Connect with us


      
ದೇಶ

ಬಿಹಾರದಲ್ಲಿ ನಿಲ್ಲದ ನಕಲಿ ಮದ್ಯ ಸಾವುಗಳು; ಐದು ಮಂದಿ ಸಾವು, ನಾಲ್ವರಿಗೆ ಗಾಯ

Vanitha Jain

Published

on

ಬಿಹಾರದಲ್ಲಿ ನಿಲ್ಲದ ನಕಲಿ ಮದ್ಯ ಸಾವುಗಳು; ಪುನಃ ಐದು ಮಂದಿ ಸಾವು

ಪಾಟ್ನಾ: ಜನೆವರಿ 27 (ಯು.ಎನ್.ಐ.) ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದರು. ಇದೀಗ ಆ ದುರಂತ ಸಂಭವಿಸಿ ಒಂದು ವಾರದೊಳಗೆ ಅಂತಹದ್ದೇ ಘಟನೆ ಮರುಕಳಿಸಿದೆ. ಅದಕ್ಕೂ ಒಂದು ವಾರದ ಮೊದಲು, ನಳಂದಾ ಜಿಲ್ಲೆಯ ಅಧಿಕಾರಿಗಳು ನಕಲಿ ಮದ್ಯ ಸೇವನೆಯಿಂದ 11 ಜನ ಸಾವನ್ನಪ್ಪಿದ್ದರು.

ಬಿಹಾರದ ಬಕ್ಸರ್ ಜಿಲ್ಲೆಯ ದುಮ್ರಾವ್ ನ ಮುರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ಸಾರಿ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರ ಸಾವಿನ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಬಕ್ಸರ್ ಎಸ್ಪಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್, 2021ರಲ್ಲಿ, ಬಿಹಾರದ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರು ನಕಲಿ ಮದ್ಯ ಅಥವಾ ಹೂಚ್ ಸೇವಿಸಿ ಸಾವನ್ನಪ್ಪಿದ್ದಾರೆ. ದುರಂತದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಆದಾಗ್ಯೂ, ಸಾವುಗಳನ್ನು ತಡೆಯಲು ಸರ್ಕಾರದ ಪ್ರಯತ್ನಗಳು ವಿಫಲವಾದ ಕಾರಣ, ಪ್ರತಿಪಕ್ಷಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ರಾಜೀನಾಮೆಗೆ ಒತ್ತಾಯಿಸಿವೆ. ಅವರ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷವೂ ಸಹ ಸಿಎಂ ಅವರನ್ನು ಬಿಟ್ಟಿಲ್ಲ.

ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಯುವ ಮೋರ್ಚಾ ನಿಷೇಧ ಕಾನೂನು ಸಂಪೂರ್ಣವಾಗಿ ವಿಫಲವಾಗಿದೆ ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.

Share