Connect with us


      
ಅಪರಾಧ

ನಿವೃತ್ತ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ!

Vanitha Jain

Published

on

ಬೆಂಗಳೂರು: ಜೂನ್ 17 (ಯು.ಎನ್.ಐ.) ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿಯನ್ನು ಹೆದರಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುವುದು ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿವರ್ವಹಿಸುತ್ತಿದ್ದ ನಿವೃತ್ತ ಸೂಪರಿಡೆಂಟೆಂಟ್ ಇಂಜಿನಿಯರ್ ಮಂಜುನಾಥ್ ಮನೆಗೆ ಲಗ್ಗೆ ಇಟ್ಟ ಎಸಿಬಿ ಅಧಿಕಾರಿಗಳು ಮಂಜುನಾಥನ ಮಹಿಮೆ ಕಂಡು ಬೆರಗಾಗಿದ್ದಾರೆ.

ನಿವೃತ್ತಿಯಾದ ಬಳಿಕ ಮಂಜುನಾಥ್ ಕೋಟಿ ಕೋಟಿ ಆಸ್ತಿಗಳನ್ನ ಮಾಡಿದ್ದಾರೆ. ಎಸಿಬಿ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು ವಶಪಡಿಸಿಕೊಂಡಿದ್ದಾರೆ. ಸುಮಾರು 21 ಅಧಿಕಾರಿ, ಸಿಬ್ಬಂದಿ ಮೇಲೆ ಎಸಿಬಿ ದಾಳಿಯಾಗಿದ್ದು, ಮಂಜುನಾಥ್ ಮನೆಯಲ್ಲಿ ಮಾತ್ರ ಅಪಾರ ಪ್ರಮಾಣದ ಆಸ್ತಿಗಳನ್ನು ಕಂಡು ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆ.

ಮಂಜುನಾಥ್ ಅವರಿಗೆ ಸೇರಿದ ಜಯನಗರದ 9 ನೇ ಬ್ಲಾಕ್ ಒಂದರಲ್ಲೇ ಅಂದಾಜು 20 ಕೋಟಿ ಮೌಲ್ಯದ ಚೈತನ್ಯ ಗೋಲ್ಡ್ ಹೆಸರಿನಲ್ಲಿರುವ ವಾಣಿಜ್ಯ ಕಟ್ಟಡ ಅವರ ಹೆಸರಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದಲ್ಲದೆ, ಬಸವರೇಶ್ವರನಗರದ ಶಾರದ ಕಾಲೋನಿಯ ನಿವಾಸ, ಕೆ.ಆರ್. ಪುರಂ ನಲ್ಲಿ ಮಗಳ ಹೆಸರಿನಲ್ಲಿ ಆಪಾರ್ಟ್‌ಮೆಂಟ್ ಹಾಗೂ ತಾಯಿ ಹೆಸರಿನಲ್ಲಿ ನಾಲ್ಕು ಎಕರೆ ಜಮೀನು ಇರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ನಿವೃತ್ತ ಸೂಪರಿಡೆಂಟೆಂಟ್ ಇಂಜಿನಿಯರ್ ಮಂಜುನಾಥ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿಯನ್ನು ಹೆದರಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಹಾಗೂ ಮಂಜುನಾಥ್ ಕರ್ತವ್ಯದಲ್ಲಿದ್ದಾಗ (ಪಿಂಚಣಿ ಪಡೆಯುತ್ತಿದ್ದಾರೆ) ಎಸಗಿರುವ ಅಕ್ರಮದಿಂದ 20 ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕ್ರಮ ಜರುಗಿಸಲು ಕೋರಿ ಈ ಹಿಂದೆಯೇ ಎಸಿಬಿಗೆ ದೂರು ದಾಖಲಾಗಿತ್ತು.

