Connect with us


      
ಸಾಮಾನ್ಯ

ಸುಸ್ಥಿರ ನಾಳೆ ಎಂಬ ಕನಸು

Kumara Raitha

Published

on

ಶ್ರೀದೇವಿ ಕೆರೆಮನೆ

ಅಂಕಣ: ಮುಖಗಳು

ಮಹಿಳಾ ದಿನಾಚರಣೆ ಮುಗಿಸಿದ್ದೇವೆ. ಮಹಿಳೆಯರನ್ನು ಹಾಡಿ ಹೊಗಳಿ ಈ ಲೋಕದ ಅತೀತರು ಎಂಬಂತೆ ಚಿತ್ರಿಸಿದ್ದೇವೆ. ಭೂಮ್ಯಾಕಾಶದ ಉದ್ದಗಲಕ್ಕೂ ವಿಸ್ತರಿಸಿಕೊಂಡ ಹೆಣ್ಣೆಂಬ ವ್ಯಕ್ತಿಯನ್ನು ವ್ಯಕ್ತಿತ್ವವನ್ನು ನಾನಾ ತರಹದಲ್ಲಿ ಹೊಗಳಿ ಅಟ್ಟಕ್ಕೇರಿಸಿ, ಹೊನ್ನ ಶೂಲದ ತುದಿಗೆ ಸಿಕ್ಕಿಸಿದ್ದೇವೆ. ಇವೆಲ್ಲದರ ನಡುವೆ ನನಗೆ ಕೆಲವು ಅಚ್ಚರಿಗಳೂ ಕಂಡಿವೆ.

 ತುಂಬ ಸೂಕ್ಷ್ಮ ಸಂವೇದನೆ ಉಳ್ಳವರು ಎಂದು ನಾನು ಭಾವಿಸಿದ್ದ ಹಲವರು ಫೇಸ್ ಬುಕ್ ನಲ್ಲಿ ಮಾಡಿದ ಹಾರೈಕೆಗಳು ಒಂದು ರೀತಿಯಲ್ಲಿ ದಿಗ್ಭ್ರಮೆಗೆ ದೂಡಿದವು. ಲೆಪ್ಟ್ ಗೆ ಇಂಡಿಕೇಟರ್ ಕೊಟ್ಟು ರೈಟ್ ಗೆ ಗಾಡಿ ತಿರುಗಿಸುವವರ ದಿನಾಚರಣೆಯ ಶುಭಾಶಯಗಳು ಎಂದು ಒಬ್ಬರು ಬರೆದುಕೊಂಡಿದ್ದರು. ಅದಕ್ಕೆ ಬಹುತೇಕ ಹೆಣ್ಣು ಮಕ್ಕಳು ಹಾಗಾದರೆ ನನಗೆ ವಿಶ್ ಮಾಡಲ್ವಾ ಎನ್ನುವ ಅರ್ಥಬರುವಂತೆ ಕೇಳಿದ್ದ ಕಮೆಂಟ್ ಗಳಿದ್ದವು. ಹೆಣ್ಣನ್ನು ಬಲಾತ್ಕಾರ ಮಾಡುವವರಿಗೆ ವಂದನೆಗಳು ಎಂದು ಕಮೆಂಟ್ ಮಾಡಬೇಕು ಎಂದುಕೊಂಡವಳು ನಿಗ್ರಹಿಸಿಕೊಂಡೆ. ಒಬ್ಬರು ಮಾಡುವ ತಪ್ಪನ್ನು ಇಡೀ ಸ್ತ್ರೀ ಸಮುದಾಯದ ಮೇಲೆ ಹೇರಿ ಹಾಸ್ಯ ಮಾಡುತ್ತ ಹಾಸ್ಯಾಸ್ಪದವಾಗುವವರಂತೆ ಯಾರೋ ಎಸಗುವ ಅತ್ಯಾಚಾರವನ್ನು ಇಡೀ ಗಂಡಸು ಕುಲದ ಮೇಲೆ ಹೇರುವುದೂ ಕೂಡ ಅಷ್ಟೇ ಅನಾಗರಿಕ ಎನ್ನಿಸಿ ಸುಮ್ಮನಾದೆ.

