Connect with us


      
ಕೃಷಿ

ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆ ಡಿಪ್ಲೊಮಾ ಶಿಕ್ಷಣ ಉದ್ಘಾಟನೆ

Kumara Raitha

Published

on

ಬೆಂಗಳೂರು: ಜೂನ್‌ ೨೭ (ಯು.ಎನ್.‌ಐ.) ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ, ವಿಸ್ತರಣಾ ನಿರ್ದೇಶನಾಲಯ,  ಹೈದರಾಬಾದ್ ಮ್ಯಾನೇಜ್ ಸಂಸ್ಥೆ ಮತ್ತು ರಾಜ್ಯ ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ಕೃಷಿ ಪರಿಕರ ಮಾರಾಟಗಾರರಿಗೆÀ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ (ದೇಸಿ) ಉದ್ಘಾಟನಾ ಸಮಾರಂಭ ಇಂದು ಜರುಗಿತು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ (ಜಿಕೆವಿಕೆ)  ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲದ ವಿಸ್ತರಣಾ ನಿರ್ದೇಶಕ ಡಾ. ಕೆ. ನಾರಾಯಣ ಗೌಡ ವಹಿಸಿದ್ದರು. ಅವರು ಮಾತನಾಡಿ ” ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ರೈತಪರ ಕಾರ್ಯಕ್ರಮಗಳಲ್ಲಿ ದೇಸಿ ಕಾರ್ಯಕ್ರಮವು ಅತ್ಯುತ್ತಮ ಕಾರ್ಯಕ್ರಮ. ಅಭಿವೃದ್ಧಿ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಕೃಷಿ ಪರಿಕರ ಉದ್ದಿಮೆದಾರರು ಸ್ಥಳೀಯ ಪ್ಯಾರಾ ವಿಸ್ತರಣಾ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವುದರಿಂದ ಈ ಕೊರತೆಯನ್ನು ನೀಗಿಸಬಹುದು. ಜೊತೆಗೆ ತಮ್ಮ ವಿದ್ಯಾರ್ಹತೆಯನ್ನು ಸಹ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ “ಎಂದರು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಕುಲಸಚಿವ. ಬಸವೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತಾ ” ಭಾರತದಲ್ಲಿ ಸುಮಾರು ೨.೮೨ ಲಕ್ಷ ಕೃಷಿ ಪರಿಕರಗಳ ಮಾರಾಟಗಾರರಿದ್ದಾರೆ, ಅವರು ರೈತ ಸಮುದಾಯಕ್ಕೆ ಕೃಷಿ ಮಾಹಿತಿಯ ಪ್ರಧಾನ ಮೂಲವಾಗಿದ್ದಾರೆೆ. ರೈತರಿಗೆ ಮೊದಲ ಸಂಪರ್ಕ ಕೇಂದ್ರವೆಂದರೆ ಕೃಷಿ ಪರಿಕರಗಳ ಮಾರಾಟಗಾರರು. ರೈತರು ಯಾವುದೇ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿವಿಧ ಪರಿಕರಗಳನ್ನು ಖರೀದಿಸುವಾಗ ನೇರವಾಗಿ ಕೃಷಿ ಪರಿಕರ ಮಾರಾಟಗಾರರನ್ನು ಅವಲಂಬಿಸಿರುತ್ತಾರೆ. ಆದರೆ, ಈ ಪರಿಕರ ಮಾರಾಟಗಾರರಿಗೆ ಯಾವುದೇ ಕೃಷಿ ಶಿಕ್ಷಣವಿರುವುದಿಲ್ಲ ಎಂದರು.

