ್ತಾರಲ್ಲ ಅದು ಬಿಸಿ ಬಿಸಿ ಮುದ್ದೆಯಷ್ಟೇ ಅಲ್ಟಿಮೇಟು. ಅದನ್ನು ಮೊಸರು/ಮಜ್ಜಿಗೆಯೊಳಗೆ ಕಿವುಚಿರಿ. ಹಾ ಅಸಹ್ಯ ಪಟ್ಟುಕೊಳ್ಳದೆ ಬೆತ್ತಲೆ ಬೆರಳುಗಳಿಂದ ಕಿವುಚಿ, ಉಪ್ಪು ಹಾಕಿ ಕಲಸಿ. ಮುಂಬೆರಳುಗಳನ್ನು ಸಾಲಾಗಿ ಚಮಚದಂತೆ ಜೋಡಿಸಿ ಕಲಸಿದ ಮುದ್ದೆಯನ್ನು ಎತ್ತಿಕೊಂಡು ಬಾಯಿಯಲ್ಲಿಟ್ಟುಕೊಳ್ಳಿ. ತಂಗಳಿನ ಉಳಿ ಜೊತೆಗೆ ಹುಳಿ ಮಜ್ಜಿಗೆ ಬೆರೆತ ವಿಶಿಷ್ಟ ಸ್ವಾದ ನಿಮ್ಮ ಬಾಯಿ ತುಂಬ. ಕೊನೆಯಲ್ಲಿ ತಟ್ಟೆಯನ್ನು ಬಳಿಯುವುದು ಮರೆಯದಿರಿ. ಬಳಿದು ತಿನ್ನುವ ಕಡೆಯ ಭಾಗಕ್ಕೆ ಎಂದಿಗೂ ಅದರದೇ ಆದ ಗಮ್ಮತ್ತು ಇರುವುದು‌. ಸ್ಪೂನು ನಿಮ್ಮನ್ನು ಈ ಸುಖದಿಂದ ವಂಚಿಸಿದೆ.