ತಪ್ಪು ಎಲ್ಲಿ ಘಟಿಸುವುದಿಲ್ಲ ಹೇಳಿ? ಆದರೆ ಅದನ್ನು ಇಡೀ ಸಮುದಾಯವನ್ನು ದೂಷಿಸಲು ಬಳಸುವ ಮನಸ್ಥಿತಿಯೇ ನನಗೆ ವಿಚಿತ್ರ ಎನ್ನಿಸಿಬಿಡುತ್ತದೆ. ಬಹುಶಃ ಅದೇನೂ ಉದ್ದೇಶಪೂರ್ವಕ ನಿಂದನೆ ಆಗಿಲ್ಲದಿರಬಹುದು. ಆದರೆ ಶತಶತಮಾನಗಳಿಂದ ನಮ್ಮೆಲ್ಲರ ಮೇಲೆ ಹೇರಲ್ಪಟ್ಟ ಪುರುಷಕೇಂದ್ರಿತ ಮನಸ್ಸು ಇಂತಹ ಮಾತುಗಳನ್ನು ಸುಲಭವಾಗಿ ಆಡಿಬಿಡುವಂತೆ ಮಾಡುತ್ತದೆ.  ಆ ಮನಸ್ಸು ಕೇವನ ಗಂಡಿನಲ್ಲಷ್ಟೇ ಇರಬೇಕಾಗಿಲ್ಲ. ಅದು ಹೆಣ್ಣಿನ ಮನಸ್ಸನ್ನೂ ತನಗೆ ಬೇಕಾದಂತೆ ಪರಿವರ್ತಿಸಿಬಿಟ್ಟಿದೆ. ಹೀಗಾಗಿಯೇ ಇಂತಹ ಅಸೂಕ್ಷ್ಮ ಮಾತುಗಳು ಕೇವಲ ಹಾಸ್ಯ ಎನ್ನಿಸಕೊಳ್ಳುವುದರ ಹೊರತಾಗಿ ಅಸಹ್ಯ ಎನ್ನಿಸಿಬಿಡುತ್ತದೆ.

ಇತ್ತೀಚಿನ ವರ್ಗಾವಣೆ ಪ್ರಕ್ರಿಯೆಯ ನಂತರ ನಮ್ಮ ಪ್ರೌಢಶಾಲೆಯಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಗಳೇ ಆಗಿದ್ದೇವೆ. ಪಾಲಕರ ಹಾಗೂ ಎಸ್ ಡಿ ಎಂ ಸಿಯ ಮೀಟಿಂಗ್ ನಲ್ಲಿ ಈ ವಿಚಾರವಾಗಿ ದೊಡ್ಡ ಚರ್ಚೆಯೆ ನಡೆದು ಸಭೆಯ ಮುಕ್ಕಾಲು ಭಾಗ ಸಮಯವನ್ನು ಕೊಂದು ಹಾಕಿತು. ಎಲ್ಲರೂ ಶಿಕ್ಷಕಿಯರಾದರೆ ಹೊರಗಿನ ಕೆಲಸ ಮಾಡುವವರಾದರೂ ಯಾರು? ಬ್ಯಾಂಕ್, ಆಫೀಸ್ ಗಳಿಗೆ ಓಡಾಡಲು ಒಬ್ಬರಾದರೂ ಪುರುಷ ಶಿಕ್ಷಕರಿರಬೇಕು ಎಂದು ಒಬ್ಬ ಪಾಲಕರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ತಕ್ಷಣ ಬಹಳಷ್ಟು ಜನ ವಿರೋಧ ವ್ಯಕ್ತ ಪಡಿಸಿದರು. ನಿಮ್ಮ ಮನೆಯಲ್ಲಿ ಹೇಳಿದ ಕೆಲಸ ಮಾಡುವವರು ಯಾರು? ಮಗಳೋ ಮಗನೋ ಎಂದಾಗ ಮಗಳು ಎಂಬುದನ್ನು ಅವರು ಒಪ್ಪಿಕೊಂಡರೂ ಮತ್ತೆ ಮತ್ತೆ ಹೊರಗಿನ ಕೆಲಸಗಳಿಗೆ ಬೇಕಲ್ಲ ಎನ್ನುವ ಮಾತನ್ನು ಹೇಳುತ್ತಲೆ ಇದ್ದುದು ಸಮಾಜ ಹೆಣ್ಣನ್ನು ಇನ್ನೂ ಸ್ವತಂತ್ರವಾಗಿರಲು ಬಿಟ್ಟಿಲ್ಲ ಎನ್ನುವುದರ ಸೂಚಕವಾಗಿ ಕಾಣುತ್ತಿತ್ತು.

