Connect with us


      




ದೇಶ

ತಾಂತ್ರಿಕ ಸಮಸ್ಯೆಯಿಂದ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Iranna Anchatageri

Published

on

ಉನಾ/ಹಿಮಾಚಲಪ್ರದೇಶ: ಏಪ್ರಿಲ್ 04 (ಯು.ಎನ್.ಐ.) ಪಠಾಣ್‌ಕೋಟ್‌ ಏರ್‌ ಬೇಸ್‌ಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್‌ನಲ್ಲಿ ಹಠಾತ್‌ ದೋಷ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಉನಾದ ಗ್ಯಾಗ್ರೆಟ್ ವಿಧಾನಸಭಾ ಕ್ಷೇತ್ರದ ನಕಾರೊದಲ್ಲಿ ಇಳಿಸಲಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಗ್ಗೆ ಎಂದಿನಂತೆ ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಸೇನೆಯ ಹೆಲಿಕಾಪ್ಟರ್ ಆಕಾಶದಲ್ಲಿ ಸುತ್ತುತ್ತಿರುವುದು ಕಂಡುಬಂದಿತು. ಈ ಸಂದರ್ಭದಲ್ಲಿ ಕೆಲವೇ ಕ್ಷಣಗಳಲ್ಲಿ ಸೇನಾ ಹೆಲಿಕಾಪ್ಟರ್ ಖಾಲಿ ಮೈದಾನದಲ್ಲಿ ಇಳಿಯಿತು ಎಂದು ತಿಳಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಘಟನಾ ಸ್ಥಳದತ್ತ ಲಗ್ಗೆ ಇಟ್ಟರು. ಸ್ವಲ್ಪ ಸಮಯದ ಬಳಿಕ ಪೈಲಟ್ ಹೆಲಿಕಾಪ್ಟರ್‌ನಿಂದ ಹೊರಬಂದರು. ಹೆಲಿಕಾಪ್ಟರ್ ನಲ್ಲಿದ್ದವರಿಗೆ ಗ್ರಾಮಸ್ಥರು ನೀರು ಕೊಟ್ಟು ಉಪಚರಿಸಿದ್ದಾರೆ. ನಂತರ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷವಿರುವುದು ತಿಳಿದು ಬಂದಿದೆ. ಪೈಲಟ್ ತಕ್ಷಣವೇ ಪಠಾಣ್‌ಕೋಟ್‌ನಲ್ಲಿರುವ ತನ್ನ ಅಧಿಕಾರಿಗಳನ್ನು ಸಂಪರ್ಕಿಸಿದರು. ಆ ಬಳಿಕ ನಾಲ್ವರು ತಂತ್ರಜ್ಞರು ಸ್ಥಳಕ್ಕೆ ದೌಡಾಯಿಸಿದರು. ಈ ತುರ್ತು ಲ್ಯಾಂಡಿಂಗ್‌ನಲ್ಲಿ ಯಾರಿಗೂ ಗಾಯವಾಗಿಲ್ಲ.

Share