Published
6 months agoon
ಇಂಫಾಲ್, ನ 13 (ಯುಎನ್ಐ) ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ ಅಸ್ಸಾಮ್ ರೈಫಲ್ ನ ಕಮಾಂಡಿಂಗ್ ಆಫೀಸರ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ, ಯೋಧರ ಕುಟುಂಬದ ಸದಸ್ಯರಿಬ್ಬರು ಸಾವಿಗೀಡಾಗಿದ್ದಾರೆ.
ಮಣಿಪುರದ ಚೂರಾಚಂದ್ಪಾರು ಜಿಲ್ಲೆಯ ಸಿಂಘಾಟ್ ಎಂಬಲ್ಲಿ ಈ ಘಟನೆ ನಡೆದಿದ್ದು, ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ನ ಬೆಂಗಾವಲು ಪಡೆಯ ಮೇಲೆ ಉಗ್ರರು ಹೊಂಚು ಹಾಕಿ ಐಇಡಿ (IED) ದಾಳಿ ನಡೆಸಿದ್ದಾರೆ. ಈ ವೇಳೆ, ಕಮಾಂಡಿಂಗ್ ಆಫೀಸರ್ ವಿಪ್ಲವ್ ತ್ರಿಪಾಠಿ ಅವರ ಪತ್ನಿ ಹಾಗೂ ಪುತ್ರ ಸಹ ಸಾವಿಗೀಡಾಗಿದ್ದಾರೆ. ಉಗ್ರರ ವಿರುದ್ಧದ ಸೇನೆ ಕಾರ್ಯಾಚರಣೆ ಮುಂದುವರಿದಿದ್ದು, ದಾಳಿ ಹಿಂದೆ ಮಣಿಪುರದ ಪೀಪಲ್ಸ್ ಲಿಬರೇಷನ್ ಆರ್ಮಿ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
“ವೀರ ಯೋಧರ ಮೇಲೆ ರಣಹೇಡಿಗಳು ದಾಳಿ ಮಾಡಿವೆ. ಘಟನೆಯಿಂದ ತುಂಬಾ ದುಃಖವಾಗಿದೆ. ಐವರು ವೀರ ಯೋಧರು ಸೇರಿದಂತೆ ಅವರ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದೇವೆ. ದಾಳಿ ನಡೆಸಿದ ದುಷ್ಕರ್ಮಿಗಳನ್ನು ಸುಮ್ಮನೆ ಬಿಡಲ್ಲ” ಅಂತಾ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
1978ರಲ್ಲಿ ಹುಟ್ಟಿಕೊಂಡಿರುವ ಮಣಿಪುರದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಭಾರತ ಸರ್ಕಾರ, ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿದೆ. ಸ್ವತಂತ್ರ ಮಣಿಪುರಕ್ಕೆ ಆಗ್ರಹಿಸುತ್ತಿರುವ ಈ ಭಯೋತ್ಪಾದನಾ ಸಂಘಟನೆ ಆಗ್ರಹಿಸುತ್ತಿದೆ.