Connect with us


      
ರಂಗಭೂಮಿ

ನಾಟಕವಾಗುತ್ತಿದ್ದಾಳೆ ‘ಅಕ್ಕಯ್’

UNI Kannada

Published

on

ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿಯ ಬದುಕೀಗ ನಾಟಕ ರೂಪ ಪಡೆದುಕೊಂಡಿದೆ.
  • ವಿಶೇಷ ವರದಿ:ಸಂಧ್ಯಾ ಉರಣ್‌ಕರ್

ಬೆಂಗಳೂರು,ಜನವರಿ.04(ಯು.ಎನ್.ಐ)ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ “‌ ಡಾ.ಅಕ್ಕಯ್ ಪದ್ಮಶಾಲಿ” ಜೀವನ ಪ್ರೀತಿಯ ಕುರಿತು ಪ್ರೇರಣಾತ್ಮಕವಾಗಿ ಮಾತನಾಡುವ ಅಕ್ಕಯ್ ಅಕ್ಕನ್ನ ಬದುಕೀಗ ನಾಟಕ ರೂಪ ಪಡೆದುಕೊಂಡಿದೆ‌. ಹೌದು, ಅಕ್ಕಯ್ ಈಗ ನಾಟಕವಾಗುತ್ತಿದ್ದಾಳೆ.
ಆತ್ಮಕಥನವಾಗಿದ್ದ ಅಕ್ಕಯ್ ಪದ್ಮಶಾಲಿ ಬದುಕು ನಾಟಕವಾಗುತ್ತಿದೆ.

ತಾನೊಬ್ಬಳು ಹೆಣ್ಣು ಎಂದು ಘೋಷಿಸುವ ಮೂಲಕ ವಾಹನ ಚಾಲನಾ ಪರವಾನಗಿ ಪತ್ರವನ್ನು ಪಡೆದುಕೊಂಡ ದೇಶದ ಏಕೈಕ ವ್ಯಕ್ತಿಯಾಗಿರುವ ವಾಸು ಎನ್ನವ ತೃತೀಯಲಿಂಗಿಯೊಬ್ಬರಿಗೆ ಕರ್ನಾಟಕದಲ್ಲಿ ವಿವಾಹ ನೋಂದಣಿ ಮೂಲಕ ಮದುವೆಯಾದ ಮೊದಲ ಮಹಿಳೆಯೂ ಆಗಿರುವ ಅಕ್ಕಯ್ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕಾಗಿ ಅವರು ‘ಒಂದೆಡೆ’ ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದಾರೆ. ಅಕ್ಕಯ್ ಬದುಕನ್ನು ನಾಟಕರೂಪದಲ್ಲಿ ತೆರೆದಿಡುತ್ತಿದ್ದಾರೆ, ಸಾಹಿತಿ ಬೇಲೂರು ರಘುನಂದನ್. ಕಾಜಾಣ ಮತ್ತು ಸಾತ್ವಿಕ ರಂಗಪಯಣ ತಂಡದಿಂದ 15 ಮಂದಿಗಳ ತಂಡ ಕೆಲಸ‌ ಮಾಡಿದ್ದು, ಕೃಷ್ಣಮೂರ್ತಿ‌ ಕವತ್ತಾರ್ ನಾಟಕ ರಚಿಸುತ್ತಿದ್ದಾರೆ.

“ಅಕ್ಕಯ್” ಏಕ ವ್ಯಕ್ತಿ ನಾಟಕವಾಗಿದ್ದು, ರಂಗಕರ್ಮಿ ನಯನಾ ಸೂಡ ಅಕ್ಕಯ್ ಪಾತ್ರಕ್ಕೆ ಬಣ್ಣ ತುಂಬಿ ರಂಗದ ಮೇಲೆ ಚೆಲ್ಲಲು ಸಿದ್ಧವಾಗಿದ್ದಾರೆ. ಸಾತ್ವಿಕ ರಂಗಪಯಣ ತಂಡದಿಂದ ಅಕ್ಕಯ್ ನಾಟಕದ ಪೋಸ್ಟ‌ರನ್ನು ಬಿಡುಗಡೆಗೊಳಿಸಿದ್ದು, ಖುದ್ದು ಅಕ್ಕಯ್ ಪದ್ಮಶಾಲಿ, ಬೇಲೂರು ರಘುನಂದನ್ ಸೇರಿದಂತೆ ಮತ್ತಿತರ ರಂಗಕರ್ಮಿಗಳು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಕ್ಕಯ್ ನಾಟಕಕ್ಕೆ ಸಾಕ್ಷಿಯಾದರು.

ಅಕ್ಕಯ್ ಪದ್ಮಶಾಲಿಯವರಿಗೆ ಲಿಂಗ ಸಮಾನತೆಯ ಇವರ ಹೋರಾಟಗಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶಾಂತಿ ಹಾಗೂ ಶಿಕ್ಷಣಕ್ಕಾಗಿ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿಯು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇನ್ನು ಅಕ್ಕಯ್ ಪದ್ಮಸಾಲಿ ಅವರ ಆತ್ಮಕಥನ-ಅಕ್ಕಯ್. ಲೇಖಕ ಡಾ. ಡಿ. ಡೊಮಿನಿಕ್ ಅವರು ನಿರೂಪಿಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ನೋವನ್ನು ಸ್ವತಃ ಅನೂಭವಿಸಿದ ಲೇಖಕಿ ಅಕ್ಕಯ್ ಪದ್ಮಶಾಲಿ ಅವರು, ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ಪ್ರತಿ ಹಂತದಲ್ಲೂ ಸಮಾಜದ ವಿವಿಧೆಡೆಯಿಂದ ಬಂದ ಎಲ್ಲ ಬಗೆಯ ಅವಮಾನಕರ, ಹೀನಾಯ ಆರೋಪಗಳನ್ನು ಎದುರಿಸಿದ ಬಗೆಯನ್ನು ವಿವರಿಸಿದ್ದಾರೆ.

ಅಕ್ಕಯ್ ಆತ್ಮಕಥನ ಅಕ್ಕಯ್ ಬದುಕಿನ ಸ್ಫೂರ್ತಿಯೇ ನಾಟಕ ರಚನೆಗೆ ಕಾರಣ ಎಂದು ಬೇಳೂರು ರಘುನಂದನ್ ಹೇಳಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಬದುಕು, ಹೋರಾಟದ ಹಾದಿ ಆತ್ಮಕಥನದಲ್ಲಿ ಅಕ್ಷರವಾಗಿದ್ದರೆ ಅಕ್ಕಯ್ ನಾಟಕ ಬಣ್ಣ ತುಂಬಿ ಭಾವ ಮೂಡಿಸಲಿದೆ. ಫೆಬ್ರವರಿಯಲ್ಲಿ ಮೊದಲ ಪ್ರದರ್ಶನ ಕಾಣಲಿದ್ದಾಳೆ ಅಕ್ಕಯ್.

Share