Published
6 months agoon
By
UNI Kannadaನವದೆಹಲಿ, ಜ ೧(ಯು ಎನ್ ಐ) ದೇಶದಲ್ಲಿನ ೧೫ರಿಂದ ೧೮ರ ವಯೋಮಾನದವರು ಕೋವಿಡ್ ಲಸಿಕೆಯನ್ನು ಪಡೆಯಲು ಇಂದಿನಿಂದ ಕೋವಿನ್ ಪೋರ್ಟಲ್ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕೋವಿಡ್ ಲಸಿಕೆ ಪಡೆಯಲು ಅರ್ಹ ಫಲಾನುಭವಿಗಳು ನೇರವಾಗಿ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ತಿಂಗಳ ೨೫ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ, ೧೫ರಿಂದ ೧೮ರ ವಯೋಮಾನದವರಿಗೆ ಜನವರಿ ೩ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದ್ದರು.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ೬೦ ವರ್ಷ ಮೇಲ್ಪಟ್ಟವರಿಗೆ ಬರುವ ಜನವರಿ ೧೦ರಿಂದ ಮುಂಜಾಗ್ರತಾ ೩ನೇ ಡೋಸ್ ಲಸಿಕೆ ನೀಡಲಾಗುವುದು. ಅರ್ಹ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಯಶಸ್ವಿಗೊಳಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯೋನ್ಮುಖವಾಗಿದೆ. ಇದುವರೆಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ೧೫೦ ಕೋಟಿ ೬೬ ಲಕ್ಷಕ್ಕೂ ಹೆಚ್ಚಿನ ಕೋವಿಡ್ ಲಸಿಕೆ ಡೋಸ್ಗಳನ್ನು ಕೇಂದ್ರ ಸರ್ಕಾರ ಪೂರೈಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಸುಮಾರು ೧೬ ಕೋಟಿ ೯೬ ಲಕ್ಷ ಲಸಿಕಾ ಡೋಸ್ಗಳು ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ.
೬೦ ವರ್ಷ ಮೇಲ್ಪಟ್ಟವರು ಈಗಾಗಲೇ ೨ನೇ ಡೋಸ್ ಲಸಿಕೆ ಪಡೆದು ಒಂಭತ್ತು ತಿಂಗಳು ಪೂರೈಸಿದ್ದರೆ ಮಾತ್ರವೇ ಮೊದಲ ಮುಂಜಾಗ್ರತಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆಂದು ಕೋವಿನ್ ಪ್ಲಾಟ್ಫಾರಂ ಮುಖ್ಯಸ್ಥ ಡಾ. ಆರ್.ಎಸ್.ಶರ್ಮ ಹೇಳಿದ್ದಾರೆ. ಈ ನಡುವೆ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ರಾಜ್ಯದಲ್ಲಿ ಇಂದು ಹೊಸದಾಗಿ ೨೩ ಒಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ೨೩ ಸೋಂಕಿತರ ಪೈಕಿ ೧೯ ಮಂದಿ ವಿದೇಶಗಳಿಂದ ಆಗಮಿಸಿದವರಾಗಿದ್ದಾರೆ. ಅಮೆರಿಕಾ, ಯುರೋಪ್, ಆಫ್ರಿಕಾ ಹಾಗೂ ಇತರ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.