Connect with us


      
ಕರ್ನಾಟಕ

ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್: ಸಿಎಂ ಬೊಮ್ಮಾಯಿ

Lakshmi Vijaya

Published

on

ಬೆಂಗಳೂರು: ಏಪ್ರಿಲ್ 24 (ಯು.ಎನ್.ಐ.) ಇಂದು ವರನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟರ್ ನಲ್ಲಿ ಡಾ. ರಾಜ್ ಜನ್ಮದಿನದ ಶುಭಕೋರಿ ಸ್ಮರಿಸಿದ್ದಾರೆ.

ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು.

ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಎಂದು ಟ್ವೀಟ್ ಮಾಡಿದ್ದಾರೆ.

ನಾಡಿನಾದ್ಯಂತ ಅಣ್ಣಾವ್ರ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸ್ತಿದ್ದು ಇದರಲ್ಲಿ ರಾಜಕಾರಣಿಗಳೂ ಹೊರತಾಗಿಲ್ಲ.

ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್‍ಕುಮಾರ್ ಅವರ ಸ್ಮಾರಕಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಭೇಟಿ ನೀಡಿ  ಗೌರವ ಸಮರ್ಪಿಸಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕದ ಕೀರ್ತಿಯನ್ನು ಒಬ್ಬ ನಟನಾಗಿ ಅವರು ಇನ್ನಷ್ಟು ವಿಸ್ತರಿಸಿದ್ದಾರೆ. ಅವರು ಪ್ರಾತಃಸ್ಮರಣೀಯರು. ರಂಗಭೂಮಿಯಿಂದ ಬಂದು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು ಸಾವಿರಾರು ಜನರ ಆರಾಧ್ಯ ದೇವತೆಯಾಗಿದ್ದಾರೆ ಎಂದು ನುಡಿದರು.

ಡಾ.ರಾಜ್ ಕುಮಾರ್ ಅವರ ಸ್ಮಾರಕಕ್ಕೆ ಸಚಿವರಾದ ಮುನಿರತ್ನ, ಗೋಪಾಲಯ್ಯ, ಸಂಸದರಾದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧರಾಜು, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷರಾದ ನೆ.ಲ.ನರೇಂದ್ರಬಾಬು ಅವರು ಗೌರವ ಸಮರ್ಪಿಸಿದರು.

ಕನ್ನಡದ ವರನಟ ದಿ. ರಾಜಕುಮಾರ್  ಅವರ 94ನೇ ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೋಕಾಕ್ ಚಳವಳಿ ವೃತ್ತ (18ನೇ ಕ್ರಾಸ್) ಮತ್ತು ಸುಬ್ರಹ್ಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಶಾಸಕರಾಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು.

ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿದ ಸಚಿವರು, ನೆರೆದಿದ್ದ ಅಭಿಮಾನಿಗಳಿಗೆ ಸಿಹಿ ಮತ್ತು ಉಪಾಹಾರ ವಿತರಿಸಿದರು.

Share