Connect with us


      




ವಿದೇಶ

ಕಝಾಕಿಸ್ತಾನ ಪ್ರತಿಭಟನೆ: 24ಕ್ಕೂ ಹೆಚ್ಚು ಮಂದಿಯ ಸಾವು

Vanitha Jain

Published

on

ಅಲ್ಮಾಟಿ: ಜನೆವರಿ 06 (ಯು.ಎನ್.ಐ.) ಕಝಾಕಿಸ್ತಾನದಲ್ಲಿ ದಿನೇ ದಿನೇ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸರ್ಕಾರಿ ಕಟ್ಟಡಗಳ ಮೇಲಿನ ದಾಳಿಯಲ್ಲಿ 12ಕ್ಕೂ ಹೆಚ್ಚು ಪ್ರತಿಭಟನಾಕಾರರು ಮತ್ತು ಕನಿಷ್ಠ 12ಕ್ಕಿಂತಲೂ ಹೆಚ್ಚು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬರ ಶಿರಚ್ಛೇದನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಮಾಟಿಯಲ್ಲಿ ರಾತ್ರಿಯಿಡೀ ಕಟ್ಟಡಗಳ ಮೇಲೆ ದಾಳಿ ಮಾಡುವ ಪ್ರಯತ್ನಗಳು ನಡೆದಿವೆ ಮತ್ತು 12ಕ್ಕಿಂತಲೂ ಹೆಚ್ಚು ದಾಳಿಕೋರರ ಹತ್ಯೆಯಾಗಿದೆ ಎಂದು ಪೊಲೀಸ್ ವಕ್ತಾರ ಸಲ್ತಾನಾತ್ ಅಜಿರ್ಬೆಕ್ ಹೇಳಿದ್ದಾರೆ.

ಬುಧವಾರ ಪ್ರತಿಭಟನಾಕಾರರು, ಮೇಯರ್ ಕಟ್ಟಡವನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕಟ್ಟಡಗಳಿಗೆ ದಾಳಿ ಮಾಡುವ ಪ್ರಯತ್ನದಿಂದಾಗಿ ನಗರದಲ್ಲಿ ವ್ಯಾಪಕ ಅಶಾಂತಿ ಉಂಟಾಯಿತು. ಗುರುವಾರ 12 ಮಂದಿಯನ್ನು ಹೊರತುಪಡಿಸಿ 353 ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಹೇಳಿದರು.

ಮೂರು ದಶಕಗಳ ಹಿಂದೆ ಸ್ವಾತಂತ್ರ್ಯ ಪಡೆದಿದ್ದ ಕಝಾಕಿಸ್ತಾನ್ ದೇಶವು ಕಂಡ ಅತ್ಯಂತ ಘೋರ ಪ್ರತಿಭಟನೆ ಇದಾಗಿದೆ. ಪ್ರತಿಭಟನೆ ವೇಳೆ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ.

ರಷ್ಯಾ ನೇತೃತ್ವದ ಮಿಲಿಟರಿ ಮೈತ್ರಿಕೂಟ, ಕಲೆಕ್ಟಿವ್ ಸೆಕ್ಯುರಿಟಿ ಟ್ರೀಟಿ ಆರ್ಗನೈಸೇಶನ್, ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಅವರ ಕೋರಿಕೆಯ ಮೇರೆಗೆ ಶಾಂತಿಪಾಲನಾ ಪಡೆಗಳನ್ನು ಕಝಾಕಿಸ್ತಾನ್‍ಗೆ ಕಳುಹಿಸುವುದಾಗಿ ಗುರುವಾರ ಮುಂಜಾನೆ ಹೇಳಿದೆ.

ಪೆಟ್ರೋಲಿಯಂ ಅನಿಲ ಇಂಧನದ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಕಝಾಕಿಸ್ತಾನದ ಪಶ್ಚಿಮದಲ್ಲಿ ಭಾನುವಾರ ಪ್ರಾರಂಭವಾದ ಪ್ರತಿಭಟನೆಗಳು ತೀವ್ರಗೊಂಡಿವೆ. ಪ್ರತಿಭಟನೆಗಳು ಅಲ್ಮಾಟಿ ಮತ್ತು ರಾಜಧಾನಿ ನೂರ್-ಸುಲ್ತಾನ್ ವರೆಗೂ ಹರಡಿದ್ದು, ವ್ಯಾಪಕವಗುತ್ತಲೇ ಇದೆ.

Share