ತಮ್ಮ ನಿವೃತ್ತಿ ಬಳಿಕ ಪತ್ನಿ ಉಮಾದೇವಿ ಅವರ ಹೆಸರಿನಲ್ಲಿ ಮಂಜುನಾಥ್ ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿವೃತ್ತಿಯಾದ ಬಳಿಕವೂ ಸಹ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಹಣ ಮಾಡುತ್ತಿದ್ದರು. ವಿವಿಧ ಇಲಾಖೆಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಎಸಿಬಿ ದಾಳಿ ಸಂದರ್ಭದಲ್ಲಿ ಕಂದಾಯ ಇಲಾಕೆಯ ಉಪನೋಂದಣಾಧಿಕಾರಿಗಳಿಗೆ ಸಂಬಂಧಿಸಿದ ಕಡತಗಳು ಮಂಜುನಾಥ್ ಮನೆಯಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ಮಂಜುನಾಥ್ ತಮ್ಮ ಪತ್ನಿ, ತಾಯಿ ಹಾಗೂ ಮಗಳ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಮಗಳ ಹೆಸರಿನಲ್ಲಿ ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಕೋವಿಡ್ ತೀವ್ರವಾಗಿರುವ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಿ ಅಕ್ರಮ ಮಾರ್ಗದ ಮೂಲಕ ಹಣ ಗಳಿಸಿದ್ದಾರೆ ಎಂಬ ಆರೋಪವನ್ನು ಮಂಜುನಾಥ್ ಮೇಲೆ ಹೊರಿಸಲಾಗಿತ್ತು.

ಮಂಜುನಾಥ್ ಮೆಲೆ ಇದ್ದ ದೂರಿನ ವಿವರ:
ಮಂಜುನಾಥ್ ಜಿ. ಇವರು ದಿನಾಂಕ 13-1-1983 ರಂದು ಅಸಿಸ್ಟೆಂಟ್ ಇಂಜಿನಿಯರ್ ಆಗಿ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಿಭಾಗಕ್ಕೆ ಸರ್ಕಾರಿ ನೌಕರನಾಗಿ ನೇಮಕಗೊಂಡು 1989 ರ ವರೆಗೆ ಸೇವೆ ಸಲ್ಲಿಸಿರುತ್ತಾರೆ. ಆ ಬಳಿಕ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ 1989 ರಿಂದ 1992 ರ ವರೆಗೂ ಕಾರ್ಯ ನಿರ್ವಹಿಸಿರುತ್ತಾರೆ. 1992 ರಿಂದ 1994 ರ ವರೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗ- ಮಂಗಳೂರು ಘಟಕದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅನಾರೋಗ್ಯ ಕಾರಣದಿಂದ ನಾಲ್ಕು ವರ್ಷ ಸುದೀರ್ಘ ರಜೆ ಪಡೆದಿದ್ದ ಮಂಜುನಾಥ್, 1998 ರಿಂದ 2005 ರ ವರೆಗೆ ಸಹಾಯಕ ಇಂಜಿನಿಯರ್ ಆಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ರಿಜಿಸ್ಟ್ರಾರ್ ಬೆಂಗಳೂರು ಇಲ್ಲಿ ಕೆಲಸ ನಿರ್ವಹಿಸಿರುತ್ತಾರೆ. 2005 ರಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಹುದ್ದೆಗೆ ಬಡ್ತಿ ಪಡೆದು, 2015 ರ ವರೆಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. 2015 ರಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಬಡ್ತಿ ಪಡೆದಿದ್ದು, 2016 ರಲ್ಲಿ ನೊಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪಬ್ಲಿಕ್ ಹೆಲ್ತ್ ಡಿಪಾರ್ಟಮೆಂಟ್ ಗೆ ವರ್ಗಾವಣೆಯಾಗರುತ್ತಾರೆ.

