Connect with us


      




ದೇಶ

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ; ಕಟ್ಟಡಕ್ಕೆ ಹೊತ್ತಿದ ಬೆಂಕಿಗೆ ಪ್ರಾಣಬಿಟ್ಟ 26 ಮಂದಿ, 30 ಮಂದಿಗೆ ಗಾಯ

Lakshmi Vijaya

Published

on

ನವದೆಹಲಿ: ಮೇ 13 (ಯು.ಎನ್.ಐ.) ಪಶ್ಚಿಮ ದೆಹಲಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ 26 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿವೆ. ದುರಂತ ಕಟ್ಟಡದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಸತ್ತವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಇರುವ ವಾಣಿಜ್ಯ ಕಟ್ಟಡದಲ್ಲಿ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದಿಂದ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 4.40ಕ್ಕೆ ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ  20 ಅಗ್ನಿಶಾಮಕ ವಾಹನಗಳು ಧಾವಿಸಿ, ರಕ್ಷಣಾ ಕಾರ್ಯಾಚರಣೆಗಿಳಿದವು. ರಾತ್ರಿಯಾದ್ರೂ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲು ಆಗಿಲ್ಲ.  ಅಗ್ನಿ ಇಡೀ ಕಟ್ಟಡವನ್ನ ಆವರಿಸಿದೆ.

ಕಟ್ಟಡವನ್ನು ಸಾಮಾನ್ಯವಾಗಿ ಕಂಪನಿಗಳಿಗೆ ಕಚೇರಿ ಸ್ಥಳಾವಕಾಶಕ್ಕಾಗಿ ಬಳಸಲಾಗುತ್ತಿತ್ತು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಹೊರ) ಸಮೀರ್ ಶರ್ಮಾ ಹೇಳಿದ್ದಾರೆ.

ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಷಾದ ವ್ಯಕ್ತಪಡಿಸಿ, “ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ದುಃಖಿತವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

Share