 ಇಂದು ಆಧುನಿಕತೆಯನ್ನು ಸಂಪೂರ್ಣವಾಗಿ ರೂಢಿಸಿಕೊಂಡಿದ್ದೇವೆ ಎನ್ನುವ ಕಾಲಘಟ್ಟದಲ್ಲಿಯೂ ಹೆಣ್ಣನ್ನು ತಮಾಷೆಯ ಸರಕನ್ನಾಗಿ ನೋಡುವುದನ್ನು ಅಬಲೆಯನ್ನಾಗಿ ಪರಿಗಣಿಸುವುದನ್ನು ಬಿಟ್ಟಿಲ್ಲ ಎನ್ನುವುದು  ನಿಜಕ್ಕೂ ಆಘಾತಕಾರಿ ವಿಷಯವೇ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಆರೋಪಿಗಳಿಗೆ ಬುದ್ಧಿ ಹೇಳುವ ಮಾತು ಪ್ರಚಲಿತಕ್ಕೆ ಬರುವ ಬದಲು ತೊಂದರೆಗೆ ಒಳಗಾದ ಮಹಿಳೆಯನ್ನೆ ಗುರಿಯಾಗಿಟ್ಟುಕೊಂಡು ಹೆಣ್ಣಿಗೆ ಸಂಸ್ಕಾರ ನೀಡುವ ಕುರಿತು ಮಾತುಗಳು ಹರಿದಾಡುತ್ತವೆ ಎಂಬುದನ್ನು ಗಮನಿಸಬೇಕು. ಇಂದಿಗೂ ಹೆಣ್ಣನ್ನು ಬೆಣ್ಣೆಗೆ ಹೋಲಿಸುವುದರ ಹಿಂದೆ ಹೆಣ್ಣು ಮೃದುತ್ವ ಹೊಂದಿದವಳು ಎಂಬ ಭಾವಕ್ಕಿಂತ ಆಕೆ ಬೆಂಕಿಯ ಶಾಖಕ್ಕೆ ಕರಗಿ ಹೋಗುವಷ್ಟು ಅಬಲೆ ಎಂಬ ಭಾವವೆ ಮುನ್ನೆಲೆಗೆ ಬರುತ್ತದೆ. ಹೀಗಾಗಿಯೆ ಬೆಣ್ಣೆಯಂತಹ ಹೆಣ್ಣನ್ನು ಪುರುಷರ ಬೆಂಕಿಯಿಂದ  ರಕ್ಷಿಸಬೇಕಾದುದ್ದು ಅತ್ಯಗತ್ಯ ಎಂದು ಎಲ್ಲರೂ ಭಾವಿಸುತ್ತಾರೆಯೆ ಹೊರತು ಶಾಖವನ್ನು ಸುಡದಂತೆ ಜ್ಯೋತಿಯಾಗಿ ಮನೆ ಬೆಳಗಿಸುವುದು ಹೇಗೆ ಎಂಬುದರ ಕುರಿತು ಯಾವ ಚಿಂತನೆಗಳೂ ನಡೆಯುತ್ತಿಲ್ಲ ಎಂಬುದು ವಿಪರ್ಯಾಸ.

 ಅತ್ಯಾಚಾರವಾದಾಗಲೆಲ್ಲ ಹೆಣ್ಣು ಹೆತ್ತ ಮನೆಗಳಲ್ಲಿ ಮಾತೊಂದು ಕೇಳಿಬರುತ್ತದೆ. ಬಟ್ಟೆಯೇ ಮುಳ್ಳಿನ  ಮೇಲೆ ಬಿದ್ದರೂ, ಮುಳ್ಳೆ ಬಂದು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೆ. ಹೀಗಾಗಿ ಹೆಣ್ಣು ಜಾಗರೂಕಳಾಗಿರಬೇಕು. ಹೆಣ್ಣನ್ನು ಬಟ್ಟೆಗೆ ಹೋಲಿಸುವ ಇಂತಹ ಅತ್ಯದ್ಭುತ ರೂಪಕಗಳ ಹಿಂದೆಯೂ ಅಂತಹುದ್ದೆ ಅಬಲೆ ಎಂದು ಛಾಪನ್ನು ಒತ್ತಿ ಬಿಡುವ ಮನೋಭಾವವಿದೆ. ಬಟ್ಟೆ ಹರಿದು ಹೋದಂತೆ ಹೆಣ್ಣು ಹರಿದು ಹೋಗುತ್ತಾಳೆ ಎನ್ನುವ ಮಾತಿನ ಹಿಂದಿರುವ ತಿರಸ್ಕಾರವನ್ನು ನಾವು ಗಮನಿಸಬೇಕು. ಪ್ರಕೃತಿ ಹೆಣ್ಣಿಗೆ ತಾಯಿಯಾಗುವ ವರವನ್ನು ನೀಡಿದೆ. ಆದರೆ ಪುರುಷಪ್ರಧಾನತೆಯನ್ನು ಸಾಧಿಸಲು ಅದೇ ಆಕೆಗೆ ಸಂಕೊಲೆಯಾಗಿ ಪರಿಣಮಿಸಿದೆ. ತಪ್ಪು ಮಾಡಿದವನು ರಾಜಾರೋಷವಾಗಿ ಓಡಾಡಿಕೊಂಡು, ತಪ್ಪು ಮಾಡದ ಹೆಣ್ಣು ಅಡಗಿ ಮೂಲೆ ಸೇರಲು ಇರುವ ಈ ಕಾರಣದಿಂದಾಗಿಯೆ ಹೆಣ್ಣು ಎಲ್ಲದರಲ್ಲೂ ಅಸಹಾಯಕಳು ಎಂಬಂತೆ ಚಿತ್ರಿಸಿಕೊಳ್ಳಬೇಕಾಗಿದೆ.

