Connect with us


      




ದೇಶ

ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ಸರ್ಕಾರ: ರೈತರ ಹೋರಾಟ ಅಂತ್ಯ

Bindushree Hosuru

Published

on

ನವದೆಹಲಿ: ಡಿ. 09 (ಯುಎನ್ಐ) ದೆಹಲಿಯ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದ ರೈತರು ಗುರುವಾರ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ. ಮೋದಿ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ಹಿನ್ನೆಲೆ ಸಂಯುಕ್ತ ಕಿಸಾನ್​​ ಮೋರ್ಚಾ ಪ್ರತಿಭಟನೆ ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.

ನಮ್ಮ ಬೇಡಿಕೆಗಳಿಗೆ ಕೇಂದ್ರ ಸಮ್ಮತಿಸಿರುವುದರಿಂದ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡ ಗುರ್ನಾಮ್ ಸಿಂಗ್ ಚಧುನಿ ಹೇಳಿದ್ದಾರೆ.

ಕೇಂದ್ರವು ತನ್ನ ಭರವಸೆಯಿಂದ ಹಿಂದೆ ಸರಿದರೆ ಪ್ರತಿಭಟನೆಯನ್ನು ಪುನರಾರಂಭಿಸಬಹುದು ಎಂದು ಅವರು ಹೇಳಿದರು. ಎಸ್‌ಕೆಎಂ ಮಾಸಿಕ ಪರಿಶೀಲನಾ ಸಭೆಗಳನ್ನು ನಡೆಸಿ ಅದರಂತೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

500 ಕ್ಕೂ ಹೆಚ್ಚು ಸಂಘಟನೆಗಳು ಈ ನಿರಂತರ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ತಪ್ಪು ಮಾಹಿತಿ ಅಭಿಯಾನ, ಕೋವಿಡ್, ಹವಾಮಾನ ಬದಲಾವಣೆ, ಚಳಿಗಾಲ ಮತ್ತು ಬೇಸಿಗೆ ಎಲ್ಲಾವನ್ನು ನಾವು ಎದುರಿಸಿದ್ದೇವೆ. ಆದರೂ ನಾವು ಯುದ್ಧದಲ್ಲಿ ಗೆದ್ದಿದ್ದೇವೆ ಎಂದು ಅಖಿಲ ಭಾರತ ಕಿಸಾನ್ ಸಭಾಧ್ಯಕ್ಷ ಅಶೋಕ್ ಧಾವಳೆ ಹೇಳಿದರು.

ಡಿಸೆಂಬರ್ 10ರಂದು ಶೋಕ ದಿನವನ್ನಾಗಿ ಆಚರಿಸಲಾಗುವುದು ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.

ಡಿಸೆಂಬರ್ 11 ರಂದು, ರೈತರು ಸಿಂಗು ಗಡಿಯನ್ನು ತೊರೆದು ಮನೆಗೆ ಮರಳಲು ಪ್ರಾರಂಭಿಸುತ್ತಾರೆ. ಎರಡು ದಿನಗಳ ನಂತರ, ಅವರು ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಹೋಗುತ್ತಾರೆ.

ಡಿಸೆಂಬರ್ 15 ರೊಳಗೆ ಪಂಜಾಬ್‌ನಲ್ಲಿ ಎಲ್ಲಾ ರೈತರ ಪ್ರತಿಭಟನೆಗಳು ಮುಕ್ತಾಯಗೊಳ್ಳಲಿವೆ.

ಜನವರಿ 15 ರಂದು, ಪ್ರತಿಭಟನೆಯ ನೇತೃತ್ವದ ರೈತ ಸಂಘಗಳ ಸಂಸ್ಥೆಯಾದ ಎಸ್‌ಕೆಎಂ ದೆಹಲಿಯಲ್ಲಿ ಮತ್ತೊಮ್ಮೆ ಸಭೆ ಸೇರಲಿದೆ. ಈ ಸಭೆಯಲ್ಲಿ ಕೇಂದ್ರ ನೀಡಿದ ಭರವಸೆಗಳನ್ನು ಈಡೇರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ರೈತರು ಪರಿಶೀಲಿಸಲಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದರು. ಕೇಂದ್ರದ ಪತ್ರವು ಕೇಂದ್ರ ಮತ್ತು ಎಸ್‌ಕೆಎಂ ಒಪ್ಪಿದ ಎಲ್ಲಾ ಷರತ್ತುಗಳನ್ನು ಉಲ್ಲೇಖಿಸುತ್ತದೆ ಎಂದು ಅವರು ಹೇಳಿದರು.

ರೈತರ ಬೇಡಿಕೆಗಳೇನು?

ಕೃಷಿ ಸುಧಾರಣೆಗಾಗಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ 2020 ರಲ್ಲಿ ರೈತರ ಪ್ರತಿಭಟನೆ ಪ್ರಾರಂಭವಾಯಿತು. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿ ಗಡಿಗಳನ್ನು ತಲುಪಿ ಅಲ್ಲಿಯೇ ಬೀಡು ಬಿಟ್ಟಿದ್ದರು.

ಕಳೆದ ತಿಂಗಳು, ಮೂರು ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಅದರ ಪ್ರಕಾರ, ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಿಂದ ಅವುಗಳನ್ನು ಹಿಂತೆಗೆದುಕೊಳ್ಳಲಾಯಿತು.

ತಮ್ಮ ಪ್ರಮುಖ ಬೇಡಿಕೆಯನ್ನು ಅಂಗೀಕರಿಸಿದ ಪ್ರತಿಭಟನಾನಿರತ ರೈತರು, ಕೇಂದ್ರ ಸರ್ಕಾರವು ಇತರ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ನಮ್ಮ ಪ್ರತಿಭಟನೆ ಕೊನೆಗೊಳಿಸುವುದಾಗಿ ಹೇಳಿದ್ದರು. ಇದರಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಇತರವುಗಳನ್ನು ಒಳಗೊಂಡಿತ್ತು.

ಕಳೆದೆರಡು ದಿನಗಳಿಂದ ರೈತರ ಪರವಾಗಿ ಕೇಂದ್ರದೊಂದಿಗೆ ಮಾತುಕತೆ ನಡೆಸಲು ಐವರು ಸದಸ್ಯರ ಎಸ್‌ಕೆಎಂ ಸಮಿತಿ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು.

ಹೆಚ್ಚುಕಮ್ಮಿಯಾಗಿ ಸರ್ಕಾರ ಎಲ್ಲಾ ರೈತರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯನ್ನು ಕೊನೆಗೊಳಿಸಲು ಮುಂದಾಗಿದ್ದಾರೆ.

Continue Reading
Share