Connect with us


      




ದೇಶ

ಜಾಮೀನು ಬೇಕಿದ್ದರೆ ವೈದ್ಯಕೀಯ ದಾಖಲೆ ಒದಗಿಸಿ: ಅನಿಲ್ ದೇಶ್ ಮುಖ್ ಗೆ ಕೋರ್ಟ್ ಸೂಚನೆ

Lakshmi Vijaya

Published

on

ಮುಂಬೈ: ಏಪ್ರಿಲ್ 08 (ಯು.ಎನ್.ಐ)  ವೈದ್ಯಕೀಯ ತುರ್ತುಸ್ಥಿತಿಯ ಆಧಾರದ ಮೇಲೆ ತಮ್ಮ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕೆಂದು ಕೋರಿ ಬಾಂಬೆ ಹೈಕೋರ್ಟ್ ಗೆ ಮನವಿ ಮಾಡಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ತುರ್ತು ಅರ್ಜಿ ವಿಚಾರಣೆಗೆ ಕೋರ್ಟ್ ನಿರಾಕರಿಸಿದೆ.

ಜೊತೆಗೆ ಅನಿಲ್ ದೇಶ್ ಮುಖ್ ಅವರಿಗೆ ತಮ್ಮ ಅನಾರೋಗ್ಯದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದ್ದು,  2 ವಾರಗಳವರೆಗೆ ವಿಚಾರಣೆಯನ್ನು ಮುಂದೂಡಿದೆ.

ಕಳೆದ ವರ್ಷ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರದಲ್ಲಿ ಅನಿಲ್ ದೇಶ್ ಮುಖ್ ವಿರುದ್ಧ ಮಾಡಿದ ಸುಲಿಗೆ ಆರೋಪದ ತನಿಖೆಗಾಗಿ ದೇಶಮುಖ್ ಅವರನ್ನು ಸಿಬಿಐ ಕಸ್ಟಡಿಗೆ ಪಡೆದುಕೊಂಡಿದೆ.

ಜಾಮೀನು ಅರ್ಜಿಯನ್ನು ವಿರೋಧಿಸಿ ಇಡಿ ತನ್ನ ಅಫಿಡವಿಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದೆ ಮತ್ತು ದೇಶಮುಖ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ, ಅವರು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷ್ಯವನ್ನು ಹಾಳುಮಾಡುತ್ತಾರೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಹೇಳಿದ್ದರು.

ಅಕ್ರಮ ಹಣ ವರ್ಗಾವಣೆ ಆರೋಪದಡಿ ನವೆಂಬರ್ 2021 ರಲ್ಲಿ ಇಡಿ ಯಿಂದ ಬಂಧಿಸಲ್ಪಟ್ಟ ದೇಶ್‌ಮುಖ್ ಅವರು ಮಾರ್ಚ್ 14 ರಂದು ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಹೈಕೋರ್ಟ್‌ಗೆ ಮೊರೆ ಹೋದರು. ವಿಶೇಷ ನ್ಯಾಯಾಲಯವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ದೇಶ್‌ಮುಖ್ ಅನಗತ್ಯ ಪ್ರಭಾವ ಬೀರಿರುವುದು ಮೇಲ್ನೋಟಕ್ಕೆ ತೋರುತ್ತಿದೆ ಎಂದು ಪರಿಗಣಿಸಿದೆ.

Share