Connect with us


      




ವಿದೇಶ

ಆಫ್ಘಾನ್ ಆಹಾರ ಪರಿಸ್ಥಿತಿ ಕಳವಳಕಾರಿ; ಚರ್ಚೆ

Kumara Raitha

Published

on

ಕಾಬೂಲ್, ನ.8 (ಯುಎನ್‌ಐ/ಸ್ಪುಟ್ನಿಕ್) ದಿನದಿಂದ ದಿನಕ್ಕೆ ಆಫ್ಘಾನೀಸ್ತಾನದ ಆಹಾರ ಭದ್ರತೆ ಪರಿಸ್ಥಿತಿ ಕಳವಳಕಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರದ ಪ್ರತಿಇಧಿಗಳು ವಿಶ್ವಸಂಸ್ಥೆ ಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ತಾಲಿಬಾನ್‌ನ ಎರಡನೇ ಉಪ ಪ್ರಧಾನ ಮಂತ್ರಿ ಅಬ್ದುಲ್ ಸಲಾಂ ಹನಾಫಿ ಅವರು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಮುಖ್ಯಸ್ಥ ಡೇವಿಡ್ ಬೀಸ್ಲಿ ಅವರನ್ನು ಕಾಬೂಲ್‌ನಲ್ಲಿ ಭೇಟಿಯಾದರು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಜನಸಂಖ್ಯೆಯಲ್ಲಿ ಅಧಿಕ ಮಂದಿಯ ಆಹಾರ ಭದ್ರತೆ ಪರಿಸ್ಥಿತಿ ಕಳವಳಕಾರಿಯಾಗಿದೆ. ಸಂಭವಿಸಬಹುದಾದ ದುರಂತ ತಡೆಯಲು, ದುಸ್ಥಿತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಡಬ್ಲ್ಯುಎಫ್‌ಪಿ ಮುಖ್ಯಸ್ಥರು ಹೇಳಿದರು.

ಮಾನವೀಯ ನೆರವು, ಪುನರ್ನಿರ್ಮಾಣ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಸಹಾಯದ ಅಗತ್ಯವಿರುವ ಕಡೆಗಳಲ್ಲಿ ಯುಎನ್ ಏಜೆನ್ಸಿಗಳೊಂದಿಗೆ ಸಹಕರಿಸಲು ಅಫ್ಘಾನಿಸ್ತಾನ ಸಿದ್ಧವಾಗಿದೆ ಎಂದು ಹನಾಫಿ ವಿವರಿಸಿದರು.

ನವೆಂಬರ್ 4 ರಂದು, ಡಬ್ಲ್ಯುಎಫ್‌ಪಿ  ಅಫ್ಘಾನಿಸ್ತಾನದ ಬಡ ಕುಟುಂಬಗಳಿಗೆ ಹಣವನ್ನು ವಿತರಿಸಲು ಪ್ರಾರಂಭಿಸಿತು. ಹಾಲಿ ಇರುವ ಆರ್ಥಿಕ ಬಿಕ್ಕಟ್ಟಿನ್ನು ಪರಿಹರಿಸುವ ನಿಟ್ಟಿನಲ್ಲಿ ಅಲ್ಲಿನ ಜನಸಂಖ್ಯೆಗೆ ಸಹಾಯ ಮಾಡಲು ಮತ್ತು ದೇಶದಲ್ಲಿ ಬಡತನವನ್ನು ನಿಭಾಯಿಸಲು ಸಂಸ್ಥೆಯು ಕಡಿಮೆ-ಆದಾಯದ ಕುಟುಂಬಗಳಿಗೆ ತಿಂಗಳಿಗೆ 3,500 ಆಫ್ಘನ್ ಅಫ್ಘಾನಿಗಳನ್ನು (ಸುಮಾರು $38) ಒದಗಿಸುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಸುಮಾರು 4,000 ಕುಟುಂಬಗಳು ಡಬ್ಲ್ಯುಎಫ್‌ಪಿ ಪಾವತಿಗಳಿಗೆ ಅರ್ಹತೆ ಪಡೆಯುತ್ತವೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ, ದೇಶದ ತನ್ನ ಆರ್ಥಿಕ, ಆಹಾರ ಪರಿಸ್ಥಿತಿಗಳು ಹದಗೆಟ್ಟ ವಾತಾವರಣದಲ್ಲಿವೆ.

Share