Connect with us


      
ಕರ್ನಾಟಕ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಕ್ರಿಯಾ ಯೋಜನೆ – ಸಿಎಂ

UNI Kannada

Published

on

ಕಲಬುರಗಿ : ಜನವರಿ 04 (ಯು.ಎನ್.ಐ.) ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಕ್ರಿಯಾ ಯೋಜನೆ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ  ಉದ್ಘಾಟಿಸಿ ಮಾತನಾಡಿ, ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ, ಲೇಖನ, ಅಂಕಣಗಳ ಮೌಲ್ಯ ದೊಡ್ಡದು. ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಬರುವ ಬಜೆಟ್‌‌ನಲ್ಲಿ ಆದ್ಯತೆ ನೀಡಲಾಗುವುದು. ಪತ್ರಿಕಾ ರಂಗ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಮಾರುಕಟ್ಟೆ ಆಧಾರಿತ ವ್ಯವಹಾರದ ನಡುವೆ ಜನಪರ ಆದ್ಯತೆಗಳನ್ನು, ಅಂತಃಕರಣವನ್ನು ಪತ್ರಿಕೆಗಳು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಸಾಧ್ಯ ಎಂದರು.

ಪತ್ರಿಕಾರಂಗ ಸದಾ ಜಾಗೃತವಾಗಿದ್ದರೆ, ಸಮಾಜ, ಸರ್ಕಾರಗಳೂ ಜಾಗೃತವಾಗಿರುತ್ತವೆ.  ಪತ್ರಿಕೆಗಳಿಗೆ ಅಗತ್ಯವಿರುವ ಜಾಹೀರಾತು, ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೌಕರ್ಯಗಳನ್ನು ನೀಡಲು ಬರುವ ಬಜೆಟ್‌ನಲ್ಲಿ ಕ್ರಮವಹಿಸಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಿಂಗಳಾಂತ್ಯದೊಳಗೆ ಈ ಭಾಗದ ಶಾಸಕರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು. ಅನುದಾನ ಒದಗಿಸಿ ಒಂದೇ ವರ್ಷದಲ್ಲಿ ಯೋಜನೆಗಳ ಅನುಷ್ಠಾನ ಮಾಡಲಾಗುವುದು‌ ಎಂದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ, ಪೊಲೀಸ್, ಪೌರಕಾರ್ಮಿಕರೊಂದಿಗೆ ಪತ್ರಕರ್ತರು ಕೂಡ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಬಹುತೇಕ ಕುಟುಂಬದವರಿಗೆ ಈಗಾಗಲೇ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗಿದೆ. ಇನ್ನೂ ಬಾಕಿ ಇರುವ ವ್ಯಕ್ತಿಗಳ ಕುಟುಂಬಕ್ಕೂ ಒದಗಿಸಲಾಗುವುದು  ಎಂದು ಮುಖ್ಯಮಂತ್ರಿಯವರು ಹೇಳಿದರು.

Share