2018 ರಲ್ಲಿ ಸೂಪರಿಡೆಂಟೆಂಟ್ ಇಂಜಿನಿಯರ್ ಆಗಿ ಬಡ್ತಿ ಪಡೆದು ಮೇ. 31, 2018 ರಂದು ಸೇವೆಯಿಂದ ನಿವೃತ್ತಿಯಾಗಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದಾರೆ. ಮಂಜುನಾಥ್ ಅವರು ಪ್ರಸ್ತತ ತನ್ನ ಪತ್ನಿ ಶ್ರೀಮತಿ ಉಮಾದೇವಿ ಅವರೊಂದಿಗೆ ನಂ. 48, 1ನೇ ಐ ಅಡ್ಡರಸ್ತೆ, 8 ನೇ ಮುಖ್ಯ ರಸ್ತೆ, ಶಾರದಾ ಕಾಲೋನಿ, ಬಸವೇಶ್ವರನಗರ 3 ನೇ ಹಂತ, 4 ನೇ ಬ್ಲಾಕ್ ನಲ್ಲಿ ವಾಸವಾಗಿರುತ್ತಾರೆ. ಸದರಿ ಮಂಜುನಾಥ್ ನಿವೃತ್ತಿ ನಂತರವೂ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದು, ಈಗಲೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಇವರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆಯನ್ನು ದಂಧೆಯನ್ನಾಗಿ ರೂಪಿಸಿಕೊಂಡಿದ್ದಾರೆ. ತನ್ನ ಅಣತಿಗೆ ಬಾರದ ಅಧಿಕಾರಿಗಳನ್ನು ಹೆದರಿಸಿ ಭಯ ಹುಟ್ಟಿಸಿ, ದುರುದ್ದೇಶ ಪೂರ್ವಕವಾಗಿ ಅಮಾನತು ಪಡಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ.

ಮಾತ್ರವಲ್ಲ, ಎಸಿಬಿ, ಲೋಕಾಯುಕ್ತ ತನಿಖಾ ಸಂಸ್ಥೆ ಸಂಸ್ಥೆ ಹಾಗೂ ಕಂದಾಯ ಸಚಿವರಾದ ಆರ್. ಅಶೋಕ್ ಹೆಸರಿನಲ್ಲಿ ಅಧಿಕಾರಿಗಳಿಗೆ ಹೆದರಿಸಿ ಅಕ್ರಮವಾಗಿ ಹಣವನ್ನು ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಈಗಾಗಲೇ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದಿನಾಂಕ 19-02-2022 ರಂದು ದೂರು ನೀಡಿದ್ದು, ಸ್ವೀಕೃತಿ ಸಂಖ್ಯೆ ಎಸಿಬಿ ಬೆಂ.ನಗರ ಸ್ವೀಕೃತಿ/1517/2022 ಆಗಿರುತ್ತದೆ. ವರ್ಗವಣೆ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರಿಗೆ ಸರ್ಕಾರ ಮಂಜೂರು ಮಾಡಿರುವ ಶಾಸಕರ ಭವನ ಕೊಠಡಿ ಸಂಖ್ಯೆ 275 ರಲ್ಲಿ ಮೂರು ವರ್ಷದಿಂದ ವಾಸ್ತವ್ಯ ಹೂಡಿ ಮಂಜುನಾಥ್ ಅಲ್ಲಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳನ್ನು ಹೆದರಿಸಿ ಹಣ ಪಡೆರುತ್ತಾರೆ. ಈ ಕುರಿತು ಮೊದಲ ದೂರಿನಲ್ಲಿ ಸಮಗ್ರವಾಗಿ ವಿವರಿಸಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುವ ವೇಳೆ ಕೆಲವರು ಸಾಕ್ಷಿ ನುಡಿಯಲು ಒಪ್ಪಿರುತ್ತಾರೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ಹೆದರಿಸಿ ಅಕ್ರಮವಾಗಿ ಹಣ ಸಂಗ್ರಹಿಸಿ ಮಂಜುನಾಥ್ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ. ಸದರಿ ಮಂಜುನಾಥ್ ಅವರು ಸರ್ಕಾರಿ ಸೇವೆಯಲ್ಲಿರುವಾಗ ಸರ್ವೀಸ್ ಪುಸ್ತಕದಲ್ಲಿ ಪಿತ್ರಾರ್ಜಿತ ಆಸ್ತಿ ಬಗ್ಗೆ ಯಾವುದೇ ಮೂಲ ಕಂಡು ಬಂದಿರುವುದಿಲ್ಲ. ಆದರೆ, ಮಂಜುನಾಥ್ ತಾಯಿ ಮತಿ ಜಿ. ಲಕ್ಷ್ಮಮ್ಮ ಪತ್ನಿ ಉಮಾದೇವಿ, ಪುತ್ರಿ ವರ್ಷಾ ಹೆಸರಿನಲ್ಲಿ 30 ಕೋಟಿ ರೂಪಾಯಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ವಕೀಲ ಹೋಳೇ ಬಸಪ್ಪ ಹಾಳಕೇರಿ ದೂರು ಸಲ್ಲಿಸಿದ್ದರು.

Share