ಇಷ್ಟಾಯಿತು;
ಬಹಳಷ್ಟು ಜನ ಚನ್ನಾಗಿ ಮುದ್ದೆ ಕಟ್ಟಿದರೂ ಬಹುಬೇಗ ರುಚಿ ಕಳೆದುಕೊಂಡು ಮುದ್ದೆಯೆಂದರೆ ಇಷ್ಟೇ ಎಂದು ನಿರಾಸೆಯಾಗುತ್ತಾರೆ. ಕಾರಣ ಬೇರೆ ಇದೆ. ನಗರಗಳ ಸ್ಟಾಂಡರ್ಡ್ ತರಕಾರಿ ಹುಳಿಗಳು, ಎಂಟಿಆರ್ ಪುಡಿಯ ಸಾಂಬಾರು, ರಸಂ ಮುಂತಾದವುಗಳಲ್ಲೆಲ್ಲ ಮುದ್ದೆ ಅದ್ದಿ ಧರ್ಮಬ್ರಷ್ಟತೆ ಎಸಗಿರುತ್ತಾರೆ. ಮುದ್ದೆಯ ಅರ್ಧ ರುಚಿ ಇರುವುದು ಅದಕ್ಕೆಂದೇ ಸೀಮಿತವಾಗಿರುವ ಸಾರುಗಳಲ್ಲಿ. ದೊಡ್ಡ ಲೆಕ್ಕದಲ್ಲಿ ಈ ಸಾರುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಸೊಪ್ಪಿನ ಸಾರುಗಳು, ಬಸ್ಸಾರುಗಳು(ಬಸಿದ ಸಾರು), ಕಾಳಿನ ಸಾರುಗಳು, ಮಸಾಲೆ ಸಾರುಗಳು(ಕೋಳಿ ಕುರಿ ಮೀನು ಏಡಿ…).
ಈ ನಾಲ್ಕರಿಂದ ನಲವತ್ತು ಐವತ್ತು ವಿಧಗಳ ಸಾರುಗಳನ್ನು ತಯಾರಿಸಬಹುದು. ಇವುಗಳೊಂದಿಗೆ ಅರ್ಧಾಂಭ್ರ, ಕಿವುಚಾಂಬ್ರ,ಸಪ್ನೀರು… ಇನ್ನೇನಿಲ್ಲ ಎರಡು ಬದನೆ ಎರಡು ಈರುಳ್ಳಿ ಎರಡು ಹಸಿ ಮೆಣಸಿನಕಾಯಿಯನ್ನು ಸುಟ್ಟು ಕಿವುಚಿ ನಾಲಿಗೆ ಮೇಲೆ ಬಿಟ್ಟುಕೊಂಡರೆ ಮುಗೀತು, ಬೆಂಕಿ ಧಗ್ ಎಂದು ಹತ್ತಿಕೊಳ್ಳುತ್ತದೆ. ಇನ್ನು ಮಸಾಲೆ ಸಾರುಗಳು ಕೇಳಬೇಕೇ- ಒಂದು ಮನೆಯಲ್ಲಿ ಸಾರು ಕುದಿಯುತ್ತಿದ್ದರೆ ಊರಿನ ಮೂಗಿನ ಹೊಳ್ಳೆಗಳೆಲ್ಲ ಅರಳುತ್ತವೆ. ಹಾಗೆ ಊರಿಗೆ ಬೆಂಕಿಯಿಟ್ಟಂತೆ ಘಮಘಮ ಅಂತಿರಬೇಕು ನಿಮ್ಮ ಮನೆಯ ಮಸಾಲೆ, ಅದರೊಳಗೆ ಬೇಯುವ ತುಂಡುಗಳು. ಸೊಪ್ಪುಗಳನ್ನು ಬೇಯಿಸಿ ಪಲ್ಯ ಮಾಡಿ ರಸದಿಂದ ಸಾರು ಮಾಡಬಹುದು, ಸೊಪ್ಪನ್ನೆ ಮಸೆಯಬಹುದು. ಕಾಳುಗಳನ್ನು ಸಹ ಮಸಾಲೆ ಹಾಕದೆ ಕೇವಲ ಉಪ್ಪು ಮೆಣಸಿನಲ್ಲಿ ಬೇಯಿಸಿ ರಸದಿಂದ ಸಾರು, ಕಾಳು ಪಲ್ಯಕ್ಕೆಂದು. ಮೊಳಕೆ ಕಟ್ಟಿದರೆ ಅದು ಇನ್ನೊಂದು ಬಗೆ. ಮುದ್ದೆ ಜೋಡಿಯ ತೊಂಭತ್ತು ಭಾಗದ ಸಾರುಗಳು ಎಣ್ಣೆ ಮತ್ತು ಮಸಾಲೆ ಬೇಡುವುದಿಲ್ಲ. ಅತ್ಯಂತ ನೈಸರ್ಗಿಕ ಸಾರುಗಳು ಇವು. ಹಿಂದೆ ಒಂದು ಮನೆಗೆ ತಿಂಗಳಿಗೆ ಒಂದು ಕೇಜಿ ಎಣ್ಣೆ ಖರ್ಚಾಗುತ್ತಿತ್ತೊ ಇಲ್ಲವೊ. ಈಗಿನವರು ಬೆಳಗ್ಗೆ ಎದ್ದರೆ ಸಾಕು ಮೊದಲ ಕೆಲಸ ಬಾಂಡ್ಲಿಯಲ್ಲಿ ನೂರು ಗ್ರಾಂ ಎಣ್ಣೆ ಸುರಿಯುತ್ತಾರೆ. ಆನಂತರ ಏನು ಅಡಿಗೆಯೆಂದು ಯೋಚಿಸುತ್ತಾರೆ.

ಮುದ್ದೆ ಕಾಣೆಯಾಗುತ್ತಿರುವುದಕ್ಕೆ ೧೦% ಮುದ್ದೆ ಕಟ್ಟಲು ಬರದಿರುವುದು , ೯೦% ಜೋಡಿ ಸಾರುಗಳು ಇಲ್ಲದಿರುವುದು. ನೀವು ತಿಪ್ಪರಲಾಗ ಹಾಕಿದರೂ ಅದನ್ನು ವರುಷಾನುಗಟ್ಟಲೆ ತರಕಾರಿ ಹುಳಿಗಳಲ್ಲಿ ತಿನ್ನಲಾರಿರಿ. ಇದು ಮಂತ್ರ- ನಿಮಗೆ ಮುದ್ದೆ ಆಸೆಯಿದ್ದಲ್ಲಿ ಮೊದಲು ಸಾರುಗಳನ್ನು ಕಲಿಯಿರಿ. ಆನಂತರ ಮುದ್ದೆ. ಮೊದಲೇ ಮುದ್ದೆಗೆ ಕೈಹಾಕಿದರೆ ಸೋಲು ನಿಶ್ಚಿತ.

