Connect with us


      
ರಾಜಕೀಯ

ಅದ್ಭುತವಾದ ನೆನಪಿನ ಶಕ್ತಿ ಅನಂತ್ ಕುಮಾರ್ ಅವರಲ್ಲಿದ್ದಿತ್ತು: ನಳೀನ್ ಕುಮಾರ್ ಕಟೀಲ್

Vanitha Jain

Published

on

ಬೆಂಗಳೂರು: ಸೆಪ್ಟೆಂಬರ್ 22 (ಯು.ಎನ್.ಐ.) ಅನಂತ್ ಕುಮಾರ್ ಅವರಲ್ಲಿ ಅದ್ಭುತವಾದ ನೆನಪಿನಶಕ್ತಿ ಇದ್ದಿತ್ತು. ಎಷ್ಟೋ ವರ್ಷಗಳ ಹಿಂದೆ ನೋಡಿದ ಕಾರ್ಯಕರ್ತರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಕರೆಯುತ್ತಿದ್ದರು.ಇಂದಿನ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಬಿಟ್ಟರೆ ಈ ಅದ್ಭುತವಾದ ನೆನಪಿನ ಶಕ್ತಿ ಇದ್ದಿದ್ದು ಅನಂತ್ ಕುಮಾರ್ ಗೆ ಮಾತ್ರ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದರು.

ದಿವಂಗತ ಅನಂತಕುಮಾರ್ ಅವರ 63 ನೇ ಜನ್ಮದಿನಾಚರಣೆಯ ಅಂಗವಾಗಿ ಅನಂತ ಪ್ರೇರಣಾ ಕೇಂದ್ರ, ಅದಮ್ಯಚೇತನ, ಅನಂತ ಕುಮಾರ್ ಪ್ರತಿಷ್ಠಾನ ಆಯೋಜಿಸಿದ ‘1987-1997ರ ದಶಮಾನದಲ್ಲಿ ಅನಂತಕುಮಾರ್ ಒಡನಾಡಿಗಳಾಗಿದ್ದ ಪ್ರಮುಖ ಕಾರ್ಯಕರ್ತರ ಸಮಾವೇಶ’ ವಿವಿ ಪುರಂ ಕಾಲೇಜಿನ ಎದುರಿನಲ್ಲಿರುವ ಕರ್ನಾಟಕ ಜೈನ್ ಭವನದಲ್ಲಿ ಬಹಳ ಅದ್ಭುತವಾಗಿ ನಡೆಯಿತು. ಇನ್ನು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಮಾಜಿ ವಿಧಾನಸಭಾಧ್ಯಕ್ಷರಾದ ಡಿ.ಎಚ್ .ಶಂಕರಮೂರ್ತಿ, ವಿಶೇಷ ಅಹ್ವಾನಿತರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು, ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತ ಕುಮಾರ್ ಉಪಸ್ಥಿತರಿದ್ದರು.

ಇನ್ನು ಈ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಭಾ.ಜ.ಪ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ “ನಾನು ರಾಜಕೀಯಕ್ಕೆ ಪ್ರವೇಶ ಮಾಡಿದ ಮೇಲೆ ಅನಂತ್ ಕುಮಾರ್ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆ. ಅವರ ಆಚಾರ-ವಿಚಾರಗಳು ನನ್ನ ಮೇಲೆ ನನ್ನ ಸಾಕಷ್ಟು ಪ್ರಭಾವ ಬೀರಿದೆ. ಭಾಷಣ, ಇನ್ನೀತರ ವಿಚಾರಗಳ ಕುರಿತು ನಿರಂತರವಾಗಿ ಮಾರ್ಗದರ್ಶನ ಮಾಡಿದರು. ಅನಂತ್ ಕುಮಾರ್ ಅವರಲ್ಲಿ ಅದ್ಭುತವಾದ ನೆನಪಿನಶಕ್ತಿ ಇದ್ದಿತ್ತು. ಎಷ್ಟೋ ವರ್ಷಗಳ ಹಿಂದೆ ನೋಡಿದ ಕಾರ್ಯಕರ್ತರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಕರೆಯುತ್ತಿದ್ದರು. ಇಂದಿನ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಬಿಟ್ಟರೆ ಈ ಅದ್ಭುತವಾದ ನೆನೆಪಿನ ಶಕ್ತಿ ಇದ್ದಿದ್ದು ಅನಂತ್ ಕುಮಾರ್ ಅವರಿಗೆ. ಹಾಗೇ ಅವರಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸುವ ಹೃದಯ ಶ್ರೀಮಂತಿಕೆ ಇದ್ದಿತ್ತು.ಇನ್ನು ಸಂಸದೀಯ ಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಯಾವುದೇ ಗಲಾಟೆಗಳಿಲ್ಲದೇ ಅಧಿವೇಶನ ನಡೆಸಿದರು. ಇವರು ಸಂಸದೀಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅತೀ ಹೆಚ್ಚು ಬಿಲ್ ಪಾಸ್ ಆಗಿತ್ತು. ಸಮಸ್ಯೆಗಳಿದ್ದಾಗ ಸರ್ಕಾರವನ್ನು ನಡೆಸುವಷ್ಟು ಮಾನಸಿಕವಾಗಿ ಗಟ್ಟಿಯಾಗಿದ್ದರು” ಎಂದು ಹೇಳಿದರು.

ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು “ಅನಂತ್ ಕುಮಾರ್ ಅವರು ಭಾರತೀಯ ಜನತಾ ಪಾರ್ಟಿಗೆ ಬಂದು ಸೇರಿದಂತ ಸಂದರ್ಭದಲ್ಲಿ ನಾವ್ಯಾರು ಅಧಿಕಾರಕ್ಕೆ ಬರ್ತಿವಿ ಎಂಬ ಕಲ್ಪನೆ ಕೂಡ ಮಾಡಿರಲಿಲ್ಲ. ಇವತ್ತು ರಾಜ್ಯದಲ್ಲಿ ಸಂಘಟನೆಯ ಮುಖಾಂತರ ಬೆಳೆದು ಸರ್ಕಾರ ಬಂದಿರುವುದಕ್ಕೆ ಮತ್ತು ಕೇಂದ್ರದಲ್ಲಿ 25 ಜನ ಸಂಸದರು ಹೋಗಿ ಅಧಿಕಾರ ತಂದಿರುವುದಕ್ಕೆ ಆಗಿನ ಅನಂತ್ ಕುಮಾರ್ ಅವರ ಶ್ರಮ ಅತೀ ಹೆಚ್ಚು ಎಂದು ನಾನು ಖುಷಿಯಿಂದ ಹೇಳುತ್ತೇನೆ. ಅವರ ಸ್ನೇಹದಲ್ಲಿ ಯಾವುದೇ ಮುಚ್ಚುಮರೆಯಿರಲಿಲ್ಲ. ಕೇಂದ್ರದ ಪ್ರತಿಯೊಬ್ಬ ನಾಯಕರ ಜೊತೆಗೆ ನಮ್ಮ ಸಾಮಾನ್ಯ ಕಾರ್ಯಕರ್ತರ ಕೊಂಡಿಯಾಗಿ ಕೆಲಸ ಮಾಡಿಕೊಡುತ್ತಿದ್ದರು. ಸೋಲೆ ಇಲ್ಲದ ಸರದಾರ ಎಂದು ಅನಂತ್ ಕುಮಾರ್ ಅವರನ್ನು ಕರೆಯಬಹುದು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಅನಂತ್ ಕುಮಾರ್ ಬಗ್ಗೆ ಮಾತನಾಡಿದ ಮಾಜಿ ವಿಧಾನಸಭಾಧ್ಯಕ್ಷರಾದ ಡಿ.ಎಚ್ .ಶಂಕರಮೂರ್ತಿ “ಸವಾಲುಗಳನ್ನು ಎದುರಿಸುತ್ತಿದ್ದ ರೀತಿ ಇಂದಿನ ಯುವಕರಿಗೆ ಸ್ಪೂರ್ತಿದಾಯಕವಾದದ್ದು. ಪಕ್ಷವನ್ನು ಬೆಳೆಸುವ ಹಾಗೂ ಮುನ್ನೆಡಸುವ ಕನಸು, ಗುರಿ ಅವರಲ್ಲಿತ್ತು. ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಕೂಡ ಅನಂತ್ ಕುಮಾರಲ್ಲಿತ್ತು” ಎಂದರು.

“ನಾಯಕತ್ವಕ್ಕೆ ನಿಜವಾದ ಅರ್ಥವೆಂದರೆ ಅದು ಅನಂತ್ ಕುಮಾರ್. ಪಕ್ಷದ ಸಂಘಟನೆಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹೇಗೆ ಅದ್ಭುತವಾಗಿ ಸರಿದೂಗಿಸಿಕೊಂಡು ಹೋಗಬಹುದು ಎಂಬುದನ್ನು ಅನಂತ್ ಕುಮಾರ್ ಅವರಿಂದ ಕಲಿಯಬಹುದಾಗಿತ್ತು. ಜವ್ದಾರಿಯುತ ಸ್ಥಾನದಲ್ಲಿದ್ದರು ಪಕ್ಷದ ಸಂಘಟನೆಗೋಸ್ಕರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅನಂತ್ ಕುಮಾರ್ ಅವರಿಂದ ಕಲಿಯಬಹುದಾಗಿತ್ತು ಎಂದು ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಹೇಳಿದರು.

Share