ಈ ದಿಶೆಯಲ್ಲಿ ಅಗತ್ಯವಾದ ಜ್ಞಾನವನ್ನು ಒದಗಿಸಲು ೨೦೦೩ರಲ್ಲಿ ಹೈದ್ರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಸಹಯೋಗದಲ್ಲಿ  ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿಒಂದು ವರ್ಷದ ಡಿಪ್ಲೋಮಾ ಕೋರ್ಸ್ನ್ನು ಡಿಪ್ಲೊಮಾ (ದೇಸಿ) ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಉದ್ದೇಶಗಳೆನೆಂದರೆ  ಕ್ಷೇತ್ರ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯಾವಾಗುವಂತೆ ಪ್ಯಾರ-ವಿಸ್ತರಣಾ ವೃತ್ತಿಪರರಾನ್ನಾಗಿ ಪರಿವರ್ತಿಸುವುದು. ಕೃಷಿ ಪರಿಕರ ಮಾರಾಟಗಾರರ ಸಾಮಾರ್ಥ್ಯ ಬಲವರ್ಧನೆ. ಕೃಷಿ ನಿಯಮ/ಕಾನೂನುಗಳ ಜ್ಞಾನವನ್ನು ಹೆಚ್ಚಿಸುವುದು. ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿ ಕೃಷಿ ಮಾಹಿತಿಯನ್ನು ಒದಗಿಸುವಂತೆ ಮಾಡುವುದು ಎಂದು ವಿವರಿಸಿದ ಅವರು ಇದುವರೆಗೆ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿಂದ  ೫೨೮೨ ಅಭ್ಯರ್ಥಿಗಳು ದೇಸೀ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿನ ಸಿಬ್ಬಂದಿ ತರಬೇತಿ ಘಟಕ ಹಾಗೂ ಹಿರಿಯ ವಾರ್ತಾತಜ್ಞರಾದ ಡಾ. ಕೆ. ಶಿವರಾಮು ಅವರು  ಪ್ರಾಸ್ಥವಿಕವಾಗಿ ಮಾತನಾಡಿದರು. ” ದೇಸಿ ಕಾರ್ಯಕ್ರಮದಲ್ಲಿ ಕರ್ನಾಟಕದ ಕೃಷಿ ಪರಿಸರದ ಪರಿಸ್ಥಿತಿಗಳು ಮತ್ತು ಉತ್ಪಾದನಾ ಪದ್ಧತಿಗಳು, ಮಣ್ಣು ಪರೀಕ್ಷೆ, ಸಮಸ್ಯಾತ್ಮಕ ಮಣ್ಣುಗಳು ಮತ್ತು ಅವುಗಳ ನಿರ್ವಹಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಜಲಾನಯನ ನಿರ್ವಹಣೆ, ನೀರಾವರಿಯ ತತ್ವಗಳು ಮತ್ತು ಪದ್ಧತಿಗಳು, ಸೂಕ್ಷ್ಮ ನೀರಾವರಿ ಪದ್ಧತಿಗಳು, ಸಮಗ್ರ ಕಳೆ ನಿರ್ವಹಣೆ, ಕೃಷಿ ಯಾಂತ್ರೀಕರಣ, ಸಮಗ್ರ ಪೀಡೆ ನಿರ್ವಹಣೆ, ನಿಖರ ಬೇಸಾಯ, ತಾರಸಿ ತೋಟಗಾರಿಕೆ, ಜಲ ಕೃಷಿ ಮತ್ತು ಸಂವಹನ ಕೌಶಲ್ಯಗಳು ಬಗ್ಗೆ ಉಪನ್ಯಾಸ, ಕ್ಷೇತ್ರ ಭೇಟಿ ಮತ್ತು ಶೈಕ್ಷಣಿಕ ಪ್ರವಾಸಗಳ ಮೂಲಕ ಜ್ಞಾನ ಮತ್ತು ಕೌಶಲ್ಯಕ್ಕೆ ಒತ್ತು ನೀಡಿ ತರಬೇತಿಯನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ  ಡಾ. ವಿನೋದಮ್, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೃಷಿ ಇಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕರುಗಳಾದ ಸಿ.ವಿ. ವೆಂಕಟೇಶಮೂರ್ತಿ, ಡಾ. ಹೆಚ್. ಕೆ. ರಾಮಪ್ಪ  ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ೩೫ ಜನ ದೇಸಿ ಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Share