Connect with us


      
ದೇಶ

65+15+37 ಬಿಜೆಪಿಯ ಪಂಜಾಬ್ ಸೂತ್ರ ರೆಡಿ!

Iranna Anchatageri

Published

on

ಹೊಸದಿಲ್ಲಿ: ಜನೆವರಿ 24 (ಯು.ಎನ್.ಐ.) ಪಂಜಾಬ್ ನಲ್ಲಿ ಮತ್ತೆ ಬಿಜೆಪಿ ಮೈತ್ರಿ ಸರ್ಕಾರವನ್ನು ಆಡಳಿತಕ್ಕೆ ತರುವ ಸಂಬಂಧ ಕಮಲ ಪಕ್ಷ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ಗಳ ದರ್ಬಾರ್ ನಲ್ಲಿ ಬಿಜೆಪಿ, ಕ್ಯಾಪ್ಟನ್ ಮತ್ತು ದಿಂಡಾ ಪಕ್ಷದ ನಡುವೆ ಸೀಟು ಹಂಚಿಕೆಯ ಸೂತ್ರ ಇತ್ಯರ್ಥವಾಗಿದೆ.

ಪಂಜಾಬ್‌ನಲ್ಲಿ ಬಿಜೆಪಿ 65 ಸ್ಥಾನ, ಪಂಜಾಬ್ ಲೋಕ ಕಾಂಗ್ರೆಸ್ 37 ಕ್ಷೇತ್ರ ಮತ್ತು ಸುಖದೇವ್ ದಿಂಡ್ಸಾ ಅವರ ಪಕ್ಷ 15 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಸೂತ್ರಕ್ಕೆ ಮೈತ್ರಿ ಸದಸ್ಯರು ಓಕೆ ಎಂಬ ಮುದ್ರೆ ಒತ್ತಿದ ಮೇಲೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸುಖದೇವ್ ದಿಂಡ್ಸಾ ಕೂಡ ಉಪಸ್ಥಿತರಿದ್ದರು.

ಈ ಮೈತ್ರಿಕೂಟವು 117 ಸ್ಥಾನಗಳ ಪೈಕಿ 71 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಳೆಯಿಂದ ಪಂಜಾಬ್‌ನಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದು, ಮೈತ್ರಿಕೂಟವು ಚುನಾವಣಾ ಕಾರ್ಯತಂತ್ರವನ್ನು ಶರವೇಗದಲ್ಲಿ ಅಂತಿಮಗೊಳಿಸುವುದರಲ್ಲಿ ನಿರತವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಪಂಜಾಬ್ ಗಡಿ ರಾಜ್ಯವಾದ್ದರಿಂದ ದೇಶದ ಭದ್ರತೆಗೆ ಸಂಬಂಧಿಸಿದೆ. ಇದರ 600 ಕಿಮೀ ಗಡಿ ಪಾಕಿಸ್ತಾನದ ಪಕ್ಕದಲ್ಲಿದೆ. ಪಾಕಿಸ್ತಾನದಿಂದ ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಪಂಜಾಬ್ 3 ಲಕ್ಷ ಕೋಟಿ ಸಾಲದ ಹೊರೆ ಹೊತ್ತಿದೆ ಎಂದು ಹೇಳಿದರು.

ಪಂಜಾಬ್‌ನ ಭದ್ರತೆ ಮತ್ತು ಸ್ಥಿರತೆಗಾಗಿ ಕೇಂದ್ರ ಮತ್ತು ರಾಜ್ಯದ ನಡುವೆ ಉತ್ತಮ ಬಾಂಧವ್ಯ ಅಗತ್ಯ ಇದೆ ಎಂದ ಅವರು, ಪ್ರಧಾನಿಗೆ ಪಂಜಾಬ್ ಮೇಲೆ ಅಪಾರ ಪ್ರೀತಿ ಇದೆ ಎಂದರು. ಪಂಜಾಬ್‌ನಲ್ಲಿ ಡ್ರಗ್ಸ್, ಮರಳು ಮಾಫಿಯಾ ಮತ್ತು ಭೂಮಾಫಿಯಾವನ್ನು ಕೊನೆಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

Share