Connect with us


      
ವಿದೇಶ

ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಬಳಿ ಬ್ಲಾಸ್ಟ್ – 9 ಮಕ್ಕಳ ಸಾವು

Iranna Anchatageri

Published

on

ಕಾಬೂಲ್ : ಜನೆವರಿ 10 (ಯು.ಎನ್.ಐ.) ಅಫ್ಘಾನಿಸ್ತಾನದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಒಂಭತ್ತು ಮಕ್ಕಳು ಸಾವಿಗೀಡಾಗಿ ನಾಲ್ವರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ನಾಗರಹಾರ್ ಪ್ರಾಂತ್ಯದಲ್ಲಿ ಅಂದರೆ ಪಾಕಿಸ್ತಾನದ ಗಡಿ ಸಮೀಪ ಈ ಬ್ಲಾಸ್ಟ್ ಆಗಿದೆ ಎಂದು ತಾಲಿಬಾನ್ ನೇಮಿಸಿದ ರಾಜ್ಯಪಾಲರ ಕಚೇರಿ ಮಾಹಿತಿ ನೀಡಿದೆ.

ಆಹಾರ ಮಾರಾಟ ಮಾಡುತ್ತಿದ್ದ ವಾಹನವೊಂದು ಹಳೆಯ ಸ್ಫೋಟಗೊಳ್ಳದ ಮೋರ್ಟರ್ ಶೆಲ್‌ಗೆ ತಗುಲಿ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ಈ ಪ್ರಾಂತ್ಯವು ತಾಲಿಬಾನ್‌ನ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್ ಪ್ರಧಾನ ಕಚೇರಿಯಾಗಿದೆ. ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ದೇಶವನ್ನು ವಶಪಡಿಸಿಕೊಂಡ ನಂತರ ಇಸ್ಲಾಮಿಕ್ ಸ್ಟೇಟ್ ಅಫ್ಘಾನಿಸ್ತಾನದಲ್ಲಿ ಹಲವಾರು ದಾಳಿಗಳನ್ನು ನಡೆಸಿದೆ. ಆಗಾಗ್ಗೆ ದೇಶದ ಅಲ್ಪಸಂಖ್ಯಾತ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಭಯಾನಕ ದಾಳಿಗಳನ್ನು ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಹಲವಾರು ದಶಕಗಳ ಕಾಲ ನಡೆದ ಯುದ್ಧದ ಕಾರಣ, ಇಲ್ಲಿ ನೆಲ ಬಾಂಬ್ ಗಳನ್ನು ಹಾಕಲಾಗಿರುತ್ತದೆ. ಇದರಿಂದಾಗಿ ನೆಲಬಾಂಬ್‌ಗಳು ಸ್ಫೋಟಗೊಂಡು ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಾರೆ.

ಅಫ್ಘಾನಿಸ್ತಾನದಲ್ಲಿ ಬಲಗೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ 

ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಈ ಕಾರಣದಿಂದಾಗಿ ಎಲ್ಲೆಲ್ಲಿ ಸ್ಫೋಟ ಸಂಭವಿಸುತ್ತದೆಯೋ ಅದನ್ನು ಇಸ್ಲಾಮಿಕ್ ಸ್ಟೇಟ್ ನತ್ತ ಬೊಟ್ಟು ಮಾಡಲಾಗುತ್ತದೆ. ಯುದ್ಧ ಪೀಡಿತ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ತನ್ನ ನೆಲೆಯನ್ನು ಬಲಪಡಿಸಿಕೊಳ್ಳುತ್ತಿದೆ. ಶಿಯಾ ಮುಸ್ಲಿಮರು, ತಾಲಿಬಾನ್ ಯೋಧರನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸುತ್ತಿದೆ.

Share