Connect with us


      




ದೇಶ

10 ಪಿಡಿಪಿ ನಾಯಕರ ವಿರುದ್ಧ ಪ್ರಕರಣ: ಬಿಜೆಪಿಗೆ ಕೋವಿಡ್ ನಿಯಮ ಅನ್ವವಾಗುವುದಿಲ್ಲವೇ? ಮುಫ್ತಿ ಪ್ರಶ್ನೆ

Vanitha Jain

Published

on

ಶ್ರೀನಗರ: ಜನೆವರಿ 08 (ಯು.ಎನ್.ಐ.) ಮಾಜಿ ಸಚಿವ ಸೇರಿದಂತೆ 10 ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು , ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.

ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಆರನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಜಿ ಸಚಿವ ಸೇರಿದಂತೆ 10 ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಿಜ್‍ಬೆಹರಾ ಪೊಲೀಸರು ಪಿಡಿಪಿ ನಾಯಕರ ವಿರುದ್ಧ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅಸಹಕಾರ) ಮತ್ತು 269 (ಯಾವುದೇ ಕಾಯಿಲೆಯ ಸೋಂಕು ಹರಡಲು ಕಾರಣವಾಗುವ ಕಾನೂನುಬಾಹಿರ ಮತ್ತು ನಿರ್ಲಕ್ಷ್ಯ ಕ್ರಮ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಮ್ಮ ಪಕ್ಷದ ವಿರುದ್ಧ ಪಕ್ಷಪಾತ ನಡೆ ಅನುಸರಿಸುತ್ತಿದೆ. ಗುರುವಾರ ಶ್ರೀನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ವಿರೋಧಿಸಿ ಮೇಣದಬತ್ತಿ ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರತಿಭಟನೆಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು.

“ಕೋವಿಡ್ 19 ನಿರ್ಬಂಧಗಳು ಪಿಡಿಪಿ ಪಕ್ಷಕ್ಕೆ ಮಾತ್ರ ಅನ್ವಯಿಸುತ್ತವೆ. ಶುಕ್ರವಾರ ಕಾಶ್ಮೀರದಲ್ಲಿ ನಡೆದ ಬಿಜೆಪಿಯ ಪ್ರತಿಭಟನೆಗೆ ಅನ್ವಯಿಸುವುದಿಲ್ಲವೇ?, ಪಂಜಾಬ್‍ನಲ್ಲಿ ಪ್ರಧಾನಿ ರ್ಯಾಲಿ ಅಥವಾ ಅವರ ಸುರಕ್ಷತೆಗಾಗಿ ಪ್ರಾರ್ಥಿಸಲು ನೂರಾರು ಜನರು ಸೇರಿದ್ದ ಸಾಮೂಹಿಕ ಪೂಜಾ ಕಾರ್ಯಕ್ರಮಗಳಿಗೆ ಸಂಬಂಧಪಡುವುದಿಲ್ಲವೇ? ಎಂದು ಪ್ರಶ್ನಿಸಿ ಮುಫ್ತಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾ ಪಟ್ಟಣದ ತಹಶೀಲ್ದಾರ್ ಅವರ ನಿರ್ದೇಶನದ ಮೇರೆಗೆ ಪಿಡಿಪಿ ನಾಯಕರ ಮೇಲೆ ಆದೇಶ ನಿರಾಕರಣೆ ಮತ್ತು ಕಾನೂನುಬಾಹಿರ ಅಥವಾ ನಿರ್ಲಕ್ಷ್ಯತನದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ, ಮೆಹಬೂಬಾ ಮುಫ್ತಿ ತಮ್ಮ ತಂದೆ ಸಮಾಧಿ ಸ್ಥಳವಾದ ಬಿಜ್‍ಬೆಹರಾ ದಾರಾ ಶಿಕೋ ಉದ್ಯಾನದಲ್ಲಿ ಸಭೆಯ ನೇತೃತ್ವ ವಹಿಸಿದ್ದರು. ಆರಂಭದಲ್ಲಿ, ಮುಫ್ತಿ ಮತ್ತು ಅವರ ಬೆಂಬಲಿಗರನ್ನು ಸ್ಥಳಕ್ಕೆ ತಲುಪದಂತೆ ತಡೆಯಲಾಯಿತು, ಆದರೆ ಅವರು ಪೊಲೀಸರು ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಅನುಮತಿಸಲಾಯಿತು.

ಇದಾದ ಕೆಲವೇ ದಿನಗಳಲ್ಲಿ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕಾಗಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿರುವ ತಹಸೀಲ್ದಾರ್, ಮಾಜಿ ಗೃಹ ಸಚಿವ ಅಬ್ದುಲ್ ರೆಹಮಾನ್ ಭಟ್ (ವೀರಿ), ಮುಫ್ತಿ ಚಿಕ್ಕಪ್ಪ ಸರ್ತಾಜ್ ಮದನಿ ಮತ್ತು ಯುವ ನಾಯಕ ನಜ್ಮ್-ಉಸ್ ಸೇರಿದಂತೆ 10 ಪಿಡಿಪಿ ನಾಯಕರನ್ನು ಬಂಧಿಸುವಂತೆ ಪೊಲೀಸರಿಗೆ ಪತ್ರ ಬರೆದರು.

“ಪಿಡಿಪಿ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿ ಬಳಿ ದೊಡ್ಡ ಸಭೆಯನ್ನು ಆಯೋಜಿಸಿದ್ದಾರೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಇದು ಕೋವಿಡ್-19 ಮತ್ತು ಇತರ ಸಂಬಂಧಿತ ಸಾಂಕ್ರಾಮಿಕ ರೋಗಗಳನ್ನು ಹರಡಲು ಕಾರಣವಾಗಬಹುದು ಎಂದು ತಹಸೀಲ್ದಾರ್ ಸ್ಟೇಷನ್ ಹೌಸ್ ಆಫೀಸರ್ ಬಿಜ್ಬೆಹರಾ ಅವರಿಗೆ ಬರೆದ ಪತ್ರ ಬರೆದಿದ್ದರು.

Share