Connect with us


      
ಕರ್ನಾಟಕ

ಅಮೃತ ನಗರೋತ್ಥಾನ ಯೋಜನೆಗೆ 3885 ಕೋಟಿ ರೂ. ಹಂಚಿಕೆ: ಸಚಿವ ಎಂ.ಟಿ.ಬಿ.ನಾಗರಾಜು ಸಂತಸ

Vanitha Jain

Published

on

ಬೆಂಗಳೂರು: ಜನೆವರಿ 07 (ಯು.ಎನ್.ಐ.) ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ 3885 ಕೋಟಿ ರೂಪಾಯಿಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ತೀವ್ರ ವೇಗದ ನಗರೀಕರಣವಿರುವ ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಮೂಲಸೌಲಭ್ಯ ಕೊರತೆಯನ್ನು ನೀಗಿಸಲು ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್. ನಾಗರಾಜು ಎಂ.ಟಿ.ಬಿ ಅಭಿಪ್ರಾಯಪಟ್ಟಿದ್ದಾರೆ.

ಅಮೃತ ನಗರೋತ್ಥಾನ ಯೋಜನೆಗೆ 3885 ಕೋಟಿ ರೂಪಾಯಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿಗಳಿಗೆ ಸಚಿವ ಎನ್. ನಾಗರಾಜು ಎಂ.ಟಿ.ಬಿ ಕೃತಜ್ಞತೆ ಸಲ್ಲಿಸಿದ್ದು, ಈ ಯೋಜನೆಯಿಂದ ನಗರ ಮತ್ತು ಪಟ್ಟಣಗಳಲ್ಲಿ ಪೌರ ಸೇವೆಗಳನ್ನು ಮೇಲ್ದರ್ಜೇಗೇರಿಸುವುದು ಮತ್ತು ವಿಸ್ತರಿಸುವುದು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯಿಂದ 23 ಜಿಲ್ಲಾ ಕೇಂದ್ರದ ನಗರ ಸಭೆಗಳು ಮತ್ತು 1ನೇ ದರ್ಜೆಯ ನಗರ ಸಭೆಗಳಿಗೆ ತಲಾ 40 ಕೋಟಿ ರೂಪಾಯಿಗಳಂತೆ ಒಟ್ಟು 920 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಉಳಿದ 38 ನಗರ ಸಭೆಗಳಿಗೆ ತಲಾ 30 ಕೋಟಿ ರೂಪಾಯಿಗಳಂತೆ 1140 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

124 ಪುರಸಭೆಗಳಿಗೆ ತಲಾ 10 ಕೋಟಿ ರೂಪಾಯಿನಂತೆ 1240 ಕೋಟಿ ರೂಪಾಯಿ ಹಾಗೂ 117 ಪಟ್ಟಣ ಪಂಚಾಯಿತಿಗಳಿಗೆ ತಲಾ 5 ಕೋಟಿ ರೂಪಾಯಿಗಳಂತೆ 585 ಕೋಟಿ ರೂಪಾಯಿ ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಕಾಮಗಾರಿಯ ಕನಿಷ್ಠ ಮೊತ್ತ 1 ಕೋಟಿ ರೂಪಾಯಿಗಳು, ಪುರಸಭೆ ವ್ಯಾಪ್ತಿಯಲ್ಲಿ 5೦ ಲಕ್ಷ ರೂಪಾಯಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25ಲಕ್ಷ ರೂ.ಗಳಿಗೆ ಕಡಿಮೆಯಿಲ್ಲದಂತೆ ಪ್ರತಿ ಕಾಮಗಾರಿಯ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಕಾಲ ಮಿತಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ಸಾಧ್ಯವಾಗಲಿದೆ ಎಂದು ಸಚಿವ ಎಂ.ಟಿ.ಬಿ ನಾಗರಾಜು ಹೇಳಿದ್ದಾರೆ.

Share