ಆಗ ತಾನೆ ಕಟ್ಟುತ್ತಿರುವ ಮುದ್ದೆಯಲ್ಲಿ ಚೂರು ತೆಗೆದು ಅದರಲ್ಲಿ ಉಪ್ಪು ಮತ್ತು ತುಪ್ಪ ಬೆರೆಸಿ ಪಿಡಿಸೆ ಮಾಡಿ ಮಕ್ಕಳ ಕೈಗೆ ಕೊಟ್ಟು ನೋಡಿ. ಬಾಲ್ಯದಿಂದಲೆ ಮುದ್ದೆಯ ರುಚಿ ಹತ್ತಿಸುವುದು ಹಾಗೆ. ಮುದ್ದೆ ತಪ್ಪಲೆ ತಳದಲ್ಲಿ ಸೀಕಲು ಉಳಿದಿರುತ್ತದೆ. ಸುಮ್ಮನೆ ನಿಮ್ಮ ಚಕ್ಕುಲಿ ಹಪ್ಪಳಗಳಂತೆ ಅದನ್ನು ಎಬ್ಬಿ ತಿನ್ನಲು ಕೊಡಿ.

ಒಟ್ಟಾರೆ ಗಮನಿಸಿದಾಗ ನಿಮ್ಮ ಡಯೆಟು ರೂಲುಗಳನ್ನೆಲ್ಲ ಮುದ್ದೆ ಸಂಸ್ಕೃತಿಯ ಮುಂದೆ ನಿವಾಳಿಸಿ ಬಿಸಾಡಬೇಕು. ಇಲ್ಲಿ ಅನ್ನದ ಕಾರ್ಬ್ ಇಲ್ಲ, ಎಣ್ಣೆಯ ಜಿಡ್ಡಿಲ್ಲ, ಯಾವುದೇ ಕರಿಯುವಿಕೆ(ಫ್ರೈ) ಇಲ್ಲ, ಸೊಂಪಾದ ನೈಸರ್ಗಿಕ ಕಾಳು ಸೊಪ್ಪುಗಳು. ಹಾ ಸೊಪ್ಪೆಂದರೆ ಪಾಲಕ್ ಮೆಂತ್ಯೆ ಅಲ್ಲ. ಹೊಲದಲ್ಲಿ ಬಿಡುವಾಗಿ ಬೆಳೆವ ದೇಸೀ ಸೊಪ್ಪುಗಳು. ಅಣ್ಣೆ ದಂಟು ಅರಿವೆ ನುಗ್ಗೆ..
ಮತ್ತು ದಷ್ಟಪುಷ್ಟಿಗೆಂದು ಕಾಳು ಕಡಿ ಮೇಯ್ದ ಕೋಳಿಗಳು, ಸೊಪ್ಪು ಸೆದೆ ಮೇಯ್ದ ಮೇಕೆ ಕುರಿಗಳು, ಕೆರೆಯ ಏಡಿ ಮೀನುಗಳು..

ಏನಾದರೂ ಬಿಟ್ಟೆನಾ, ನೆನಪು ನುಗ್ಗಿ ಬರುತ್ತಿದೆ.

ಮೊದಲಿಗೆ ಮುದ್ದೆಯ ಮೂಲ ಜನರು ಎಚ್ಚೆತ್ತುಕೊಳ್ಳಿ. ಮನೆಯವರಿಂದ ಕೇಳಿ ತಿಳಿದು ಜ್ಞಾನ ವಿಸ್ತರಿಸಿಕೊಳ್ಳಿ. ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ಅಪರೂಪಕ್ಕೆ ವಿಕಾರವಾದ ಮುದ್ದೆ ಕಟ್ಟಿ ಅಸಭ್ಯ ಸಾರನ್ನು ಇಟ್ಟು ಹೊಸಬರಿಗೆ ಪರಿಚಯಿಸಲು ಹೋಗಿ ಸೋತು ನಿರಾಶರಾಗದಿರಿ. ಪೂರ್ವ ತಯಾರಿಯಿರಲಿ. ಯಾರ ಮುಂದೆಯೂ ಕೀಳರಿಮೆ ಅನುಭವಿಸಬೇಡಿ. ಮುದ್ದೆಗೆ ರಾಜಗಾಂಭೀರ್ಯವಿದೆ. ಅದು ತಟ್ಟೆಯಲ್ಲಿ ಚಪಾತಿಯಂತೆ ತೆಪ್ಪಗೆ ಮಲಗಿರಲ್ಲ, ಇಡ್ಲಿಯಂತ ಎಳಸು ಜೀವಿಯಲ್ಲ, ಅನ್ನದಂತೆ ಎಲ್ಲ ಕಡೆಯೂ ಸಲ್ಲುವ ವಲಸಿಗನಲ್ಲ. ಮುದ್ದೆಗೆ ನಿರ್ದಿಷ್ಟ ಸ್ಥಾನವಿದೆ. ರಾಜಧಾನಿಯಿದೆ, ಅರಮನೆಯಿದೆ. ರಾಜಗಾಂಭೀರ್ಯದಲ್ಲಿ ಸಿಂಹಾಸನದಲ್ಲಿ ಎದೆಯೆತ್ತಿ ಎತ್ತರದಲ್ಲಿ ಕೂತಿರುತ್ತದೆ. ಅರ್ಥಾತ್‌ ತಟ್ಟೆಯಲ್ಲಿ ಅದರದ್ದೇ ಆದ ಪೀಠವಿದೆ. ಎಲ್ಲಂದರಲ್ಲೆ ಕೂರುವ ವ್ಯಕ್ತಿಯಲ್ಲ. ಒಡ್ಡೋಲಗವನ್ನು ಬಡಿಸುವವರನ್ನು ನಿರ್ದೇಶಿಸುವ ತಾಕತ್ತು ಮುದ್ದೆಯದು.

“ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ”

ಮೊದಲಿಗೆ ಮುದ್ದೆಯ ಮೂಲ ಜನರು ಎಚ್ಚೆತ್ತುಕೊಳ್ಳಿ. ಮನೆಯವರಿಂದ ಕೇಳಿ ತಿಳಿದು ಜ್ಞಾನ ವಿಸ್ತರಿಸಿಕೊಳ್ಳಿ. ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ಅಪರೂಪಕ್ಕೆ ವಿಕಾರವಾದ ಮುದ್ದೆ ಕಟ್ಟಿ ಅಸಭ್ಯ ಸಾರನ್ನು ಇಟ್ಟು ಹೊಸಬರಿಗೆ ಪರಿಚಯಿಸಲು ಹೋಗಿ ಸೋತು ನಿರಾಶರಾಗದಿರಿ. ಪೂರ್ವ ತಯಾರಿಯಿರಲಿ. ಯಾರ ಮುಂದೆಯೂ ಕೀಳರಿಮೆ ಅನುಭವಿಸಬೇಡಿ. ಮುದ್ದೆಗೆ ರಾಜಗಾಂಭೀರ್ಯವಿದೆ. ಅದು ತಟ್ಟೆಯಲ್ಲಿ ಚಪಾತಿಯಂತೆ ತೆಪ್ಪಗೆ ಮಲಗಿರಲ್ಲ, ಇಡ್ಲಿಯಂತ ಎಳಸು ಜೀವಿಯಲ್ಲ, ಅನ್ನದಂತೆ ಎಲ್ಲ ಕಡೆಯೂ ಸಲ್ಲುವ ವಲಸಿಗನಲ್ಲ. ಮುದ್ದೆಗೆ ನಿರ್ದಿಷ್ಟ ಸ್ಥಾನವಿದೆ. ರಾಜಧಾನಿಯಿದೆ, ಅರಮನೆಯಿದೆ. ರಾಜಗಾಂಭೀರ್ಯದಲ್ಲಿ ಸಿಂಹಾಸನದಲ್ಲಿ ಎದೆಯೆತ್ತಿ ಎತ್ತರದಲ್ಲಿ ಕೂತಿರುತ್ತದೆ. ಅರ್ಥಾತ್‌ ತಟ್ಟೆಯಲ್ಲಿ ಅದರದ್ದೇ ಆದ ಪೀಠವಿದೆ. ಎಲ್ಲಂದರಲ್ಲೆ ಕೂರುವ ವ್ಯಕ್ತಿಯಲ್ಲ. ಒಡ್ಡೋಲಗವನ್ನು ಬಡಿಸುವವರನ್ನು ನಿರ್ದೇಶಿಸುವ ತಾಕತ್ತು ಮುದ್ದೆಯದು.

ಏನಾದರೂ ಬಿಟ್ಟೆನಾ, ನೆನಪು ನುಗ್ಗಿ ಬರುತ್ತಿದೆ.

ಮುದ್ದೆ ಕಾಣೆಯಾಗುತ್ತಿರುವುದಕ್ಕೆ ೧೦% ಮುದ್ದೆ ಕಟ್ಟಲು ಬರದಿರುವುದು , ೯೦% ಜೋಡಿ ಸಾರುಗಳು ಇಲ್ಲದಿರುವುದು. ನೀವು ತಿಪ್ಪರಲಾಗ ಹಾಕಿದರೂ ಅದನ್ನು ವರುಷಾನುಗಟ್ಟಲೆ ತರಕಾರಿ ಹುಳಿಗಳಲ್ಲಿ ತಿನ್ನಲಾರಿರಿ. ಇದು ಮಂತ್ರ- ನಿಮಗೆ ಮುದ್ದೆ ಆಸೆಯಿದ್ದಲ್ಲಿ ಮೊದಲು ಸಾರುಗಳನ್ನು ಕಲಿಯಿರಿ. ಆನಂತರ ಮುದ್ದೆ. ಮೊದಲೇ ಮುದ್ದೆಗೆ ಕೈಹಾಕಿದರೆ ಸೋಲು ನಿಶ್ಚಿತ.

Continue Reading
Share