 ಮಹಿಳಾ ದಿನಾಚರಣೆಯ ಸಮದರ್ಭದಲ್ಲಿ ತುಂಡು ಬಟ್ಟೆ ಧರಿಸಿದರೆ ಪ್ರಚೋದನೆಯಾಗದೆ ಉಳಿದೀತೆ ಎನ್ನುವ ಲೇಖನವೊಂದನ್ನು ಓದಿದೆ. ನಿಜಕ್ಕೂ ಮಹಾನ್ ಅಚ್ಚರಿ ಇದು. ಹೆಣ್ಣಿನ ಬಟ್ಟೆಗಳು ಪುರುಷರ ಕಾಮವನ್ನು ಕೆರಳಿಸಿ ಆಕೆಯನ್ನು ಅತಿಕ್ರಮಿಸುವಂತೆ ಮಾಡುತ್ತದೆ ಎಂದಾದರೆ ಗಂಡಸರ ಮನೋನಿಗ್ರಹ ಅದೆಷ್ಟು ಸದೃಢವಾಗಿರಬಹುದು? ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕಚ್ಚೆ ಉಟ್ಟು ಊರೆಲ್ಲ ತಿರುಗುವ ಗಂಡಸರಿದ್ದಾರೆ, ಬರಿ ಒಳಚಡ್ಡಿಯೊಂದನ್ನೆ ಧರಿಸಿ ಅಂಗಡಿಗೆ ಹೋಗಿಬರುವ ಭೂಪರು ದೊಡ್ಡ ಶಹರಗಳಲ್ಲಿಯೂ ಇದ್ದಾರೆ ಹಾಗಾದರೆ ಅವರನ್ನು ಕಂಡು ಹೆಣ್ಣಿನ ಆಸೆ ಕೆರಳುವುದಿಲ್ಲ ಮತ್ತು ಅಂತಹ ಪುರುಷರನ್ನು ಮಹಿಳೆಯರು ಅತಿಕ್ರಮಿಸುವುದಿಲ್ಲ ಎಂದಾದಲ್ಲಿ ಪುರುಷರೂ ಆ ಸಂಯಮ ತೋರಿಸಲಿ ಎಂದು ನಿರೀಕ್ಷಿಸುವುದು ತಪ್ಪೇನೂ ಅಲ್ಲ.

ಮಹಿಳಾ ದಿನಾಚರಣೆಯ ದಿನ ಹರಿದಾಡಿದ ಮಹಿಳೆಯರ ಮೇಲಿನ ಕೆಟ್ಟ ಜೋಕ್ ಗಳು ಮತ್ತು ಸಭ್ಯ ನಾಗರಿಕರೆನ್ನಿಸಿಕೊಂಡವರು ಬಾಯಿ ಚಪ್ಪರಿಸುತ್ತ ಅದನ್ನು ಆಸ್ವಾದಿಸುವ ರೀತಿ ಖಂಡಿತವಾಗಿಯೂ ಬದಲಾಗಬೇಕಿದೆ. ಇಂತಹ ಹೇಳಿಕೆಗಳಿಗೆ ಮುಸಿನಗುವ ಹೆಣ್ಣಿನ ಮನೋಭಾವವೂ ಬದಲಾಗದಿದ್ದರೆ ಅದೆಷ್ಟು ನಾಳೆಗಳು ಬಂದರೂ ಲಿಂಗ ಸಮಾನತೆಯ ನಡುವೆ ಸುಸ್ಥಿರ ದಿನಗಳನ್ನು ನಮ್ಮ ಮುಂದಿನ ಸಮಾಜ ಕಾಣದೆ ಹೋಗಬಹುದು. ಎಚ್ಚರವಿರಲಿ

Share