Published
5 months agoon
ಅಮರಾವತಿ: ಡಿ. 15 (ಯು.ಎನ್.ಐ) ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಬಳಿ ಬುಧವಾರ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಎಂಟು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜಂಗಾರೆಡ್ಡಿಗುಡೆಂ ವಲಯದ ಜಲ್ಲೇರು ಎಂಬಲ್ಲಿ ಈ ಬಸ್ ನದಿಗೆ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ. ಬಸ್ ವೇಲೇರುಪಾಡು ಕಡೆಯಿಂದ ಜಂಗಾರೆಡ್ಡಿಗುಡೆಂಗೆ ತೆರಳುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಬಸ್ನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು ಎಂದು ಪಶ್ಚಿಮ ಗೋದಾವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
APSRTC ಬಸ್ ಚಾಲಕ ಜಲ್ಲೇರು ನದಿಗೆ ಅಡ್ಡಲಾಗಿರುವ ಸೇತುವೆಯ ಮೇಲೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ರೀತಿ ಆಗಿದೆ ಎನ್ನಲಾಗ್ತಿದೆ.
ಬಸ್ ಸೇತುವೆಯ ರೇಲಿಂಗ್ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ. ಇದುವರೆಗೆ ಐದು ಮಹಿಳಾ ಪ್ರಯಾಣಿಕರು ಸೇರಿದಂತೆ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯ ಜನರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.